ಸಾರಾಂಶ
ರಾಮನಗರ: ಮಣ್ಣಿನ ಮಕ್ಕಳು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಸಾಗುವಳಿ ಚೀಟಿ ವಿತರಣೆಯಲ್ಲಿಯೂ ರಾಜಕಾರಣ ಮಾಡಿ ನೈಜ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ವಾಗ್ದಾಳಿ ನಡೆಸಿದರು.
ತಾಲೂಕಿನ ಕಸಬಾ ಹೋಬಳಿ ಹಾಗಲಹಳ್ಳಿ ಕಂದಾಯ ದಾಖಲೆ ಗ್ರಾಮ ವ್ಯಾಪ್ತಿಯ ಗದಗಯ್ಯನ ದೊಡ್ಡಿ, ಲಿಂಗೇಗೌಡನದೊಡ್ಡಿ, ಹಾಗಲಹಳ್ಳಿ ಗ್ರಾಮಗಳಲ್ಲಿ ರೈತರು ಸಲ್ಲಿಸಿರುವ ಫಾರಂ 50, 53 ಅರ್ಜಿಗಳಡಿ 49 ರೈತರ ಸಾಗುವಳಿ ಭೂಮಿಯನ್ನು ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರೈತರು ಸುಮಾರು 20 ರಿಂದ 25 ವರ್ಷಗಳ ಹಿಂದೆ ಸಾಗುವಳಿ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳು ಬಾಕಿ ಉಳಿದಿವೆ.
ಆಗಲೇ ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬಹುದಾಗಿತ್ತು. ಆದರೆ,ಭೂ ಮಂಜೂರಾತಿ ವಿಚಾರದಲ್ಲೂ ರಾಜಕಾರಣ ಮಾಡಿ ಅನೇಕ ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ. ಹಿಂದಿನ ಶಾಸಕರು ತಮಗೆ ಬೇಕಾದವರಿಗೆ ಭೂಮಿ ಮಂಜೂರು ಮಾಡಿದ್ದಾರೆ. ಉಳಿದ ಅರ್ಜಿಗಳನ್ನು ರಾಜಕೀಯ ಕಾರಣಗಳಿಗಾಗಿ ವಜಾ ಹಾಗೂ ಪುನರ್ ಪರಿಶೀಲನೆ ಎಂದು ಷರಾ ಬರೆದಿದ್ದಾರೆ. ಇಂತಹ ಅನೇಕ ಪ್ರಕರಣಗಳು ಬಾಕಿ ಉಳಿದಿವೆ ಎಂದು ಟೀಕಿಸಿದರು.
ಕಳೆದ 30 ವರ್ಷದಿಂದ ರೈತರು ಸಾಗುವಳಿ ಚೀಟಿ ಪಡೆಯಲು ಫಾರಂ 50, 53ರ ಅಡಿ ಅರ್ಜಿ ಸಲ್ಲಿಸಿದಾಗ ಹಿಂದಿನ ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷರು, ಸದಸ್ಯರು ಅರ್ಜಿ ವಿಲೇವಾರಿ ಮಾಡಿ ಉಳುಮೆ ಮಾಡುತ್ತಿರುವ ರೈತನಿಗೆ ಸಾಗುವಳಿ ಚೀಟಿ ಕೊಡಿಸುವ ಕೆಲಸ ಮಾಡದೆ ಬೇಕಾದವರಿಗೆ ಮಂಜೂರು ಮಾಡಿದ್ದಾರೆ. ಮಣ್ಣಿನ ಮಕ್ಕಳ ರಾಜಕಾರಣ ರೈತನನ್ನು ಸಂಕಷ್ಟಕ್ಕೆ ದೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಕಾಲದಲ್ಲಿಯೇ ಸಾಗುವಳಿದಾರರ ಅರ್ಜಿ ವಿಲೇಮಾಡದ ಪರಿಣಾಮ ಇಂದು ರೈತರು ಬಿಎಂಐಸಿಪಿ, ಬಿಬಿಎಂಪಿ, ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಿರುವ ಸಾಗುವಳಿ ಭೂಮಿಗೆ ಸರ್ಕಾರದ ಮಾರ್ಗಸೂಚಿಯಿಂದ ಕೆಲವು ಕಾನೂನು ತೊಡಕುಗಳನ್ನು ಎದುರಿಸುವಂತಾಗಿದೆ. 1992ಕ್ಕೂ ಹಿಂದೆಯೇ ರೈತರು ಅರ್ಜಿ ಸಲ್ಲಿಸಿದ್ದಾರೆ. ಕೆಲವು ಅರ್ಜಿದಾರರು ಮೃತಪಟ್ಟಿದ್ದಾರೆ. ಆದರೆ, ಸರ್ಕಾರ ಹೊಸ ಕಾನೂನು ತಂದರೆ ಸಾಗುವಳಿ ವಿತರಣೆ ಮಾಡಲು ಕಷ್ಟವಾಗುತ್ತದೆ.
