ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಜಮೀನು ಸ್ವಾಧೀನವನ್ನು ಕೆಐಎಡಿಬಿ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧಿಕಾರಿ ಕಚೇರಿ ಮುಂದೆ 80 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, 81 ನೇ ದಿನವಾದ ಶುಕ್ರವಾರ ಜಿಲ್ಲಾಡಳಿತ ಭವನದಿಂದ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬೈಕ್ ರ್‍ಯಾಲಿ ಮೂಲಕ ತೆರಳುತ್ತಿದ್ದಾಗ ಅಣಕನೂರು ಗೇಟ್ ಬಳಿ ತಡೆದ ಪೊಲೀಸರು ಮತ್ತು ಜಿಲ್ಲಾಡಳಿತ ಪ್ರತಿಭಟನಾಕಾರರೊಂದಿಗೆ ನಡೆಸಿದ ಸಂಧಾನ ಫಲಪ್ರದವಾಗಿದ್ದು ಬೈಕ್ ರ್‍ಯಾಲಿಯನ್ನು 15 ದಿನಗಳವರೆಗೆ ಮುಂದೂಡಲಾಗಿದೆ.ಸಂಘಟನೆಗಳಾದ ಮಾನವ ಹಕ್ಕುಗಳ ಕಮಿಟಿ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ. ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಸಾಮಾಜಿಕ ಕಾರ್ಯಕರ್ತರ ವೇದಿಕೆ, ಬಿಜೆಪಿ, ಜಿಲ್ಲಾ ಜೆಡಿಎಸ್ ಇನ್ನೂ ಹಲವು ಪ್ರಗತಿಪರ ಸಂಘಟನೆಗಳು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಆನಂದ ಗುರೂಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ದಲಿತ ಮುಖಂಡ ಎನ್. ಮೂರ್ತಿ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ದರು. ಪೊಲೀಸರು ಅಣಕನೂರು ಗೇಟ್ ಬಳಿ ಬೈಕ್ ರ್‍ಯಾಲಿಯನ್ನು ತಡೆದರು.
ಬಳಿಕ ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಮಾತುಕತೆಗೆ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಮತ್ತು ಎಸ್ಪಿ ಕುಶಲ್ ಚೌಕ್ಸೆ ಬಂದಿದ್ದರು. ಆಗ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಪ್ರತಿಭಟನಾನಿರತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಭಕ್ತರಹಳ್ಳಿ ಬೈರೇಗೌಡ, ಆನಂದ್ ಗುರೂಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿಕಲ್ ರಾಮಚಂದ್ರಗೌಡ, ದಲಿತ ಮುಖಂಡ ಎನ್. ಮೂರ್ತಿ ಅವರೊಂದಿಗೆ ಮಾತುಕತೆ ನಡೆಸಿದರು. ಇನ್ನು 15 ದಿನಗಳೊಳಗಾಗಿ ನಿಮ್ಮ ಬೇಡಿಕೆ ಸಂಬಂಧಿಸಿ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯೊಂದಿಗೆ ಮಾತುಕತೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಇದಕ್ಕೊಪ್ಪಿದ ಮುಖಂಡರು 15 ದಿನಗಳಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.ಇದೇ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ತಮ್ಮ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಜಂಗಮಕೋಟೆಯಲ್ಲಿ ಕೈಗಾರಿಕೆ ತೆರೆಯುವ ಉದ್ದೇಶದಿಂದ ರೈತರ ಫಲವತ್ತಾದ ಭೂಮಿ ಕಸಿದು ಕೊಳ್ಳುತ್ತಿರುವ ಸರ್ಕಾರದ ವಿರುದ್ಧ ನಮ್ಮ ಈ ಹೋರಾಟ. ದೇಶಕ್ಕೆ ಅನ್ನ ಕೊಡುವ ಭೂಮಿಯನ್ನು ಉಳಿಸುವ ಹೋರಾಟ ಇದಾಗಿದ್ದು ಮುಖ್ಯಮಂತ್ರಿ ಗಮನಹರಿಸಿ ತಕ್ಷಣ ಕೆಐಎಡಿಬಿ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತ ಭವನದ ಮುಂದೆ ನಡೆಸುತ್ತಿರುವ ಪ್ರತಿಭಟನೆಯನ್ನು ಈ 15 ದಿನಗಳು ಮುಂದುವರಿಸುತ್ತೇವೆ. 15 ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಸರ್ಕಾರದ ಮುಂದಿನ ಆದೇಶದವರೆಗೆ ನಾವು ಕಾಯುತ್ತೇವೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ರೈತರ ಪರವಾಗಿ ನಮ್ಮ ಪಕ್ಷ ಇರುತ್ತದೆ. ಯಾವುದೇ ಕಾರಣಕ್ಕೂ ನಮ್ಮ ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೂ ನಾವು ಎದೆಗುಂದುವುದಿಲ್ಲ ಎಂದು ತಿಳಿಸಿದರು.ಆನಂದ ಗುರೂಜಿ ಮಾತನಾಡಿ, ಇದು ನನ್ನ ಸ್ವಂತ ಜಿಲ್ಲೆಯ ಸಮಸ್ಯೆಯಾಗಿದೆ. ರಾಜ್ಯದ ಅನ್ನದಾತರ ಪರವಾಗಿ ಸದಾ ಇರುತ್ತೇನೆ ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ಸುಮಾರು 1500 ರೈತರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರೈತಸಂಘದ ಕಾರ್ಯಾಧ್ಯಕ್ಷ ಭಕ್ತರಳ್ಳಿ ಬೈರೇಗೌಡ, ಮಾಜಿ ಶಾಸಕ ಎಂ. ರಾಜಣ್ಣ, ದಸಂಸ ಮುಖಂಡ ಎನ್. ಮೂರ್ತಿ, ಉಲ್ಲೂರುಪೇಟೆ ನಾರಾಯಣಸ್ವಾಮಿ, ಹಿತ್ತಹಳ್ಳಿ ರಮೇಶ್, ಗೋಪಾಲ್, ಗಿರೀಶ್ ಸೇರಿ ನೂರಾರು ಮಂದಿ ರೈತರು ಇದ್ದರು.ಸಿಕೆಬಿ-3... ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ.