ಕೇಂದ್ರ, ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ವಹಿಸಬಾರದು ಎಂದು ಒತ್ತಾಯಿಸಿ ಡಂಬಳ ಉಪತಹಸೀಲ್ದಾರ್ ನಾಡಕಚೇರಿ ಆವರಣದಲ್ಲಿ ಸರಕಾರಗಳ ವಿರುದ್ಧ ಘೋಷಣೆ ಹಾಕಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಡಂಬಳ: ಕೇಂದ್ರ, ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ವಹಿಸಬಾರದು ಎಂದು ಒತ್ತಾಯಿಸಿ ಡಂಬಳ ಉಪತಹಸೀಲ್ದಾರ್ ನಾಡಕಚೇರಿ ಆವರಣದಲ್ಲಿ ಸರಕಾರಗಳ ವಿರುದ್ಧ ಘೋಷಣೆ ಹಾಕಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಗದಗ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಶಂಕರಗೌಡ ಜಯನಗೌಡ್ರ ಮಾತನಾಡಿ, ಕಳೆದ ಒಂಬತ್ತು ವರ್ಷಗಳಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಕೇಂದ್ರ ಸರಕಾರ 2023ರ ವಿದ್ಯುತ್ ಕಾಯ್ದೆಯ ಮೂಲಕ ಸರ್ಕಾರದ ಹಿಡಿತವನ್ನು ಸಡಿಲಗೊಳಿಸಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ರೈತರ ಮೇಲೆ ಮತ್ತು ಬಳಕೆದಾರರ ಮೇಲೆ ದಬ್ಬಾಳಿಕೆ, ಮಾನಸಿಕ ಹಿಂಸೆ ಉಂಟಾಗಲಿದೆ. 2025ರ ಏಪ್ರಿಲ್‌ನಿಂದ ಎಲ್ಲ ಬಳಕೆದಾರರು ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕಾಗುತ್ತದೆ. ಪ್ರತಿ ಮೀಟರ್‌ಗೆ ₹8000ದಂತೆ ದೇಶದ ₹26 ಕೋಟಿ ವಿದ್ಯುತ್ ಗ್ರಾಹಕರ ಮೂಲಕ ₹2.08.0000 ಕೋಟಿ ಹಣ ಮೀಟರ್ ಅಳವಡಿಕೆಗಾಗಿ ಅದಾನಿ ಮತ್ತು ಟಾಟಾ ಕಂಪನಿಯ ಜೇಬು ತುಂಬಿಸುವ ಹುನ್ನಾರ ಇದಾಗಿದೆ. ಇದರಿಂದ ವಿದ್ಯುತ್ ದರ ಏರಲಿದೆ ಎಂದರು.
ಸಬ್ಸಿಡಿ ಕಡಿತ, ಕೃಷಿ ವಲಯ, ಗೃಹ ಬಳಕೆ ಸೇರಿದಂತೆ ರೈತರಿಗೆ ತೀವ್ರ ತೋಂದರೆಯಾಗಲಿದೆ. ರಾಜ್ಯ ಸರಕಾರ ಟಾಟಾ ಪವರ್ ಕಂಪನಿಗೆ ಪರವಾನಗಿ ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸುತ್ತೇವೆ. ಒಂದು ವೇಳೆ ಖಾಸಗೀಕರಣಕ್ಕೆ ಆದೇಶ ನೀಡಿದ್ದೇ ಆದರೆ ರಾಜ್ಯಾದ್ಯಂತ ಬಂದ್‌ಗೆ ಕರೆ ಕೋಡುವ ಮೂಲಕ ಕರ್ನಾಟಕ ಸರಕಾರದ ವಿರುದ್ಧ ಬಾರ್ಕೋಲ್ ಚಳವಳಿ, ಜೈಲ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು. ಜು. 22ರಂದು ಗದಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವಂತೆ ಕರೆ ನೀಡಿದರು.ರೈತರಾದ ಈರಣ್ಣ ಕರವೀರಮಠ, ಸಂತೋಷ ಮಠದ, ಪರಶುರಾಮ ವಡ್ಡರ, ಎಸ್.ಪಿ. ಕಾಡಸಿದ್ದೇಶ್ವರಮಠ, ಮಲ್ಲಪ್ಪ ಮಠದ ಮಾತನಾಡಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸದಂತೆ ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಅದನ್ನು ಮೀರಿ ಭಾರತದಲ್ಲಿ ಈ ವ್ಯವಸ್ಥೆಗೆ ಮುಂದಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಖಾಸಗೀಕರಣ ಮಾಡಿದರೆ ಗೃಹ ಜ್ಯೋತಿ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಗಂಗಾ ಕಲ್ಯಾಣದಂತಹ ಯೋಜನೆಗಳು ರದ್ದಾಗಲಿವೆ ರೈತರು, ಬಡವರು ಎಚ್ಚರಗೊಳ್ಳಬೇಕಾಗಿದೆ.