25 ರಿಂದ 30 ವರ್ಷಗಳ ಹಿಂದೆ ಸಲ್ಲಿಸಿದ ಅರ್ಜಿಗಳಿಗೆ ಈಗಿನ ಕಾನೂನನ್ನು ಮುಂದಿಟ್ಟುಕೊಂಡು ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಈ ವಿಷಯವಾಗಿ ಬಡ ರೈತರ ನೆರವಿಗೆ ನಿಂತು ನ್ಯಾಯ ಕೊಡಬೇಕೆಂದು ಈಗಾಗಲೇ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಭರವಸೆ ನೀಡಿರುವುದರಿಂದಲೇ ಈಗಾಗಲೇ ಗೋಮಾಳ ಅವಲಂಬಿಸಿ ಬದುಕು ನಡೆಸುತ್ತಿರುವ ಹರೀಸಂದ್ರ ಗ್ರಾಮ ವ್ಯಾಪ್ತಿಯ ಸುಮಾರು 250 ರಿಂದ 300ಸಾಗುವಳಿ ರೈತರ ಅರ್ಜಿ ವಿಲೇವಾರಿ ಮಾಡಿ ಅವರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ವಹಿಸಲಾಗಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.ಭೂಮಿ ಪರಿಶೀಲನೆ ವೇಳೆ ಶಾಸಕರು ಈ ಹಿಂದೆ ಸಲ್ಲಿಸಿರುವ ಅರ್ಜಿಗಳನ್ನು ತಾರದ ರಾಜಸ್ವ ನಿರೀಕ್ಷರ ವಿರುದ್ಧ ಗರಂ ಆದರು. ಸ್ಥಳ ಪರಿಶೀಲನೆ ಸಮಯದಲ್ಲಿ ರೈತರ ಅರ್ಜಿ, ಅರ್ಜಿ ಯಾವ ಹಂತದಲ್ಲಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇರಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದರು.
ಈ ವೇಳೆ ತಹಸೀಲ್ದಾರ್ ತೇಜಸ್ವಿನಿ, ಸಾಗುವಳಿ ಸಮಿತಿ ಸದಸ್ಯರಾದ ಜಯಕರ್ನಾಟಕ ರವಿ, ತಿಮ್ಮಯ್ಯ, ಅಮೃತಾ, ಗ್ರಾಪಂ ಅಧ್ಯಕ್ಷೆ ಅರ್ಪಿತಾಹರೀಶ್, ಉಪಾಧ್ಯಕ್ಷ ಗೋವಿಂದರಾಜು, ಮುಖಂಡರಾದ ಆಂಜನಪ್ಪ, ವಾಸು, ಉಮಾಶಂಕರ್, ಸಿ.ರಾಮಯ್ಯ, ಕಗ್ಗಲ್ಲಯ್ಯ, ಚಿಕ್ಕಸ್ವಾಮಿ, ವಸಂತ, ಉಮೇಶ್, ವೆಂಕಟಪ್ಪ, ಕಾಶಪ್ಪ ಸೇರಿದಂತೆ ಸಾಗುವಳಿದಾರ ರೈತರು, ಕಂದಾಯ ಇಲಾಖಾ ಅಧಿಕಾರಿಗಳು ಹಾಜರಿದ್ದರು.ಕೋಟ್ ............
ರೈತರ ಮಕ್ಕಳು, ಮಣ್ಣಿನ ಮಕ್ಕಳೆಂದು ಬಾಯಲ್ಲಿ ಹೇಳಿಕೊಂಡು ನಿಮ್ಮ ಆರ್ಶೀವಾದ ಪಡೆದವರು ರೈತರ ಭೂಮಿಯ ಮೇಲೆ ಓಡಾಡಲಿಲ್ಲ, ಬೆವರು ಸುರಿಸಲಿಲ್ಲ. ಹಾಗಾಗಿ ಅವರಿಗೆ ಸಾಗುವಳಿ ಅರ್ಜಿದಾರರ ಸಂಕಷ್ಟ ಅರ್ಥವಾಗಿರಲಿಲ್ಲ. ನಾನು ರೈತನ ಮಗನಾಗಿರುವುದರಿಂದ ನಾನು ರೈತರ ಸಾಗುವಳಿ ಸ್ಥಳಕ್ಕೆ ಅಧಿಕಾರಿ ಗಳೊಂದಿಗೆ ಬಂದು ಪರಿಶೀಲಿಸುತ್ತಿದ್ದೇನೆ. ರೈತರಿಗೆ ಎದುರಾಗಿರುವ ತೊಡಕನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಅರ್ಜಿದಾರರೆಲ್ಲರಿಗೂ ಸಾಗುವಳಿ ಚೀಟಿಗಳ ವಿತರಣೆಗೆ ಮುಂದಾಗಿದ್ದೇನೆ.-ಇಕ್ಬಾಲ್‌ಹುಸೇನ್, ಶಾಸಕರು, ರಾಮನಗರ ಕ್ಷೇತ್ರ
12ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಕಸಬಾ ಹೋಬಳಿ ಹಾಗಲಹಳ್ಳಿ ಕಂದಾಯ ದಾಖಲೆ ಗ್ರಾಮ ವ್ಯಾಪ್ತಿಯ ಗದಗಯ್ಯನ ದೊಡ್ಡಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಅಧಿಕಾರಿಗಳೊಂದಿಗೆ ಸಾಗುವಳಿ ಭೂಮಿ ವೀಕ್ಷಣೆ ಮಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))