ಸಾರಾಂಶ
ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಕ್ರಮ ಖಂಡಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳ ರೈತರು ಶುಕ್ರವಾರ ಬೈರಮಂಗಲ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಪ್ರಾರಂಭಿಸಿದ್ದಾರೆ.
ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿರುವ ನೂರಾರು ರೈತರು ನಮ್ಮ ಭೂಮಿ - ನಮ್ಮ ಹಕ್ಕು, ಪ್ರಾಣ ಕೊಟ್ಟರು ಭೂಮಿ ಕೊಡುವುದಿಲ್ಲ ಎಂದು ಘೋಷಣೆಗಳನ್ನು ಕೂಗುತ್ತಾ ಹಸಿರು ಟವಲ್ ಗಳನ್ನು ಬೀಸುತ್ತಾ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ :
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಮಾತನಾಡಿ, ಬಿಡದಿ ಟೌನ್ ಶಿಪ್ ಯೋಜನೆಗೆ ನಾವು ಭೂಮಿ ಕೊಡುವುದಿಲ್ಲ ಎಂದು 2700 ರೈತರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದೇವೆ. ಆಗ ವಿಶೇಷ ಭೂಸ್ವಾಧೀನಾಧಿಕಾರಿಗಳು ನ್ಯಾಯಾಲಯದಲ್ಲಿ ಆಕ್ಷೇಪಣಾ ಸಲ್ಲಿಸಲು ತಿಳಿಸಿದ್ದರು. ಅದರಂತೆ ಅಲ್ಲಿಯೂ ಅರ್ಜಿ ಸಲ್ಲಿಸಿದೇವೊ. ಇದಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿಗಳು 15 ರಿಂದ 30 ದಿನಗಳಲ್ಲಿ ರಿಜಿಸ್ಟರ್ ಪೋಸ್ಟ್ ಮೂಲಕ ಉತ್ತರ ಕಳುಹಿಸುತ್ತೇವೆಂದು ಹೇಳಿದ್ದರು. ಆದರೆ, ಇದುವರೆಗೆ ಉತ್ತರ ಬಂದಿಲ್ಲ ಎಂದು ದೂರಿದರು.ಈ ಭಾಗದ ರೈತರೆಲ್ಲರು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದೇವು. ಅದನ್ನು ಸರ್ಕಾರಕ್ಕೆ ಕಳುಹಿಸಿ ರೈತರಿಗೆ ಉತ್ತರ ನೀಡಬೇಕೆಂಬ ಸೌಜನ್ಯ ಇಲ್ಲ. ಬೈರಮಂಗಲ ವೃತ್ತದಲ್ಲಿಯೂ ಬೃಹತ್ ಪ್ರತಿಭಟನೆ ನಡೆಸಿದಾಗ ತಹಸೀಲ್ದಾರ್ ಮನವಿ ಸ್ವೀಕರಿಸಿದ್ದರು. ಅದಕ್ಕೂ ಉತ್ತರ ನೀಡಿಲ್ಲ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಿ ಭೂಮಿ ಸ್ವಾಧೀನ ಪಡಿಸಿಕೊಳ್ಳದಂತೆ ಒತ್ತಾಯ ಮಾಡಿದೇವು. ಡಿ.ಕೆ.ಶಿವಕುಮಾರ್ ಅವರಿಗೆ ರೈತರ ಬಗ್ಗೆ ಎಷ್ಟು ಗೌರವ ಇದೆ. ಅವರು ಬಳಸಿದ ಭಾಷೆ ಯಾವ ರೀತಿಯಲ್ಲಿತ್ತು ಎಂಬುದನ್ನು ನಾಡಿನ ಜನರೇ ನೋಡಿದ್ದಾರೆ. ಇನ್ನು ಶಾಸಕ ಬಾಲಕೃಷ್ಣ ಅವರಿಗೂ ಮನವಿ ಸಲ್ಲಿಸಿದ್ದೇವೊ. ಇಷ್ಟೆಲ್ಲ ಮನವಿಗಳನ್ನು ಸಲ್ಲಿಸಿ, ಪಾದಯಾತ್ರೆ, ಪ್ರತಿಭಟನೆಗಳನ್ನು ನಡೆಸಿದರೂ ಸಹ ಸರ್ಕಾರ ಮಾತ್ರ ರೈತರ ಅಹವಾಲು ಆಲಿಸುತ್ತಿಲ್ಲ ಎಂದು ಟೀಕಿಸಿದರು.ರೈತರ ತೀವ್ರ ವಿರೋಧದ ನಡುವೆಯೂ ಅಧಿಕಾರಿಗಳು ಸರ್ವೆ ಕಾರ್ಯ ನಡೆಸುತ್ತಿದ್ದಾರೆ. ಹಸು ಕರುಗಳಿಗೆ ಕುಡಿಯಲು ನೀರು, ಮೇವು ಹೇಗೆ ಕೊಡುತ್ತೀರಾ. ಇಲ್ಲ ಅವುಗಳನ್ನು ಕಸಾಯಿ ಖಾನೆಗೆ ಕಳುಹಿಸುತ್ತೀರಾ ಸ್ಪಷ್ಟಪಡಿಸಬೇಕು. ರೌಡಿಗಳು ಮತ್ತು ಪೊಲೀಸರ ಬಲ ಪ್ರಯೋಗಿಸಿ ರೈತರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಪ್ರಕಾಶ್ ದೂರಿದರು.
