ಸಾರಾಂಶ
ಮಧುಗಿರಿ ತಾಲೂಕನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಧುಗಿರಿ
ಮುಂಗಾರು ಹಾಗೂ ಹಿಂಗಾರು ಮಳೆ ವಿಫಲವಾಗಿದ್ದು, ಕೃಷಿ ಭೂಮಿಯಲ್ಲಿ ಬಿತ್ತನೆಯಾಗದೆ ರೈತರು ,ಕೃಷಿಕರು ಹಾಗೂ ಕೂಲಿಕಾರ್ಮಿಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಕಾರಣ ಮಧುಗಿರಿ ತಾಲೂಕನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತುನಾಡಿದ ಅವರು, ತಾಲೂಕಿನಲ್ಲಿ ಕುಡಿವ ನೀರಿಗೆ ಸಮಸ್ಯೆಯಿದ್ದು, ಹೇಮಾವತಿ ನೀರಿನ ಯೋಜನೆಯಡಿ ಕನಿಷ್ಠ 3 ಟಿಎಂಸಿ ನೀರು ಹಂಚಿಕೆ ಮಾಡಿ ಕೊಡಬೇಕು. ಬೆಸ್ಕಾಂನಿಂದ ಕಾನೂನು ಬಾಹಿರವಾಗಿ ಹೆಚ್ಚಿನ ಮೊತ್ತ ನಿಗದಿಪಡಿಸಿ ಹಣ ವಸೂಲಿ ಮಾಡುತ್ತಿದ್ದು ಅದನ್ನು ತಡೆಗಟ್ಟಬೇಕಿದೆ. ಹೆಚ್ಚುವರಿ ಬಿಲ್ ಹಣ ವಾಪಸ್ ನೀಡಬೇಕೆಂದು ಒತ್ತಾಯಿಸಿದರು. ಎತ್ತಿನ ಹೊಳೆ ಯೋಜನೆಯಡಿ 2 ಟಿಎಂಸಿ ನೀರು ಹಂಚಿಕೆ ಮಾಡಬೇಕು. ರೈತ ಸಂಘದಿಂದ ತಾಲೂಕಿನಲ್ಲಿ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ಸದಸ್ಯರಾದವರಿಗೆ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ, ಜಿಲ್ಲೆಯ 3 ತಾಲೂಕುಗಳಲ್ಲಿ ಮಳೆ ಅಭಾವದಿಂದ ರೈತರು ಹೆಚ್ಚು ಬೀಜ ಬಿತ್ತನೆ ಮಾಡಿಲ್ಲ, ಆದ್ದರಿಂದ ತಾಲೂಕಿನಾದ್ಯಂತ ಬರಗಾಲ ಕಾಮಗಾರಿ ಕೈಗೊಳ್ಳಬೇಕು. ಪ್ರತಿ ಹೆಕ್ಟೆರ್‌ಗೆ 20 ಸಾವಿರ ರು. ಪರಿಹಾರ ನೀಡಬೇಕು.ಮೃತರಾದ ರೈತ ಹನುಮಂತರಾಯಪ್ಪ, ತಿರುಪತಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗೋಷ್ಠಿಯಲ್ಲಿ ರೈತ ಸಂಘದ ಸಂಘಟನಾ ಕಾರ್ಯದರ್ಶಿ ದೊಡ್ಡಮಾಳಯ್ಯ,ತಾಲೂಕು ಅಧ್ಯಕ್ಷ ರಾಜಶೇಖರ್,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ,ಕಾರ್ಯದರ್ಶಿ ನಾಗರಾಜು ಇದ್ದರು.
;Resize=(128,128))
;Resize=(128,128))