ಸಾರಾಂಶ
ಹಿರಿಯೂರು ನಗರದ ತಾಲೂಕು ಕಚೇರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕಬ್ಬಿಗೆ ಬೆಂಬಲ ಬೆಲೆ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹಿರಿಯೂರು
ಸರ್ಕಾರ ಕೂಡಲೇ ರೈತರ ಒಂದು ಟನ್ ಕಬ್ಬಿಗೆ 3500 ರು. ನಿಗದಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮನವಿ ನೀಡಿದ ನಂತರ ಮಾತನಾಡಿ, ಬೆಳಗಾಂ ಜಿಲ್ಲೆಯ ಕುರ್ಲಾಪುರ್ ಕ್ರಾಸ್ ಬಳಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಬೆಳೆದ ಕಬ್ಬಿಗೆ ಬೆಂಬಲ ಬೆಲೆ ನೀಡುವ ಬೇಡಿಕೆ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಕೀಟನಾಶಕ ಮತ್ತು ರೈತರ ಬಳಸುವ ಪರಿಕರಗಳ ಬೆಲೆ ದುಬಾರಿಯಾಗಿದೆ. ಇದರಿಂದ ಬಹುತೇಕ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ಹಿಡಿದಿದ್ದಾರೆ. ಒಂದು ಟನ್ ಕಬ್ಬಿನಿಂದ ಅನೇಕ ಉತ್ಪನ್ನಗಳ ಮೂಲಕ ಸರ್ಕಾರಗಳಿಗೆ ಬಹುದೊಡ್ಡ ಆದಾಯ ಬರುತ್ತದೆ. ಆದರೆ ಕಬ್ಬು ಬೆಳೆದ ರೈತರಿಗೆ ನಾನಾ ರೀತಿಯ ಮೋಸಗಳು ನಿರಂತರವಾಗಿ ನಡೆಯುತ್ತಿವೆ. ಈ ಹೋರಾಟದಲ್ಲಿ ತೊಡಗಿರುವ ರೈತರು ಸರ್ಕಾರದ ಮುಂದೆ ಇಟ್ಟಿರುವ ಎಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಈರಣ್ಣ, ದೊರೆ ಸ್ವಾಮಿ, ರಾಮಣ್ಣ, ರಾಮಕೃಷ್ಣಪ್ಪ, ಬಾಲಕೃಷ್ಣ, ಬಿ ಆರ್ ರಂಗಸ್ವಾಮಿ, ತಿಮ್ಮಯ್ಯ, ಲಕ್ಷ್ಮಣ, ತಿಪ್ಪೇಸ್ವಾಮಿ, ರವಿಕುಮಾರ್, ಶಶಿಧರ, ಮಂಜುನಾಥ್, ರಾಮಣ್ಣ, ಕರಿಯಪ್ಪ, ಗೋವಿಂದಪ್ಪ ಮುಂತಾದವರು ಹಾಜರಿದ್ದರು.