ಸಾರಾಂಶ
ಕೆಲವರು ಸೊಸೈಟಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವಿಎಸ್‌ಎಸ್ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಾಯ್ಕ ತಿಳಿಸಿದರು.
ಹೊನ್ನಾವರ: ತಾಲೂಕಿನ ಜಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದವರು ಬೆಳೆಸಾಲ ಕೊಡುತ್ತಿಲ್ಲವೆಂದು ಆರೋಪಿಸಿ ರೈತರು ಬುಧವಾರ ಸೊಸೈಟಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಸಂಘದ ಹಿರಿಯ ರೈತ ಸದಸ್ಯ ಕೇಶವ ನಾಯ್ಕ ಮಾತನಾಡಿ, ಜಾಮೀನುದಾರ ಕಟ್ಟುಬಾಕಿದಾರರಾಗಿದ್ದರಿಂದ ನಮಗೂ ಬೆಳೆಸಾಲ ನೀಡುತ್ತಿಲ್ಲ. ಸಾಲಗಾರನಿಗೆ ಹೇಳಿ ಸಾಲ ತುಂಬಿಸಿಕೊಡಿ ಎನ್ನುತ್ತಾರೆ. ಸೊಸೈಟಿಯವರು ನಮಗೂ ಸಹಕರಿಸಿ, ಸಾಲಗಾರರಿಗೆ ಸಾಲ ತುಂಬಲು ಹೇಳಿ ಎಂದಿದ್ದೆವು. ಆದರೆ ಅವರು ನಮಗೆ ಸಹಕರಿಸಿಲ್ಲ ಎಂದರು.
ಬೆಳೆಸಾಲ, ಮಾಧ್ಯಮಿಕ ಸಾಲ ಸಕಾಲಕ್ಕೆ ಪೂರೈಸುತ್ತೇವೆ ಎಂದಿದ್ದರು. ನಾವೆಲ್ಲ ಬೆಳೆಸಾಲ ಸಂಪೂರ್ಣ ತುಂಬಿದ್ದೆವು. ಆದರೆ ಈಗ ಜಾಮೀನುದಾರರಾದ ನಮಗೂ ಬೆಳೆಸಾಲ ಕೊಡುತ್ತಿಲ್ಲ. ಒಂದೊಮ್ಮೆ ಸಾಲಗಾರ ಕಟ್ಟುಬಾಕಿಯಾದರೆ ಜಾಮೀನುದಾರರು ಬೆಳೆಸಾಲ ಪಡೆಯಲು ಅನರ್ಹನಾಗುತ್ತಾನೆ ಎಂದು ಮೊದಲೇ ಹೇಳಬೇಕಿತ್ತು. ಈಗ ಸಾಲಗಾರ ಸಾಲ ತುಂಬಿದರೆ ಮಾತ್ರ ಜಾಮೀನುದಾರನಿಗೆ ಸಾಲ ಕೊಡುತ್ತೇವೆ ಎನ್ನುತ್ತಾರೆ ಎಂದರು.ರೈತ ಮಹೇಂದ್ರ ಜೈನ್ ಮಾತನಾಡಿ, ಬೆಳೆಸಾಲ ಸಂಪೂರ್ಣ ತುಂಬಿದ ರೈತರಿಗೂ ಸಾಲ ನೀಡುತ್ತಿಲ್ಲ. ಕಾರಣ ತಿಳಿಯುತ್ತಿಲ್ಲ. ರೈತರಿಂದ ಸಂಸ್ಥೆಯೋ ಅಥವಾ ಸಂಸ್ಥೆಯಿಂದ ರೈತರೋ ಎನ್ನುವುದು ತಿಳಿಯುತ್ತಿಲ್ಲ ಎಂದರು.ರೈತ ಪ್ರಮೋದ್ ನಾಯ್ಕ ಮಾತನಾಡಿದರು. ಹನುಮಂತ ನಾಯ್ಕ ತುಂಬೊಳ್ಳಿ, ಮಂಜುನಾಥ ನಾಯ್ಕ, ಸತೀಶ ನಾಯ್ಕ, ಗಣೇಶ ನಾಯ್ಕ, ನಾಗರಾಜ ಶೆಟ್ಟಿ, ಗಣಪಯ್ಯ ನಾಯ್ಕ, ಸುಬ್ರಹ್ಮಣ್ಯ ನಾಯ್ಕ, ಈಶ್ವರ ನಾಯ್ಕ, ಸುರೇಶ ನಾಯ್ಕ ಮತ್ತಿತರಿದ್ದರು.
ಇಲ್ಲಸಲ್ಲದ ಆರೋಪ: ನಾವು ಯಾರಿಗೂ ಸಾಲ ನೀಡುವುದಿಲ್ಲ ಎಂದು ಹೇಳಿಲ್ಲ. ಒಂದು ಸಹಕಾರಿ ಸಂಸ್ಥೆ ಉತ್ತಮವಾಗಿ ಮುಂದುವರಿಯಬೇಕಾದರೆ ಅದರ ಗ್ರಾಹಕರು ಸರಿಯಾದ ಸಮಯದಲ್ಲಿ ಸಾಲ ತುಂಬಿದಾಗ ಮಾತ್ರ ಸಾಧ್ಯವಾಗುತ್ತದೆ. ಕೋಟ್ಯಂತರ ರುಪಾಯಿ ಸಾಲ ಬಾಕಿಯಾದರೆ ಕೆಡಿಸಿಸಿಯವರು ನಮ್ಮನ್ನು ಪ್ರಶ್ನಿಸುತ್ತಾರೆ. ಕೆಲವರು ಸೊಸೈಟಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವಿಎಸ್‌ಎಸ್ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಾಯ್ಕ ತಿಳಿಸಿದರು.