ಎಪಿಎಂಸಿ, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಮೋಸ

| Published : Oct 29 2025, 11:30 PM IST

ಎಪಿಎಂಸಿ, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಮೋಸ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ರೈತರ ಪರವಾಗಿ ಇರಬೇಕಾದ ಎಪಿಎಂಸಿಗಳು ಹಾಗೂ ಸಕ್ಕರೆ ಕಾರ್ಖಾನೆಗಳು ಇಂದು ರೈತರಿಗೆ ಮೋಸ ಮಾಡಿ ಸರ್ಕಾರದ ಪರವಾಗಿ ಏಜೆಂಟ್‌ರಂತೆ ಕೆಲಸ ಮಾಡುತ್ತಿವೆ ಎಂದು ರೈತ ಮುಖಂಡ ಟಿ.ಟಿ.ಹಗೇದಾಳ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಲ್ಹಾರ

ರೈತರ ಪರವಾಗಿ ಇರಬೇಕಾದ ಎಪಿಎಂಸಿಗಳು ಹಾಗೂ ಸಕ್ಕರೆ ಕಾರ್ಖಾನೆಗಳು ಇಂದು ರೈತರಿಗೆ ಮೋಸ ಮಾಡಿ ಸರ್ಕಾರದ ಪರವಾಗಿ ಏಜೆಂಟ್‌ರಂತೆ ಕೆಲಸ ಮಾಡುತ್ತಿವೆ ಎಂದು ರೈತ ಮುಖಂಡ ಟಿ.ಟಿ.ಹಗೇದಾಳ ಆರೋಪಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಸಿರು ಸೇನೆ, ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಬೆಳೆಗಳನ್ನು ಎಪಿಎಂಸಿಗೆ ಮಾರಾಟ ಮಾಡಲು ಹೋದರೆ ತೇವಾಂಶದ ನೆಪ ಹೇಳಿ ಕಡಿಮೆ ದರ ನಿಗದಿ ಮಾಡಿ ಮೋಸ ಮಾಡುತ್ತಿದ್ದಾರೆ. ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ರೈತರ ಬೆನ್ನೆಲುಬನ್ನೇ ಮುರಿಯುತ್ತಿವೆ. ಹೀಗಾಗಿ ಎಲ್ಲ ರೈತರು ಸಂಘಟನಾತ್ಮಕವಾಗಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಬಂದಿದೆ. ಕೂಡಲೆ ಸರ್ಕಾರ ರೈತರ ಕಡೆ ಗಮನಹರಿಸಿ ಬೆಳೆಗಳಿಗೆ ಯೋಗ್ಯ ಬೆಲೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಒಂದು ವೇಳೆ ನೀಡದೆ ಇದ್ದರೆ ಸರ್ಕಾರದ ವಿರುದ್ಧ ಬೃಹತ್ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಬ್ಬಿನ ಹಂಗಾಮು ಶುರುವಾಗುತ್ತಿದೆ. ಆದರೆ, ಇನ್ನೂ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ದರ ನಿಗದಿ ಪಡಿಸಿಲ್ಲ. ಇದು ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ನ.1ರೊಳಗಾಗಿ ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹ 3,500 ದರ ನಿಗದಿ ಮಾಡಿ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ಇಂದು ಬೆಳೆಗಳಿಗೆ ಯಾವುದೇ ಯೋಗ್ಯ ಬೆಲೆ ದೊರಕುತ್ತಿಲ್ಲ. ಈರುಳ್ಳಿ, ಗೋವಿನ ಜೋಳ ಬೆಳೆಗಳು ಅತಿಯಾದ ಮಳೆಯಿಂದ ಹಾನಿಯಾಗಿವೆ. ಅದರಲ್ಲಿ ಅಲ್ಪ ಸ್ವಲ್ಪ ಬೆಳೆದ ಕಬ್ಬು ಬೆಳೆಗೆ ಸರ್ಕಾರ ಹಾಗೂ ಕಾರ್ಖಾನೆಗಳು ನಿಖರ ಬೆಲೆ ಘೋಷಣೆ ಮಾಡದೆ ತರಾತುರಿಯಲ್ಲಿ ಕಾರ್ಖಾನೆಗಳು ಕಬ್ಬುನುರಿಸುವ ಕಾರ್ಯ ಆರಂಭಿಸಿದರೆ ಇದರಿಂದ ರೈತರಿಗೆ ತೊಂದರೆ. ಕೂಡಲೇ ಸರ್ಕಾರ ಟನ್ ಕಬ್ಬಿಗೆ ₹ 3500 ದರ ನಿಗದಿ ಮಾಡುವಂತೆ ಆಗ್ರಹಿಸಿದರು.ಕಬ್ಬು ಬೆಳೆಗಾರರ ಸಂಘದ ತಾಲೂಕ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ ₹ 3,500 ದರ ಘೋಷಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ. ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದು ಸರ್ಕಾರ ಹೆಚ್ಚಿನ ದರ ನಿಗದಿಪಡಿಸಲು ಹಿಂದೇಟು ಹಾಕುತ್ತಿದೆ. ಸರ್ಕಾರ ಈ ಮೊದಲು ನ.1ರಿಂದ ಕಾರ್ಖಾನೆಗಳನ್ನು ಆರಂಭಿಸಲು ಸೂಚಿಸಿತ್ತು. ನ.28ಕ್ಕೆ ಪ್ರಾರಂಭಿಸಲು ತಿಳಿಸಿದೆ. ಇದರಿಂದ ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಕೂಡಲೇ ದರ ನಿಗದಿ ಮಾಡಬೇಕು. ಅಲ್ಲಿಯವರೆಗೆ ರೈತರು ಕೂಡ ಕಬ್ಬನ್ನು ಕಳಿಸಬಾರದು. ಬೆಂಬಲ ಬೆಲೆ, ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ, ಬಾಕಿ ಬಿಲ್ ಹಾಕದಿರುವುದು ಸೇರಿ ಗಂಭಿರ ವಿಷಯಗಳ ಚರ್ಚೆ ನಂತರವೇ ಕಾರ್ಖಾನೆ ಪ್ರಾರಂಭಿಸಿಬೇಕು. ಟನ್ ಕಬ್ಬಿಗೆ ಕಟಾವು ಮತ್ತು ಸಾಗಣೆ ಹೊರತುಪಡೆಸಿ ₹ ೩೫೦೦ಕೊಡಲೇಬೇಕು. ಮೊದಲು ಕಬ್ಬಿನಿಂದ ಸಕ್ಕರೆ ಮಾತ್ರ ತಾಯಾರಾಗುತ್ತಿತ್ತು. ಈಗ ೭-೮ ಉಪಉತ್ಪನ್ನಗಳು ಸಿದ್ದವಾಗಿ ಸಕ್ಕರೆ ಕಾರ್ಖಾನೆ ಮಾಲಿಕರು ಒಳ್ಳೆಯ ಲಾಭದಲ್ಲಿದ್ದಾರೆ. ಇಂದಿನ ಕಾಸ್ಟ್‌ ಆಫ್ ಕಲ್ಟಿವೇಷನ್‌ ಪ್ರಕಾರ ಒಂದು ಎಕರೆ ಕಬ್ಬು ಬೆಳೆದ ರೈತ ₹೩೦ ಸಾವಿರ ನಷ್ಟದಲ್ಲಿದ್ದಾನೆ. ಸಮರ್ಪಕ ಬೆಲೆ ಸಿಗದೇ ಕಬ್ಬು ಬೆಳೆಗಾರರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದರು.ಈ ವೇಳೆ ರೈತ ಮುಖಂಡ ಶಶಿಕಾಂತ ಬಿರಾದಾರ, ಕರವೇಯ ಮಂಜು ಸೊನ್ನದ ಮಾತನಾಡಿದರು. ರೈತ ಮುಖಂಡರಾದ ಯಮನಪ್ಪ ಗಿಡ್ಡಪ್ಪಗೋಳ, ನೀಲನಗೌಡ ಬಿರಾದಾರ, ಮುದಕಣ್ಣ ಚಲವಾದಿ, ಧೂಳಪ್ಪ ಸಿಂಧೆ, ಮಲ್ಲು ಕೋಲಕಾರ, ಶ್ರೀಶೈಲ ಸೊನ್ನದ, ಬಸಪ್ಪ ಗಿಡಗಂಟಿ ಸೇರಿ ಹಲವರು ಇದ್ದರು.