ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಆರಂಭದಲ್ಲಿ ಸುರಿದ ಅತಿವೃಷ್ಟಿಯಿಂದ ಬೆಳೆಗಳು ಸಸಿ ಹಂತದಲ್ಲೇ ಹಳದಿ ಹಾಗೂ ಕೆಂಪು ಬಣ್ಣಕ್ಕೆ ತಿರುಗಿ ಬೆಳೆ ನಾಶವಾಗುವ ಹಂತದಲ್ಲಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆನಷ್ಟ ಪರಿಹಾರ ಹಾಗೂ ಮಧ್ಯಂತರ ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಒತ್ತಾಯಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಜಿಟಿ ಜಿಟಿ ಮಳೆಯಿಂದ ಹಳದಿ ಹಾಗೂ ಕೆಂಪು ಬಣ್ಣಕ್ಕೆ ತಿರುಗಿ ಹಾನಿಯಾಗುವ ಸ್ಥಿತಿಯಲ್ಲಿವೆ. ಈ ನಡುವೆ ಮುಳ್ಳುಸಜ್ಜಿ ಮತ್ತು ಇತರೆ ಕಳೆ ನಿಯಂತ್ರಣವೇ ಕಷ್ಟಕರವಾಗಿದೆ. ಕೆಲವರು ಬೆಳೆಗಳನ್ನು ನಾಶಪಡಿಸಿ ಮತ್ತೆ ಬಿತ್ತನೆ ಮಾಡಲು ಮುಂದಾಗಿದ್ದಾರೆ.
ಹೀಗೆ ಪ್ರತಿವರ್ಷ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ನಲುಗುತ್ತಿದ್ದಾರೆ. ಹಾಗಾಗಿ ತಕ್ಷಣವೇ ಸರ್ಕಾರಗಳು ಬೆಳೆನಷ್ಟ ಪರಿಹಾರವಾಗಿ ₹20 ಸಾವಿರ ವಿಮಾ ಕಂತು ತುಂಬಿದ ರೈತರಿಗೆ ಮಧ್ಯಂತರ ಪರಿಹಾರ ಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿಯೇ ಅತಿ ಹೆಚ್ಚು ಹಾವೇರಿ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಖೇದಕರ. ಸರ್ಕಾರ ರೈತರ ಆತ್ಮಹತ್ಯೆ ತಡೆಯುವಲ್ಲಿ ಮುಂದಾಗಬೇಕೆಂದು ತಿಳಿಸಿದರು. ಜತೆಗೆ ಜಿಲ್ಲೆಯಲ್ಲಿ ನಾಲ್ಕು ನದಿಗಳು ಇದ್ದು, ಯಾವ ನದಿಗೂ ಚೆಕ್ ಡ್ಯಾಂ ಇಲ್ಲ, ಚೆಕ್ ಡ್ಯಾಂ ನಿರ್ಮಿಸಿ ನೀರಾವರಿ ಸೌಲಭ್ಯಕ್ಕೆ ಆದ್ಯತೆ ಕೊಡಿಸಬೇಕು ಎಂದರು.ಬೇಡ್ತಿ ಮತ್ತು ವರದಾ ನದಿ ಜೋಡಣೆ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಸರ್ಕಾರ ದೇವನಹಳ್ಳಿ ಬಳಿ 13 ಹಳ್ಳಿಗಳ 1777 ಎಕರೆ ಭೂಮಿಯನ್ನು ಸ್ವಾಧೀನಪಡಿಸುತ್ತಿರುವುದನ್ನು ರೈತ ಸಂಘ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಸ್ವಾಧೀನಕ್ಕೆ ಮುಂದಾಗಬಾರದು ಎಂದು ಒತ್ತಾಯಿಸಿದರು.ರಾಜ್ಯ ಮುಖಂಡ ಮಾಲತೇಶ ಪೂಜಾರ ಮಾತನಾಡಿದರು. ರೈತ ಸಂಘದ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ, ದಿಳ್ಳೆಪ್ಪ ಮಣ್ಣೂರ, ಶಿವಯೋಗಿ ಹೊಸಗೌಡ್ರ, ಸುರೇಶ ಚಲವಾದಿ, ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಪರಮೇಶಪ್ಪ ಅಣಜಿ, ಮಲ್ಲೇಶಪ್ಪ ಮಂಡಕ್ಕಿ, ಹೇಮಣ್ಣ ಕೋಡಿಹಳ್ಳಿ, ಕಲ್ಲಪ್ಪ ಸಣ್ಣಮನಿ, ನಂದೀಶ ಮಾಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.4ರಂದು ಬೆಂಗಳೂರು ಚಲೋರಾಜ್ಯ ಸರ್ಕಾರ ದೇವನಹಳ್ಳಿಯಲ್ಲಿ 1,777 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಹಾಗೂ ದೇವನಹಳ್ಳಿ ರೈತ ಸಂಘಟನೆಯ ಹೋರಾಟವನ್ನು ಬೆಂಬಲಿಸಿ ಜು. 4ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಜಿಲ್ಲೆಯಿಂದಲೂ 1 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೊರಡಲಿದ್ದೇವೆ. ಅಂದೇ ಸಿಎಂ ಸಿದ್ದರಾಮಯ್ಯ ರೈತ ನಾಯಕರ ಸಭೆ ಕರೆದಿದ್ದಾರೆ.
ಸಭೆಯಲ್ಲಿ ರೈತಪರ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ತೀರ್ಮಾನ ರೈತರ ಪರವಾಗಿದ್ದರೆ ಸರಿ, ಒಂದು ವೇಳೆ ರೈತ ವಿರೋಧಿ ತೀರ್ಮಾನ ಕೈಗೊಂಡರೆ ಜೈಲ್ ಭರೋ ಚಳವಳಿ ನಡೆಸಲು ಸಿದ್ಧರಿದ್ದೇವೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.;Resize=(128,128))
;Resize=(128,128))