ಮಾಗಡಿ: ಕಾವೇರಿ ನೀರನ್ನು ತಾಲೂಕಿನ ಮುಖಾಂತರ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುವ ಸರ್ಕಾರದ ಯೋಜನೆಯ ವಿರುದ್ಧ ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ನಮ್ಮ ತಾಲೂಕಿನ ರೈತರಿಗೆ ಮತ್ತು ಕೆರೆಗಳಿಗೆ ಕಾವೇರಿ ನೀರು ಒದಗಿಸಿ, ನಂತರ ಬೇರೆ ಕಡೆಗೆ ನೀರನ್ನು ಕೊಂಡೊಯ್ಯಿರಿ. ಸತ್ಯಗಾಲದಿಂದ ಬರುವ ಕಾವೇರಿ ನೀರನ್ನು ತಾಲೂಕಿನ ಮುಖಾಂತರ ಕೊಂಡೊಯ್ಯಲಾಗುತ್ತಿದೆ. ಈ ಸಂದರ್ಭದಲ್ಲಿ ನೂರಾರು ಮರಗಳನ್ನು ಕಡಿಯಲಾಗಿದೆ. ರೈತರ ಜಮೀನಿನ ಮೂಲಕ ಪೈಪ್‌ಲೈನ್‌ಗಳನ್ನು ಅಳವಡಿಸಲಾಗಿದೆ. ಇಷ್ಟೆಲ್ಲಾ ತ್ಯಾಗ ಮಾಡಿದ ಮಾಗಡಿ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದರೂ, ನಮ್ಮ ಕೆರೆಗಳನ್ನು ತುಂಬಿಸದೆ ಬೇರೆಡೆಗೆ ನೀರು ಕೊಂಡೊಯ್ಯುತ್ತಿರುವುದು ಸರಿಯಲ್ಲ.

ಜೆಜೆಎಂ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಸರಿಯಾಗಿ ಗುಂಡಿ ಮುಚ್ಚಿಲ್ಲ ಮತ್ತು ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಿಲ್ಲ. ಕೆಇಬಿ ಸಮಸ್ಯೆಗಳು ಸೇರಿದಂತೆ ಯಾವುದೇ ರೈತರ ಸಮಸ್ಯೆಗಳಿಗೆ ತಹಸೀಲ್ದಾರ್ ಶರತ್ ಕುಮಾರ್ ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹೋರಾಟದ ಎಚ್ಚರಿಕೆ:

ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಬಾಲಕೃಷ್ಣ ಕೂಡಲೆ ಕಾವೇರಿ ನೀರಿನ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿಸಬೇಕು. ನಮ್ಮ ತಾಲೂಕಿಗೆ ನೀರು ಕೊಟ್ಟ ನಂತರವಷ್ಟೇ ಬೇರೆ ಜಿಲ್ಲೆಗೆ ನೀರು ಕೊಡಲಿ, ಇದರ ಬಗ್ಗೆ ತಿಳಿಸಲು ಕಾಲಾವಕಾಶ ಕೊಡಲಿದ್ದು ಏ.17ರೊಳಗೆ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ನಮ್ಮೊಂದಿಗೆ ಚರ್ಚಿಸಿ ಪರಿಹಾರ ಒದಗಿಸದಿದ್ದರೆ ಏ.17ರಂದು ಬೆಳಗ್ಗೆ 10.30ಕ್ಕೆ ಹೊಸಪೇಟೆ ಗೇಟ್ ಬಳಿ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಲೋಕೇಶ್ ಎಚ್ಚರಿಸಿದರು.


ಇದೇ ವೇಳೆ ಹೋರಾಟಕ್ಕೆ ದಲಿತ ಸಂಘಟನೆಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತ‌ ಸಂಘದ ಯುವ ಘಟಕ ಜಿಲ್ಲಾಧ್ಯಕ್ಷ ರವಿಕುಮಾರ್, ಮುಖಂಡರಾದ ಶಿವಲಿಂಗಯ್ಯ, ಚಂದ್ರಾಯಪ್ಪ, ನಾರಾಯಣ್, ಕಾಂತರಾಜು, ರಾಮಣ್ಣ, ವೆಂಕಟೇಶ್, ಮುನಿರಾಜ್, ನಿಂಗಣ್ಣ, ಶಿವಲಿಂಗಯ್ಯ, ಕರಿಯಪ್ಪ, ಚಿಕ್ಕಣ್ಣ, ಅಂಜಿನಪ್ಪ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯುವ ಘಟಕ ಜಿಲ್ಲಾಧ್ಯಕ್ಷ ರವಿಕುಮಾರ್, ಶಿವಲಿಂಗಯ್ಯ, ಚಂದ್ರಾಯಪ್ಪ, ನಾರಾಯಣ್, ಕಾಂತರಾಜು ಇತರರಿದ್ದರು.