ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಮೈಸೂರಿನ ಓಡಿಪಿ ಹಾಗೂ ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಚಂದ್ರಮೌಳೇಶ್ವರ ಮಹಿಳಾ ಉತ್ಪಾದಕರ ಸಂಘದ ಸಹಯೋಗದೊಂದಿಗೆ ಟಿ.ಎಸ್.ಪಿ (ಟ್ರೈಬಲ್ ಸಬ್ ಪ್ಲಾನ್) ಯೋಜನೆಯಲ್ಲಿ ರೈತ ಮಹಿಳೆಯರಿಗೆ ಕೃಷಿ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ಪಿ.ಎಮ್.ಎಫ್.ಎಮ್.ಇ. ಯೋಜನೆಯಡಿ ಉದ್ಯಮಶೀಲತೆ ಅವಕಾಶಗಳ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು.ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಕಾರ್ಯಕ್ರಮ ಉದ್ಘಾಟಸಿ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಮಾಡುವುದರ ಮೂಲಕ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಉದ್ಯಮಶೀಲತೆಯಿಂದ ರೈತ ಮಹಿಳೆಯರು ತಮ್ಮ ಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದೆಂದು ತಿಳಿಸಿದರು.
ಮುಖ್ಯಅತಿಥಿಗಳಾಗಿ ಓಡಿಪಿಯ ಲಲಿತಾ ಮಾತನಾಡಿ, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸಂಬಂಧಿಸಿದ ವಿವಿಧ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತರಬೇತಿಗಳನ್ನು ಆಯೋಜಿಲಾಗುತ್ತಿದ್ದು, ರೈತ ಮಹಿಳೆಯರು ಮತ್ತು ಸ್ವಸಹಾಯ ಸಂಘದ ಸದಸ್ಯರು ತರಬೇತಿ ಪಡೆದುಕೊಳ್ಳಲು ಹಾಗೂ ತಮ್ಮ ಉದ್ಯಮವನ್ನು ಉನ್ನತ ಮಟ್ಟಕ್ಕೆ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.ಚಂದ್ರಮೌಳೇಶ್ವರ ಮಹಿಳಾ ಉತ್ಪಾದಕರ ಸಂಘದ ಸಿಇಒ ಲಾವಣ್ಯ ಮಾತನಾಡಿ, ಮಹಿಳೆಯರು ಉದ್ಯಮ ಶೀಲತೆಯಿಂದ ಸ್ವಾವಲಂಬಿಯಾಗಬೇಕೆಂದು ಪ್ರೋತ್ಸಾಹಿಸಿದರು.
ಕೆವಿಕೆಯ ಗೃಹವಿಜ್ಞಾನ ವಿಷಯ ತಜ್ಞ ಡಾ. ದೀಪಕ ಅವರು ರೈತ ಮಹಿಳೆಯರಿಗೆ ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ತಾಂತ್ರಿಕವಾಗಿ ಸಿರಿಧಾನ್ಯಗಳ ಕುಕ್ಕಿಸ್, ಬ್ರೇಡ್, ಬನ್ಸ್, ಪಾಸ್ತಾ, ನೂಡಲ್ಸ್ ಹಾಗೂ ವಿವಿಧ ಬೇಕರಿ ಉತ್ಪನ್ನಗಳ ಹಾಗೂ ಸಂಪ್ರದಾಯಿಕ ಆಹಾರಗಳಾದ ರಾಗಿ ಹಪ್ಪಳ, ಸಿರಿಧಾನ್ಯಗಳ ಮಾಲ್ಟ್, ರಾಗಿ ಉಂಡೆ, ರಾಗಿ ಮಿಕ್ಸಚರ್, ಸೆಂಡಿಗೆ ಹಾಗೆ ವಿವಿಧ ಉತ್ಪನ್ನಗಳ ಕುರಿತು ತಾಂತ್ರಿಕವಾಗಿ ಮಾಹಿತಿ ನೀಡಿದರು.ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿಯಲ್ಲಿ ಕಿರು ಆಹಾರ ಉದ್ಯಮೆಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು. ಅದೇ ರೀತಿ ಈ ಯೋಜನೆಯಡಿ ಸ್ಧಾಪಿಸಬಹುದಾದ ಆಹಾರ ಸಂಸ್ಕರಣಾ ಘಟಕಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿದರು.
ಕೆವಿಕೆಯ ಆಹಾರ ಸಂಸ್ಕರಣಾ ಘಟಕದಲ್ಲಿ ಪ್ರಾಯೋಗಿಕವಾಗಿ ವಿವಿಧ ಆಹಾರ ಮೌಲ್ಯವರ್ಧಿತ ಉತ್ಪನ್ನಗಳಾದ ರಾಗಿ ಕುಕ್ಕಿಸ್, ರಾಗಿ ಮಿಕ್ಸಚರ್, ರಾಗಿ ಹಪ್ಪಳ ಹಾಗೂ ವಿವಿಧ ತಿನಿಸುಗಳ ತಾಯಾರಿಕೆಯ ಪ್ರಾತ್ಯಕ್ಷಿಕೆ ಮಾಡಲಾಯಿತು.ಡಾ.ಜಿ.ಎಂ. ವಿನಯ್ ಸ್ವಾಗತಿಸಿದರು, ಎಚ್.ವಿ. ದಿವ್ಯಾ ನಿರೂಪಿಸಿದರು ಡಾ.ವೈ.ಪಿ. ಪ್ರಸಾದ್ ವಂದಿಸಿದರು. 35ಕ್ಕೂ ಹೆಚ್ಚು ರೈತ ಮಹಿಳೆಯರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
;Resize=(128,128))
;Resize=(128,128))
;Resize=(128,128))