ಕನಕಪುರದ ಅರಣ್ಯ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

| Published : Aug 15 2024, 01:53 AM IST

ಕನಕಪುರದ ಅರಣ್ಯ ಇಲಾಖೆ ಕಚೇರಿಗೆ ರೈತರ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಬಹುಪಾಲು ದಲಿತರು, ಹಿಂದುಳಿದ, ಅಲ್ಪಸಂಖ್ಯಾತರು ಅರಣ್ಯ ಮತ್ತು ಗೋಮಾಳ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದು ಇದುವರೆಗೂ ಸಾಗುವಳಿ ಚೀಟಿ ನೀಡದೆ, ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ರೈತ ಸಂಘಟನೆಗಳು ಕನಕಪುರದಲ್ಲಿ ಪ್ರತಿಭಟನೆ ನಡೆಸಿದವು.

-ಕಾಡಂಚಿನ ಗ್ರಾಮಗಳ ಗೋಮಾಳ ಜಮೀನುಗಳಿಗೆ ಸಾಗುವಳಿ ಚೀಟಿ ನೀಡದೆ ಕಿರುಕುಳಕನ್ನಡಪ್ರಭ ವಾರ್ತೆ ಕನಕಪುರ

ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಬಹುಪಾಲು ದಲಿತರು, ಹಿಂದುಳಿದ, ಅಲ್ಪಸಂಖ್ಯಾತರು ಅರಣ್ಯ ಮತ್ತು ಗೋಮಾಳ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದು ಇದುವರೆಗೂ ಸಾಗುವಳಿ ಚೀಟಿ ನೀಡದೆ, ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಸಾತನೂರು ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಕರುನಾಡ ರಕ್ಷಣಾ ವೇದಿಕೆ, ಕನಕಪುರ ಪ್ರಗತಿಪರ, ದಲಿತ ಪರ, ರೈತ ಪರ, ಕನ್ನಡ ಪರ, ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಸಾತನೂರು ಸಂತೆಮಾಳದಿಂದ ಅರಣ್ಯ ಇಲಾಖೆ ಕಚೇರಿವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು. ಜಿಲ್ಲಾ ಜಾಗೃತಿ ಸಮಿತಿಯ ಶಿವಲಿಂಗಯ್ಯ ಮಾತನಾಡಿ, ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ಸಮುದಾಯಗಳು 70ರಿಂದ 80 ವರ್ಷಗಳಿಂದ ಅರಣ್ಯದಂಚಿನಲ್ಲಿ ಸಾಗುವಳಿ ಮಾಡುತ್ತಿದ್ದು ಯಾವುದೇ ಸರ್ಕಾರಗಳು ಸಾಗುವಳಿ ಚೀಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾತನೂರು ವಲಯ ಅರಣ್ಯಾಧಿಕಾರಿಗಳು ದಿನನಿತ್ಯ ರೈತರಿಗೆ ಕಿರುಕುಳ ನೀಡುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶವನ್ನು ಅಧಿಕಾರಿಗಳು ಗಾಳಿಗೆ ತೂರಿ ಇದುವರೆಗೂ ರೈತರಿಗೆ ಸಾಗುವಳಿ ಚೀಟಿ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ರೈತರು ಉಳುಮೆ ಮಾಡುತ್ತಿರುವ ಭೂಮಿಯ ಮೇಲೆ ಅವಲಂಬಿತರಾಗಿದ್ದು ಕೂಡಲೇ ಅವರಿಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿದರು.

ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಅರಣ್ಯದಂಚಿನ ಗ್ರಾಮಗಳಲ್ಲಿ ಒಳ ಚರಂಡಿ ವ್ಯವಸ್ಥೆ ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಗ್ರಾಮಗಳಲ್ಲಿ ಅಡ್ಡಿಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ1978ರ ಪೂರ್ವದಿಂದಲೂ ಅರಣ್ಯದಂಚಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಸಾಗುವಳಿ ಮಾಡುತ್ತಿರುವ ಎಸ್ಸಿಎಸ್ಟಿ ಸಮುದಾಯಗಳನ್ನು ಒಕ್ಕಲೆಬ್ಬಿಸಬಾರದು ಎಂಬ ಆದೇಶವಿದ್ದರೂ ಸಾಗುವಳಿ ನೀಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದರೆ ಮುಂಚೂಣಿಯಲ್ಲಿರುವ ಹೋರಾಟಗಾರರನ್ನು ಶಾಸಕರು ಮತ್ತು ಮಾಜಿ ಸಂಸದರು ದೂಷಿಸುತ್ತಿದ್ದಾರೆ. ಅಂಬೇಡ್ಕರ್ ವಸತಿ ಯೋಜನೆ, ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಮನೆ ನೀಡಿದ್ದೇವೆಂದು ಹೇಳುತ್ತಾರೆ. ನಿವೇಶನಗಳು ಇನ್ನು ಫಲಾನುಭವಿಗಳ ಕೈ ಸೇರಿಲ್ಲ. ಕಿಟಕಿ ಬಾಗಿಲು ಕಳ್ಳ ಕಾಕರ ಪಾಲಾಗಿವೆ. ಮನೆಯ ಸುತ್ತ ಜೊಂಡು ಬೆಳೆದಿದೆ. ಮಳೆ ಬಂದರೆ ಮೇಲ್ಚಾವಣಿ ಸೋರುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜನಪರ ವೇದಿಕೆ ರಾಜ್ಯ ಕಾರ್ಯದರ್ಶಿ ರುದ್ರೇಶ್ ಕಹಳೆ, ನಲ್ಲಹಳ್ಳಿ ಶ್ರೀನಿವಾಸ್, ಗುರುಮೂರ್ತಿ, ಸಾತನೂರು ಮಲ್ಲಿಕಾರ್ಜುನ್, ಮಳಗಾಳು ದಿನೇಶ್, ಮಹಾದೇವ, ಜೀವನ್ ಮೂರ್ತಿ, ನಟರಾಜ್, ಛಲವಾದಿ ನವೀನ್, ಸಾತನೂರು ಸುರೇಶ್, ಬೊಮ್ಮನಹಳ್ಳಿ ಸುರೇಶ್, ಶಿವಮುತ್ತು ಇತರರು ಭಾಗವಹಿಸಿದ್ದರು.