ಸರ್ಕಾರಗಳು ತಮ್ಮ ಇಚ್ಛೆಯಂತೆ ಇಂತಹ ನೀತಿಗಳನ್ನು ಜಾರಿಗೆ ತರಲು ಅವಕಾಶ ನೀಡುವುದರಿಂದ ಕರ್ನಾಟಕದಲ್ಲೂ ಖಾಸಗೀಕರಣ ಪ್ರಕ್ರಿಯೆ ನೀಡಿದ್ದೇ ಆದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು.ರೈತರು, ಗ್ರಾಮೀಣ ಜನತೆ ಹಾಗೂ ಸಾಮಾನ್ಯ ಗ್ರಾಹಕರ ಹಿತದೃಷ್ಟಿಯಿಂದ ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ವಿದ್ಯುತ್ ಖಾಸಗೀಕರಣ ಮಾಡುವುದು ಎಂದರೆ ಸಾಮಾಜಿಕ ನ್ಯಾಯದ ಹರಣ ಮಾಡಿದಂತೆ. ಇದು ನೂರಾರು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿದ್ದ ಸೇವಾ ವಲಯವನ್ನು ಮುಗಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಈ ಕೂಡಲೇ ಸರ್ಕಾರ ಟಾಟಾ ಪವರ್ ಪ್ರಸ್ತಾವಿತ ಮನವಿ ತಿರಸ್ಕರಿಸಬೇಕು ಎಂದು ಹೆಸ್ಕಾಂ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಉಪತಹಸೀಲ್ದಾರ್ ಎಸ್.ಎಸ್. ಬಿಚಾಲಿ ಮನವಿ ಸ್ವಿಕರಿಸಿ ಮಾತನಾಡಿ, ತಮ್ಮ ಮನವಿಯನ್ನು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮತ್ತು ಸರ್ಕಾರಕ್ಕೆ ತಮ್ಮ ಮನವಿ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.ಪ್ರತಿಭಟನೆಯಲ್ಲಿ ರೈತರಾದ ರಂಗಪ್ಪ ಜ್ವಂಡಿ, ರಾಮಪ್ಪ ನೀರಲಗಿ, ಜಿ.ಎನ್. ಮಠದ, ಶ್ರೀಧರ ಗದಗಿನ, ಬಸಯ್ಯ ಗ್ವಾಲಗೇರಿಮಠ, ಮಲ್ಲಪ್ಪ ಹಳ್ಳಾಕರ, ಅಶೋಕ ಪಾಟೀಲ, ಉಮೇಶ ಗಡಗಿ, ಶೇಖಪ್ಪ ಪೂಜಾರ, ಗುಡದಪ್ಪ, ಮಲ್ಲಿಕಾರ್ಜುನ ಯಲಿಗಾರ, ಎನ್.ಎಸ್. ಸನಪ್ಯಾಟಿ, ಯಲ್ಲಪ್ಪ ಬಂಕಾಪುರ, ಎಸ್.ಎಂ. ಬಂಡಿ, ಎಂ.ವೈ. ದಾಸರ, ಡಂಬಳ ಶಾಖಾಧಿಕಾರಿ ಡಿ. ಟೋಪಣ್ಣ ನಾಯಕ್, ಪವರಮ್ಯಾನ್‌ಗಳಾದ ಹನಮೇಶ ಇಂದರಗಿ, ಬಸರಾಜ ಗದಗಿನ, ರಾಜಕುಮಾರ ಲಗ್ಗಣ್ಣವರ, ಕಾಳಪ್ಪ ಮಾಳ್ವಿ ಸಿಬ್ಬಂದಿ ವರ್ಗ, ಸೇರಿದಂತೆ ಬೇರೆ ಬೇರೆ ಗ್ರಾಮಗಳಿಂದ ಬಂದಿದ್ದ ರೈತರು ಇದ್ದರು.