ಸಾರಾಂಶ
ಹೊಸಕೋಟೆ: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ 13 ಗ್ರಾಮಗಳ 1777 ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿಗೆ ಸ್ವಾಧೀನ ಮಾಡಿಕೊಳ್ಳುವುದನ್ನು ಕೈ ಬಿಟ್ಟಿರುವ ಸರ್ಕಾರದ ನಿಲುವನ್ನು ಸ್ವಾಗತಿಸಿ ನಂದಗುಡಿಯಲ್ಲಿ ರೈತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿಕೊಂಡರು.
ನಂದಗುಡಿ ಗ್ರಾಮದಲ್ಲಿರುವ ನಂದಗುಡಿ-ಸೂಲಿಬೆಲೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಚೇರಿಯಿಂದ ಗಾಂಧಿ ಪಾರ್ಕ್‌ವರೆಗೆ ಮೆರವಣಿಗೆ ಮಾಡಿದರು.ಈ ಸಂದರ್ಭದಲ್ಲಿ ನಂದಗುಡಿ-ಸೂಲಿಬೆಲೆ ಹೋಬಳಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೆಗೌಡ ಮಾತನಾಡಿ, ಚನ್ನರಾಯಪಟ್ಟಣದ ರೈತರ ಕೃಷಿ ಭೂಮಿ ಉಳಿಸುವ ಹೋರಾಟಕ್ಕೆ ಕನ್ನಡಪಕ್ಷ, ಕಮ್ಯೂನಿಸ್ಟ್, ರೈತ ಸಂಘಟನೆಗಳು ಸೇರಿದಂತೆ ಜಿಲ್ಲೆಯ ಹಲವಾರು ಸಂಘಟನೆಗಳ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿ ಧರಣಿ ನಿರತ ರೈತರಿಗೆ ಬೆಂಬಲ ಸೂಚಿಸಿದ್ದರು. ಸತತ ಮೂರು ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ ಫಲವಾಗಿ ಸರ್ಕಾರ ಹೋರಾಟಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನದಿಂದ ಕೈ ಬಿಟ್ಟಿರುವುದಾಗಿ ತಿಳಿಸಿದ್ದಾರೆ. ಇದೊಂದು ಐತಿಹಾಸಿಕ ಗೆಲುವಾಗಿದ್ದು ರೈತ ಹೋರಾಟಗಾರರಿಗೆ ಸ್ಪೂರ್ತಿಯಾಗಿದೆ ಎಂದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯ ನಂಜಪ್ಪ ಮಾತನಾಡಿ ಹಸಿರು, ಕೆಂಪು, ಹಳದಿ ಬಾವುಟಗಳು ಒಟ್ಟಾಗಿ ಹೋರಾಟ ಮಾಡಿದರೆ ಜಯ ಖಚಿತ ಎಂದು ಸಾಬೀತಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಯಾರ ವಿರೋಧವಿಲ್ಲ. ಆದರೆ, ಬಂಡವಾಳಶಾಹಿಗಳ ಹಾಗೂ ಕಾರ್ಪೋರೆಟ್ ಕಂಪನಿಗಳ ಹಿತಾಸಕ್ತಿಗೋಸ್ಕರ ನೂರಾರು ಜನರಿಗೆ ಅನ್ನ ನೀಡುವ ಫಲವತ್ತಾದ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳುವ ಅವೈಜ್ಞಾನಿಕ ನೀತಿಗೆ ನಮ್ಮ ವಿರೋಧ ಇದ್ದೆ ಇರುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಮ್ಮ ಭೂಮಿಯನ್ನ ಸ್ವಾದಿನ ಪಡಿಸಿಕೊಳ್ಳುವುದರ ಕಾರ್ಯದಿಂದ ಹಿಂದೆ ಸರಿದಿದ್ದಾರೆ. ರೈತಪರ ನಿಲುವನ್ನ ತೋರಿದ್ದಾರೆ ಎಂದರು.ನಂದಗುಡಿ ಹೋಬಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯ ಮುನಿಶಾಮೇಗೌಡ ಮಾತನಾಡಿ ನಂದಗುಡಿ-ಸೂಲಿಬೆಲೆ ಹೋಬಳಿ ಭಾಗದಲ್ಲಿ ಟೌನ್‌ಶಿಪ್‌ಗೆ ಭೂಮಿ ವಶಪಡಿಸಿಕೊಳ್ಳದಂತೆ ರೈತರೆಲ್ಲರೂ ಒಗ್ಗಟ್ಟಾಗಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಹೋರಾಟ ಮಾಡಬೇಕಿದೆ. ಚನ್ನರಾಯಪಟ್ಟಣ ರೈತರು ಸತತ ಮೂರು ವರ್ಷಗಳ ಪ್ರತಿಭಟನೆ ಮೂಲಕ ತಮ್ಮ ಭೂಮಿಯನ್ನು ವಾಪಸ್ ಪಡೆದಿದ್ದಾರೆ. ಇದೆಲ್ಲಾ ನಮಗೆ ಸ್ಪೂರ್ತಿಯಾಗಿದ್ದು ರೈತರೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಸನ್ನದ್ದರಾಗಬೇಕು. ಚನ್ನರಾಯಪಟ್ಟಣ ರೈತರ ಬೆಂಬಲ ಹಾಗೂ ಮಾರ್ಗದರ್ಶನ ನಿರಂತರವಾಗಿ ನಮಗೆ ಬೇಕು ಎಂದರು.
ಈ ಸಂದರ್ಭದಲ್ಲಿ ಹಾಪ್‌ಕಾಮ್ಸ್ ಮಾಜಿ ನಿರ್ದೇಶಕ ವೆಂಕಟೇಶಪ್ಪ, ಚನ್ನರಾಯಪಟ್ಟಣ ರೈತ ಮುಖಂಡರಾದ ಮಾರೇಗೌಡ, ನಂಜಪ್ಪ, ಅಶ್ವತಪ್ಪ, ರಘು, ಮುನಿಯಪ್ಪ, ಅಶ್ವತಪ್ಪ, ತಿಮ್ಮರಾಯಪ್ಪ, ಸುರೇಶ್, ನಾಗರಾಜಪ್ಪ, ಮಂಜುನಾಥ್, ಲಘುಮಪ್ಪ, ಕೃಷ್ಣಪ್ಪ, ಅಂಬರೀಶ್, ಕೆಂಪಣ್ಣ, ನಂಜೇಗೌಡ ಹಾಜರಿದ್ದರು.ಫೋಟೋ: 17 ಹೆಚ್‌ಎಸ್‌ಕೆ 1 ಮತ್ತು 2
ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ಸರ್ಕಾರ ಕೈಬಿಟ್ಟ ಹಿನ್ನೆಲೆ ರೈತ ಪರ ಮುಖಂಡರುಗಳು ಸಂಭ್ರಮಾಚರಣೆ ಮಾಡಿ ಗಾಂಧೀ ಸರ್ಕಲ್‌ನಲ್ಲಿ ಸಿಹಿ ಹಚಿಚಿ ಸಂಭ್ರಮಸಿದರು.