ಸಾರಾಂಶ
ಚಾಮರಾಜನಗರದಲ್ಲಿ ಆಯೋಜನೆ ಮಾಡಿದ್ದ ಮಕ್ಕಳ ಸಂತೆಯನ್ನು ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತರು ತಾವು ಬೆಳೆದ ಫಸಲುಗಳಿಗೆ ಮಧ್ಯವರ್ತಿಗಳನ್ನು ನಂಬಿಕೊಳ್ಳದೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವ ಮೂಲಕ ಆರ್ಥಿಕ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದು ಸಾಮೂಹಿಕ ನಾಯಕತ್ವ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.ತಾಲೂಕಿನ ವೆಂಕಟಯ್ಯನಛತ್ರದಲ್ಲಿರುವ ಪ್ರೇರಣಾ ವಿದ್ಯಾಸಂಸ್ಥೆಯಲ್ಲಿ ಆಯೋಜನೆ ಮಾಡಿದ್ದ ಮಕ್ಕಳ ಸಂತೆಯನ್ನು ಉದ್ಘಾಟಿಸಿ, ಮಕ್ಕಳು ಮಾರಾಟಕ್ಕೆ ಇಟ್ಟಿದ್ದ ಪದಾರ್ಥಗಳನ್ನು ಖರೀದಿಸಿ ಸಂತಸ ವ್ಯಕ್ತಪಡಿಸಿ ಮಾತನಾಡಿದರು.
ರೈತರ ಮಕ್ಕಳು ರೈತರಾಗಿ ಜಮೀನಿನಲ್ಲಿ ಉಳುಮೆ ಮಾಡಲು ಸಿದ್ಧರಿಲ್ಲ. ಜಮೀನಿನಲ್ಲಿ ಉತ್ತಿ, ಭಿತ್ತಿ ಫಸಲು ತೆಗೆಯುವ, ಮನಸ್ಥಿತಿ ಕ್ರಮೇಣ ಕಡಿಮೆಯಾಗುತ್ತದೆ. ಎಲ್ಲರೂ ಡಾಕ್ಟರ್, ಎಂಜಿನಿಯರ್, ಸರ್ಕಾರಿ ನೌಕರರಾಗಬೇಕೆಂಬ ಆಸೆ ಹೆಚ್ಚಾಗುತ್ತಿದೆ. ಇನ್ನು ದೇಶದ ೧೪೦ ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವವರು ರೈತರು, ಅವರ ಸಂಕಷ್ಟಗಳನ್ನು ಬಂದ ಸರ್ಕಾರಗಳು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ. ಅವರಿಗೆ ಮೂಲಸೌಲಭ್ಯಗಳು, ವೈಜ್ಞಾನಿಕ ಬೆಲೆ ನಿಗದಿ, ಸಾವಯವ ಕೃಷಿ, ನೈಸರ್ಗಿಕ ಕೃಷಿಗಳ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲವಾಗಿರುವುದು ರೈತರ ಇಂದಿನ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದರು.ಮಕ್ಕಳಿಗೆ ವ್ಯವಹಾರಿಕ ಜ್ಞಾನ ವೃದ್ಧಿ:
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ಮಕ್ಕಳು ರೈತರ ಮಕ್ಕಳಾಗಿದ್ದಾರೆ. ಹೀಗಾಗಿ ಅವರಿಗೆ ಪಠ್ಯ ಚಟುವಟಿಕೆಗಳ ಜತೆಗೆ ಇಂಥ ಮಕ್ಕಳ ಸಂತೆ ಕಾರ್ಯಕ್ರಮಗಳ ಮೂಲಕ ವ್ಯಾವಹಾರಿಕ ಜ್ಞಾನ ವೃದ್ದಿಸುತ್ತದೆ. ಲಾಭ, ನಷ್ಟಗಳ ಪರಿಕಲ್ಪನೆ ಮೂಡುತ್ತಿದೆ. ಅತ್ಯಂತ ಉಪಯುಕ್ತ ಕಾರ್ಯಕ್ರಮವ ಇದಾಗಿದೆ ಎಂದರು.ಪ್ರೇರಣಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಶಾಲಾ ಆಡಳಿತ ಮಂಡಳಿಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜತೆಗೆ ಮಕ್ಕಳಲ್ಲಿ ಕಲಿಕೆ ದಿನಗಳಲ್ಲಿ ವ್ಯಾವಹಾರಿಕ ಜ್ಞಾನ ವೃದ್ಧಿಯಾಗಲಿ ಎಂಬ ಉದ್ದೇಶದಿಂದ ಮಕ್ಕಳ ಸಂತೆಯನ್ನು ಆಯೋಜನೆ ಮಾಡಿದ್ದೇವೆ. ಮಕ್ಕಳು ಬಹಳ ಉತ್ಸಾಹದಿಂದ ತಾವೇ ಸ್ವಂತ ತಯಾರು ಮಾಡಿರುವ ವಸ್ತುಗಳನ್ನು ಮಾರಾಟಕ್ಕಿಟ್ಟು ಲಾಭ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಮೇಳದಲ್ಲಿ ಹೆಚ್ಚು ಮಾರಾಟ ಮಾಡಿ. ಲಾಭ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದರು.
ಟ್ರಸ್ಟಿಗಳಾದ ಶಿವಸ್ವಾಮಿ, ನಟರಾಜನ್, ಮುಖ್ಯ ಶಿಕ್ಷಕ ಎಚ್.ಜಿ.ಮಹೇಶ್‌ಕುಮಾರ್, ಶಾಲೆಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಇದ್ದರು.