ಮುಸುಕಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರೈತ ಸಂಘ ಮನವಿ

| Published : Nov 11 2025, 01:45 AM IST

ಮುಸುಕಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರೈತ ಸಂಘ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಪ್ರತಿ ಕ್ವಿಂಟಲ್‌ಗೆ ೨,೪೦೦ ರು. ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳವನ್ನು ಕೇವಲ ೧,೭೦೦ ರಿಂದ ೧,೮೦೦ ರು.ಗೆ ಖರೀದಿ ಮಾಡಲಾಗುತ್ತಿದೆ.

ಕನ್ನಡಪ್ರಭವಾರ್ತೆ, ಹಾಸನ

ಇತ್ತೀಚಿನ ದಿನಗಳಲ್ಲಿ ಮೆಕ್ಕೆಜೋಳ ಬೆಲೆ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತಕ್ಷಣ ಖರೀದಿ ಕೇಂದ್ರ ತೆರೆಯಬೇಕೆಂದು ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಇದೆ ವೇಳೆ ರಾಜ್ಯ ರೈತ ಸಂಘದ ಮುಖಂಡ ಡಿ.ಎಚ್. ಭೂಮೇಶ್ ಮಾತನಾಡಿ, ಸರ್ಕಾರ ಪ್ರತಿ ಕ್ವಿಂಟಲ್‌ಗೆ ೨,೪೦೦ ರು. ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳವನ್ನು ಕೇವಲ ೧,೭೦೦ ರಿಂದ ೧,೮೦೦ ರು.ಗೆ ಖರೀದಿ ಮಾಡಲಾಗುತ್ತಿದೆ. ಬೆಲೆ ಕುಸಿತದಿಂದಾಗಿ ಉತ್ಪಾದನಾ ವೆಚ್ಚವೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮೀರಿ, ಇತ್ತೀಚೆಗೆ ಮೆಕ್ಕೆಜೋಳದಲ್ಲಿ ಕಾಣಿಸಿಕೊಂಡ ಬಿಳಿಸುಳಿ ರೋಗದ ಪರಿಣಾಮದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ತ್ವರಿತ ಮಧ್ಯಸ್ಥಿಕೆ ಅಗತ್ಯವಾಗಿದೆ. ರೈತರ ಸಂಕಷ್ಟವನ್ನು ಅರಿತು ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.

ಬೆಂಬಲ ಬೆಲೆ ಖರೀದಿ ಕೇಂದ್ರಗಳು ಆರಂಭವಾದರೆ ರೈತರಿಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೆಕ್ಕೆಜೋಳ ಬೆಲೆ ಕುಸಿತದಿಂದ ಉಂಟಾದ ಆರ್ಥಿಕ ನಷ್ಟ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿಯಲ್ಲಿ ಸಲ್ಲಿಸಿದ್ದಾರೆ. ಮೆಕ್ಕೆಜೋಳವು ಹಾಸನ ಜಿಲ್ಲೆಯಲ್ಲಿ ಪ್ರಮುಖ ಹಂಗಾಮಿ ಬೆಳೆ ಆಗಿದ್ದು, ಬೆಳೆಗಾರರ ಜೀವನೋಪಾಯಕ್ಕೆ ನೇರವಾಗಿ ಸಂಬಂಧಿಸಿದೆ. ಮೆಕ್ಕೆ ಜೋಳದ ಬೆಳೆಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜೊತೆ ತ್ವರಿತವಾಗಿ ವ್ಯವಹರಿಸಿ ಯೋಜನೆಯನ್ನು ಶೀಘ್ರ ಜಾರಿಯಾಗುವಂತೆ ಮಾಡಬೇಕು. ಖರೀದಿ ಕೇಂದ್ರಗಳ ಮೂಲಕ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹಕರಿಸುತ್ತಿರೆಂದು ಭಾವಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಮಧುಸೂದನ್, ನವೀನ್, ಮಂಜು ಇತರರು ಉಪಸ್ಥಿತರಿದ್ದರು.