ಹಾವೇರಿ: ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ, ಲಿಂಕ್ ಇಲ್ಲದೆ ರಸಗೊಬ್ಬರ ಪೂರೈಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತ ಮುಖಂಡರು ಶನಿವಾರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ದಂಡಾಧಿಕಾರಿ ಶರಣಮ್ಮ ಕೆ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ರೈತ ಮುಖಂಡರು ಮಾತನಾಡಿ, ಮುಂಗಾರು ಬಿತ್ತನೆ ಚುರುಕಾಗಿರುವ ಹಿನ್ನೆಲೆಯಲ್ಲಿ ಡಿಎಪಿ ಕಾಂಪ್ಲೆಕ್ಸ್ ಗೊಬ್ಬರಕ್ಕೆ ನಿಗದಿತ ದರಕ್ಕಿಂತ ಹೆಚ್ಚಾಗಿ ಅಂಗಡಿಯವರು ವಸೂಲಿ ಮಾಡುತ್ತಿದ್ದು, ಇದನ್ನು ತಡೆಯುವಲ್ಲಿ ತಾಲೂಕಾಡಳಿತ ವಿಫಲವಾಗಿದೆ. ತಕ್ಷಣವೇ ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ ಮಾಡಬೇಕು. ಖಾಸಗಿ ಗೊಬ್ಬರ ವಿತರಕರು ರೈತರಿಗೆ ಡಿಎಪಿ ಅಥವಾ ಯೂರಿಯಾ ನೀಡುವಾಗ ಅದರ ಜೊತೆಗೆ ಕಡ್ಡಾಯವಾಗಿ ಬೇಡದ ಲಿಕ್ವಿಡ್ ಟಾನಿಕ್ ಅಥವಾ ಜೈವಿಕ ಪೌಡರ್‌ಗಳನ್ನು ಖರೀದಿಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ. ರೈತರಿಗೆ ಯಾವುದೇ ಲಿಂಕ್ ಇಲ್ಲದೆ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಅದೇ ರೀತಿ ಗೋವಿನಜೋಳ ಬಿತ್ತನೆ ಬೀಜಕ್ಕೆ ಏಕರೂಪ ದರ ನಿಗದಿ ಮಾಡಬೇಕು. ಕಳಪೆ ಮತ್ತು ನಕಲಿ ಬೀಜ ಮಾರಾಟ ಮಾಡುವವರ ಸೂಕ್ತ ಕ್ರಮ ಕೈಗೊಳ್ಳಬೇಕು. ಎಫ್‌ಐಡಿ ಮೂಲಕ ಬೀಜ, ಗೊಬ್ಬರ ಕೊಡುವುದನ್ನು ರದ್ದು ಮಾಡಿ ನೇರವಾಗಿ ರೈತರಿಗೆ ಯೂರಿಯಾ ಗೊಬ್ಬರ ಕೊಡಲು ಕ್ರಮ ಕೈಗೊಳ್ಳಬೇಕು. ಬಿತ್ತನೆ ಬೀಜದ ಅಸಲಿತನವನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ ಪ್ರತಿ ಬೀಜದ ಚೀಲದ ಮೇಲೂ ಬಾರ್‌ಕೋಡಿಂಗ್ ಅಥವಾ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಬೇಕು. ಬಫರ್ ಸ್ಟಾಕ್‌ನಲ್ಲಿರುವ ಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಯುಟಿಪಿ ಮೂಲಕ ರೈತರ ಜಮೀನುಗಳಿಗೆ ನೀರು ಹಾಯಿಸುವ ಕಾಲುವೆಗಳು ಪೂರ್ಣಗೊಂಡಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ತಕ್ಷಣವೇ ಯುಟಿಪಿ ಕಾಲುವೆ ಪೂರ್ಣಗೊಳಿಸಬೇಕು. ರೈತರಿಗೆ ನೀರಾವರಿ ಮಾಡಲು ಅನಾನುಕೂಲ ಆಗುತ್ತಿದ್ದು, ವಿದ್ಯುತ್ ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಂಬಗಳು ಮತ್ತು ತಂತಿಗಳು ದಶಕಗಳಷ್ಟು ಹಳೆಯದಾಗಿದ್ದು, ಪದೇ ಪದೇ ಲೋ-ವೋಲ್ಟೇಜ್ ಸಮಸ್ಯೆಯಿಂದ ಮೋಟಾರ್‌ಗಳು ಸುಟ್ಟು ಹೋಗುತ್ತಿವೆ. ತಕ್ಷಣವೇ ವಿದ್ಯುತ್ ಕಂಬ ತಂತಿಗಳನ್ನು ದುರಸ್ತಿ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ, ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಗೌರವಾಧ್ಯಕ್ಷ ಸುರೇಶ ಚಲವಾದಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ, ರಾಜು ತರ್ಲಗಟ್ಟ, ಮಂಜುನಾಥ ಕದಂ, ಕರಬಸಪ್ಪ ನಾಗಮ್ಮನವರ, ಮಂಜಪ್ಪ ಸೊಟಾರೆ, ದೇವರಾಜ ಪಾಟೀಲ, ಸಿದ್ದಪ್ಪ ಮರೆಣ್ಣನವರ, ಹರೀಶ ಕಡೇಮನಿ, ನಾಗಪ್ಪ ಓಲೇಕಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಆಗ್ರಹ
ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ, ಲಿಂಕ್ ಇಲ್ಲದೆ ರಸಗೊಬ್ಬರ ಪೂರೈಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತ ಮುಖಂಡರು ಶನಿವಾರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ದಂಡಾಧಿಕಾರಿ ಶರಣಮ್ಮ ಕೆ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.