ಕನ್ನಡಪ್ರಭ ವಾರ್ತೆ ಸವದತ್ತಿಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳಿಗೆ ತಕ್ಷಣ ಕುಡಿಯುವ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಗುರುವಾರ ಜಾಕ್‌ವೆಲ್ ಸಮೀಪ ಗೋಕಾಕ–ಧಾರವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 11 ಗಂಟೆಗೆ ಆರಂಭವಾದ ರಸ್ತೆ ತಡೆ ಹೋರಾಟ ಸಂಜೆ 7 ಗಂಟೆಯಾದರೂ ಮುಂದುವರಿದಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳಿಗೆ ತಕ್ಷಣ ಕುಡಿಯುವ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಗುರುವಾರ ಜಾಕ್‌ವೆಲ್ ಸಮೀಪ ಗೋಕಾಕ–ಧಾರವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ 11 ಗಂಟೆಗೆ ಆರಂಭವಾದ ರಸ್ತೆ ತಡೆ ಹೋರಾಟ ಸಂಜೆ 7 ಗಂಟೆಯಾದರೂ ಮುಂದುವರಿದಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಶಂಕರ ಅಂಬಲಿ, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಮಲಪ್ರಭಾ ನದಿ ಪಾತ್ರದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಹೀಗಾಗಿ ತಕ್ಷಣ ಕಾಲುವೆಗಳ ಮೂಲಕ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ರೈತ ಹೋರಾಟಗಾರ ಮಹಾಂತೇಶ ಪಂಚನ್ನೆವರ ಮಾತನಾಡಿ, ಮಲಪ್ರಭಾ ನದಿಯ ನೀರನ್ನು ಕೈಗಾರಿಕೆಗಳು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಯಾವುದೇ ವಿಳಂಬವಿಲ್ಲದೆ ಹರಿಸಲಾಗುತ್ತಿದೆ. ಆದರೆ, ರೈತರು ಕುಡಿಯುವ ನೀರಿಗಾಗಿ ಮನವಿ ಮಾಡಿದರೆ ಸಭೆ, ಮೇಲಧಿಕಾರಿಗಳ ಅನುಮತಿಯ ನೆಪ ಹೇಳಿ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ನೀರಿನ ಅವಶ್ಯಕತೆ ಇದ್ದಾಗಲೇ ಪೂರೈಸಬೇಕು. ಎಲ್ಲವೂ ಮುಗಿದ ಬಳಿಕ ನೀರು ಹರಿಸಿದರೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳಿಗೆ ತಕ್ಷಣ ನೀರು ಹರಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ಎನ್. ಮಠದ, ನೀರಾವರಿ ನಿಗಮದ ಅಧಿಕಾರಿ ಬಿಸ್ನಾಳ ಹಾಗೂ ಸಿಪಿಐ ಸುರೇಶ ಬೆಂಡೆಗುಂಬಳ ಅವರು ರೈತರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಪ್ರಯತ್ನಿಸಿದರು. ಆದರೆ ಅಧಿಕಾರಿಗಳ ಮನವಿಗೆ ಒಪ್ಪದ ರೈತರು, ಕಾಲುವೆಗಳಿಗೆ ನೀರು ಹರಿಸುವ ಕುರಿತು ಸ್ಪಷ್ಟ ಭರವಸೆ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದರು.

ರಸ್ತೆ ತಡೆ ಹಿನ್ನೆಲೆಯಲ್ಲಿ ಗೋಕಾಕ–ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪೊಲೀಸರು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದರಿಂದ ವಾಹನಗಳು ಯಲ್ಲಮ್ಮನಗುಡ್ಡದ ಮಾರ್ಗವಾಗಿ ಸುತ್ತುವರಿದು ಸಂಚರಿಸಿದವು.

ಪ್ರತಿಭಟನೆಯಲ್ಲಿ ಶಂಕರಗೌಡ ಪಾಟೀಲ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ಹೇಮರಡ್ಡಿ ಹುಚರಡ್ಡಿ, ಕೆ.ಡಿ. ರಾಯನಗೌಡರ, ವಾಸುರಡ್ಡಿ ಹುಚರಡ್ಡಿ, ಮುತ್ತು ಕೌಜಗೇರಿ, ಎನ್.ಕೆ. ರಾಯನಗೌಡರ, ಯಲ್ಲರಡ್ಡಿ ಹುಚರಡ್ಡಿ, ಜಯಶಂಕರ ವಣ್ಣೂರ, ಶಿವಾನಂದ ಮೇಟಿ, ರಮೇಶ ಹಳಕಟ್ಟಿ, ಶ್ರೀಕಾಂತ ಮಾಗುಂಡ, ಜಿ.ಎನ್. ಶ್ರೀಹರಿ, ಪ್ರವೀಣ ಯರಗಟ್ಟಿ, ಶ್ರೀಶೈಲ್ ಕೌಜಗೇರಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.