ಬ್ಯಾಡಗಿ: ಬ್ಯಾಂಕ್ ಸಿಬ್ಬಂದಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಹಾಗೂ ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಒತ್ತಾಯಿಸಿ ತಾಲೂಕಿನ ಚಿಕ್ಕಬಾಸೂರ ಗ್ರಾಮದ ಕೆವಿಜಿ ಬ್ಯಾಂಕ್‌ಗೆ ಶುಕ್ರವಾರ ರೈತರು ಹಾಗೂ ಮಹಿಳೆಯರು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಎದುರಿಗೆ ಜಮಾಯಿಸಿದ ನೂರಾರು ರೈತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ಸಾರ್ವಜನಿಕರಿಗೆ ಸೌಲಭ್ಯ ನೀಡದ ಬ್ಯಾಂಕ್ ವಿರುದ್ಧ ಆಕ್ರೋಶ ಹೊರಹಾಕಿದರು.ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಚಿಕ್ಕಬಾಸೂರ ಗ್ರಾಮದ ಕೆವಿಜಿ ಬ್ಯಾಂಕ್ ಅವ್ಯವಸ್ಥೆ ನೋಡಿ ಬೇಸತ್ತಿದ್ದೇವೆ, ಇಲ್ಲಿ ಸಿಬ್ಬಂದಿ ಕೊರತೆಯಿಂದ ರೈತರು ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಇದರೊಟ್ಟಿಗೆ ಮ್ಯಾನೇಜರ್ ಇಲ್ಲದೇ ಹಲವು ತಿಂಗಳುಗಳು ಕಳೆದಿವೆ ಹೀಗಿದ್ದರೂ ಸಹ ಇಲ್ಲಿವಯರೆಗೂ ವ್ಯವಸ್ಥಾಪಕರ ನೇಮಕವಾಗಿಲ್ಲ. ಇದರಿಂದ ರೈತರು ತಮ್ಮ ಕೆಲಸಗಳಿಗಾಗಿ ಬ್ಯಾಂಕ್‌ಗೆ ಅಲೆದಾಡಿ ಹೈರಾಣಾಗಿದ್ದಾರೆ ಎಂದರು. ಗ್ರಾಮದ ಮಹಿಳಾ ಸಂಘದ, ಸಾಲ ಮರುಪಾವತಿ ಮಾಡಿದರೂ ಸಹ ಮತ್ತೆ ಸಾಲ ನೀಡಲು ಬ್ಯಾಂಕ್ ನಲ್ಲಿ ಇಲ್ಲಸಲ್ಲದ ಸಬೂಬು ಹೇಳಲಾಗುತ್ತಿದೆ, ಶಿಲ್ಪಾ ತವಣಪ್ಪವರ ಅಲ್ಲದೇ ಇಲ್ಲಿ ಕೇವಲ ಇಬ್ಬರು ಸಿಬ್ಬಂದಿ ಇದ್ದು ಎಲ್ಲವನ್ನು ಅವರೇ ಮಾಡಲು ಸಾಧ್ಯವಾಗದ ಕಾರಣ ಬ್ಯಾಂಕ್ ಸಹಕಾರವಿಲ್ಲದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬರದಂತಾಗಿದೆ, ಅಲ್ಲದೇ ರೈತರಿಗೆ ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡಲು ಸಹ ಮ್ಯಾನೇಜರ್ ಇಲ್ಲದಂತಾಗಿದೆ ಎಂದು ದೂರಿದರು. ಈ ವೇಳೆ ಮಲ್ಲನಗೌಡ್ರ ಚನ್ನಗೌಡ್ರ, ಜಗದೀಶ ಕಣಗಲಬಾವಿ, ಗುಣಪಾಲ ತವನಪ್ಪನವರ, ಜಗದೀಶ ಕಿರಾವಾಡಿ ಸಿದ್ದಪ್ಪ ಅಜಗೊಂಡರ, ನೂರುಲ್ಲಾ ಕಳಗೊಂಡ, ಮುನಾಫಸಾಬ್ ಅಜ್ಜಣ್ಣನವರ, ಕುಸುಮಾ ಹಂಚಿನಮನಿ ಉಪಸ್ಥಿತರಿದ್ದರು.ಕೇವಲ ಇಬ್ಬರು ಸಿಬ್ಬಂದಿಗಳಿರುವ ಕಾರಣ ಕೆಲಸದ ಒತ್ತಡ ಹಚ್ಚಾಗಿದೆ. ಇಲ್ಲಿರುವ ಸಿಬ್ಬಂದಿಗಳಿಗೆ ವೈಯಕ್ತಿಕ ಕೆಲಸಗಳಿಗೆ ರಜೆ ಸಹ ಸಿಗುತ್ತಿಲ್ಲ. ಎಲ್ಲವನ್ನು ಅವರೇ ಮಾಡಲು ಸಾಧ್ಯವಾಗದ ಕಾರಣ ಗ್ರಾಹಕರ ಕೆಲಸ ವಿಳಂಬವಾಗುತ್ತಿದೆ.