ರೈತ ಮಹಿಳೆ ನೇತ್ರಾವತಿ ಮಾತನಾಡಿ, ರೈತರೆಲ್ಲರು ಸೇರಿ ಬಂಡವಾಳ ಹಾಕುತ್ತೇವೆ. ಸರ್ಕಾರ ವಿಧಾನಸೌಧ ಬರೆದು ಕೊಡುತ್ತದೆಯೇ ಹೇಳಲಿ. ಅವರೆಲ್ಲರು ಹೇಗೆ ಅಧಿಕಾರ ಬಿಟ್ಟು ಕೊಡುವುದಿಲ್ಲವೊ ಅದೇ ರೀತಿ ನಾವು ನಮ್ಮ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಡ ರೈತರು ಜಮೀನನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ರೈತರ ಒಪ್ಪಿಗೆ ಪಡೆಯದೇ ಜಮೀನು ಸ್ವಾಧೀನ ಪಡಿಸಿಕೊಳ್ಳುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಈ ಸರ್ಕಾರ ಬೆಂಗಳೂರು ನಗರವನ್ನೇ ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಇನ್ನೂ ಬಿಡದಿ ಟೌನ್ ಶಿಪ್ ಮಾಡಿ ಏನು ಸಾಧಿಸುತ್ತಾರೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ಕಾರ್ಯದರ್ಶಿ ಸೀನಪ್ಪ ರೆಡ್ಡಿ, ಖಜಾಂಚಿ ನಾಗರಾಜು, ರೈತ ಮುಖಂಡರಾದರಾಧಾಕೃಷ್ಣ, ಅಶ್ವತ್ಥ್ , ಕೃಷ್ಣ, ರಾಜಣ್ಣ, ಶಿವರಾಮು, ಚಂದ್ರು, ಕೇಶವರೆಡ್ಡಿ, ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.
ಬಾಕ್ಸ್ .................ಧರಣಿ ಸ್ಥಳದಲ್ಲಿ ಶಾಮಿಯಾನ ಹಾಕಲು ಪೊಲೀಸರ ನಿರಾಕರಣೆ:
ಬೈರಮಂಗಲ ಕ್ರಾಸ್‌ನಲ್ಲಿರುವ ದೇವಾಲಯದ ಮುಂಭಾಗ ಆಹೋರಾತ್ರಿ ಧರಣಿ ಪ್ರಾರಂಭಿಸಿರುವ ರೈತರಿಗೆ ಧರಣಿ ಸ್ಥಳದಲ್ಲಿ ಶಾಮಿಯಾನ ಹಾಕಲು ಪೊಲೀಸ್ ಇಲಾಖೆ ಅನುಮತಿ ನೀಡಲು ನಿರಾಕರಿಸಿದೆ.ದೇವಾಲಯ ಮುಂಭಾಗದ ಮರದ ಕೆಳಗೆ ರೈತರು ಧರಣಿ ನಡೆಸುತ್ತಿದ್ದು, ಆ ಮರದ ಕೊಂಬೆಗಳು ಮುರಿದು ಬೀಳುವ ಅಪಾಯವಿದೆ. ಮಳೆ ಬರುವ ಸಾಧ್ಯತೆಗಳೂ ಇದೆ. ಇಷ್ಟಿದ್ದರೂ ಪೊಲೀಸ್ ಇಲಾಖೆ ಶಾಮಿಯಾನ ಹಾಕಿಕೊಳ್ಳಲು ಅವಕಾಶ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ವಾಹನ ತಡೆಯುವುದಿಲ್ಲ. ಸಂಜೆ 6 ಗಂಟೆ ನಂತರ ಮೈಕ್ ಬಳಕೆ ಮಾಡುವುದಿಲ್ಲ ಎಂದು ಬರಹದಲ್ಲಿ ನೀಡಿದ್ದೇವೆ. ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಕಾರಣ ಮಳೆ ,ಬಿಸಿಲಿನಿಂದ ರಕ್ಷಣೆ ಪಡೆಯಲು ಶಾಮಿಯಾನ ಅಥವಾ ಶೀಟ್ ನ ವ್ಯವಸ್ಥೆ ಮಾಡಿಕೊಳ್ಳುತ್ತೇವೆಂದು ಮಾಡಿರುವ ಮನವಿಗೂ ಸ್ಪಂದಿಸುತ್ತಿಲ್ಲ.ಧರಣಿ ವೇಳೆ ಮರದ ಕೊಂಬೆ ಏನಾದರು ಬಿದ್ದು ಒಂದು ತೊಟ್ಟು ರಕ್ತ ಬಂದರೆ ನಾವುಗಳು ಸುಮ್ಮನಿರುವುದಿಲ್ಲ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಬೀಗ ಜಡಿಯುತ್ತೇವೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪೈಕಿ ಯಾರಾದರು ಆಗಲಿ ಧರಣಿಗೆ ಶಾಮಿಯಾನ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
12ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕು ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು.