ರೈತ ಬಾಂಧವರೇ ಮಣ್ಣಿನ ಋಣ ತೀರಿಸಲಾಗದು: ಸಿ.ಚಂದನ್ ಗೌಡ

| Published : Sep 26 2025, 01:00 AM IST

ರೈತ ಬಾಂಧವರೇ ಮಣ್ಣಿನ ಋಣ ತೀರಿಸಲಾಗದು: ಸಿ.ಚಂದನ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಣ್ಣಿನ ಫಲವತ್ತತೆ, ಮಣ್ಣಿನ ರಕ್ಷಣೆ ಮತ್ತು ಮಣ್ಣಿನ ನಿರ್ವಹಣೆಯ ಬಗ್ಗೆ ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸವಾಲು ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಹಾಗೂ ಮಣ್ಣು ಮತ್ತು ಅನ್ನದ ಋಣ ತೀರಿಸುವ ಸಲುವಾಗಿ ಋಣದ ಪ್ರಜ್ಞೆಯೊಂದಿಗೆ ರೈತ ಕಲ್ಯಾಣ, ಪ್ರತಿಯೊಂದು ಗ್ರಾಮಗಳಲ್ಲಿ ‘ಮಣ್ಣು ರಕ್ಷಿಸಿ-ಮಣ್ಣಿಗೆ ಮರು ಜೀವ ವಿಶೇಷ ಅಭಿಯಾನ ಕೈಗೊಂಡು, ಅನ್ನದಾತರಲ್ಲಿ ಅರಿವು ಮೂಡಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಣ್ಣು ಜೀವಂತವಾಗಿದ್ದರೆ ಮಾತ್ರ ರೈತರ ಬದುಕು ಜೀವಂತವಾಗಿರುತ್ತದೆ. ಆದ್ದರಿಂದ ರೈತ ಬಾಂಧವರೇ ಮಣ್ಣನ್ನು ಜೀವಂತವಾಗಿ ಇರಿಸಿಕೊಳ್ಳಿ ಮತ್ತು ಮಣ್ಣಿನ ಜೀವ ವೈವಿಧ್ಯತೆಯನ್ನು ರಕ್ಷಿಸಿಕೊಳ್ಳಿ ಎಂದು ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ. ಚಂದನ್ ಗೌಡ ಸಲಹೆ ನೀಡಿದರು.

ಮೈಸೂರು ತಾಲೂಕು ಜಯಪುರ ಹೋಬಳಿ ಮದ್ದೂರು ಹುಂಡಿ ಗ್ರಾಮ ಮತ್ತು ಎಚ್.ಡಿ. ಕೋಟೆ ತಾಲೂಕು ಎಚ್. ಮಟಕೆರೆ ಗ್ರಾಮದಲ್ಲಿ ಮಂಗಳವಾರ ನಡೆದ ‘ಮಣ್ಣು ರಕ್ಷಿಸಿ-ಮಣ್ಣಿಗೆ ಮರು ಜೀವ’ ಎಂಬ ವಿಶೇಷ ಅಭಿಯಾನದಲ್ಲಿ ಅವರು ಮಾತನಾಡಿದರು.

ಮಣ್ಣಿನ ಫಲವತ್ತತೆ, ಮಣ್ಣಿನ ರಕ್ಷಣೆ ಮತ್ತು ಮಣ್ಣಿನ ನಿರ್ವಹಣೆಯ ಬಗ್ಗೆ ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸವಾಲು ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಹಾಗೂ ಮಣ್ಣು ಮತ್ತು ಅನ್ನದ ಋಣ ತೀರಿಸುವ ಸಲುವಾಗಿ ಋಣದ ಪ್ರಜ್ಞೆಯೊಂದಿಗೆ ರೈತ ಕಲ್ಯಾಣ, ಪ್ರತಿಯೊಂದು ಗ್ರಾಮಗಳಲ್ಲಿ ‘ಮಣ್ಣು ರಕ್ಷಿಸಿ-ಮಣ್ಣಿಗೆ ಮರು ಜೀವ ವಿಶೇಷ ಅಭಿಯಾನ ಕೈಗೊಂಡು, ಅನ್ನದಾತರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದರು.

ಮನುಷ್ಯನ ನಾಗರಿಕತೆ ಒಂದು ಇಂಚು ಆಗಲು ಕನಿಷ್ಠ ಸಾವಿರಾರು ವರ್ಷಗಳು ಬೇಕಾಗುತ್ತವೆ. ಆದರೆ ಕ್ಷಣಾರ್ಧದಲ್ಲಿ ಆಗುವ ಮಣ್ಣಿನ ಅವನತಿಯನ್ನು ತಡೆಯಲು ವಿಫಲವಾಗಿರುವುದರಿಂದ ಜಗತ್ತಿನ ಎಷ್ಟು ದೊಡ್ಡ-ದೊಡ್ಡ ನಾಗರಿಕತೆಗಳೇ ಅಳಿದು ಹೋಗಿವೆ. ಮಣ್ಣಿನ ಫಲವತ್ತತೆಯು ಜೈವಿಕ ಭೌತಿಕ ಮತ್ತು ಸಾಮಾಜಿಕ ಆಸ್ತಿಯಾಗಿದೆ. ಆದರೆ ಅದು ಹಸಿರು ಕ್ರಾಂತಿಯ ಪರಿಣಾಮದಿಂದಾಗಿ ಆಧುನಿಕ ಕೃಷಿ ಮತ್ತು ಮಾನವ ಹಸ್ತಕ್ಷೇಪ ಚಟುವಟಿಕೆಗಳಿಂದ ಮಣ್ಣಿನ ಫಲವತ್ತತೆ ಕುಸಿದು ಹೋಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜಗತ್ತಿನ ಜನಸಂಖ್ಯೆಯಲ್ಲಿ ನಮ್ಮ ದೇಶ ಮೊದಲನೇ ಸ್ಥಾನದಲ್ಲಿದೆ ಎಂದ ಚಂದನ್ ಗೌಡ, ಜನಸಂಖ್ಯೆಗೆ ತಕ್ಕಂತೆ ಆಹಾರ ಮತ್ತು ಪರಿಸರ ಸಂರಕ್ಷಣೆ ಸಾಧಿಸಲು ಹಾಗೂ ಜನರ ಹಸಿವನ್ನು ನೀಗಿಸಲು, ಆಹಾರ ಭದ್ರತೆಯನ್ನು ಕಾಪಾಡಲು, ಮಣ್ಣಿನ ಸುರಕ್ಷತೆ ಬಗ್ಗೆ ಮಣ್ಣಿನ ಆರೋಗ್ಯದ ಬಗ್ಗೆ ಬಹಳ ಸುಧಾರಣೆ ತರುವಂತ ಮಣ್ಣಿನ ಸಂರಕ್ಷಣಾ ಕಾಯ್ದೆಯನ್ನು ಶೀಘ್ರವೇ ಜಾರಿಗೆ ತರಬೇಕು ಎಂದು ರೈತ ಕಲ್ಯಾಣ ಅಗ್ರಹಿಸುತ್ತದೆ ಎಂದು ಅವರು ಹೇಳಿದರು.

ಭೂಮಿಯ ಮೇಲೆ ಯಾವ ಋಣವನ್ನಾದರೂ ತಿಳಿಸಬಹುದು. ಆದರೆ ಮಣ್ಣಿನ ಋಣವನ್ನು ತೀರಿಸಲಾಗದು. ಮಣ್ಣು ಇಲ್ಲದೆ ಯಾವುದೇ ಜೀವ ಸಂಕುಲವಿಲ್ಲ. ಮಣ್ಣು ಆರೋಗ್ಯವಾಗಿರದೆ ಮನುಷ್ಯನ ಆರೋಗ್ಯ ಎಂದಿಗೂ ಸಾಧ್ಯವಿಲ್ಲ. ವಿಶ್ವಸಂಸ್ಥೆಯ ಪ್ರಕಾರ ಈಗಾಗಲೇ ಶೇ. 60 ರಷ್ಟು ಮಣ್ಣು ರಾಸಾಯನಿಕ ಬಳಕೆಯಿಂದಾಗಿ ಅಳಿದು ಹೋಗಿದೆ. ಮಣ್ಣಿನ ಸವಕಳಿಯಿಂದಾಗಿ ಪ್ರತಿ ವರ್ಷ ಕೋಟ್ಯಾಂತರ ಟನ್ ಗಳಷ್ಟು ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ಆತಂಕವ್ಯಕ್ತಪಡಿಸಿದರು.ಮಣ್ಣಿಂದ ಕಾಯ, ಮಣ್ಣಿಂದ ಜೀವ, ಮಣ್ಣಿನಿಂದ ಅನ್ನ, ಮಣ್ಣಿನಿಂದ ಚಿನ್ನ. ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಎಂಬ ಪುರಂದರದಾಸರ ನಾಣ್ಣುಡಿಯಂತೆ ರೈತ ಕಲ್ಯಾಣ ಸಂಘ ಮಣ್ಣಿನ ರಕ್ಷಣೆಗಾಗಿ ಪಣತೊಟ್ಟು ಕಾರ್ಯನಿರ್ವಹಿಸುತ್ತದೆ.

- ಸಿ. ಚಂದನ್‌ಗೌಡ, ರಾಜ್ಯಾಧ್ಯಕ್ಷ, ರೈತ ಕಲ್ಯಾಣ ಸಂಘ