ಸಾರಾಂಶ
ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟು ರೈತರಿಗೆ ಮೋಸ ಮಾಡುತ್ತಿದೆ ಎಂದು ಎ.ಎಸ್. ಪಾಟೀಲ್ ನಡಹಳ್ಳಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟು ರೈತರಿಗೆ ಮೋಸ ಮಾಡುತ್ತಿದೆ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಆರೋಪಿಸಿದರು.ಅವರು ಮಂಗಳವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೈತರಿಗೆ ಪ್ರತಿ ವರ್ಷ 4000 ರು. ಕೊಡುವ ಸಹಾಯಧನ ಯೋಜನೆ, 11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿವರ್ಷ 439 ಕೋಟಿ ರು. ನೆರವು ನೀಡುವ ರೈತ ವಿದ್ಯಾನಿಧಿ ಯೋಜನೆ, ರಾಜ್ಯದ 50 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ 10 ಸಾವಿರ ರು. ಹೆಚ್ಚುವರಿ ಸಹಾಯಧನ ನೀಡುವ ಯೋಜನೆ, ರೈತ ಶಕ್ತಿ ಯೋಜನೆ, ಭೂರೈತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರು. ನೀಡುವ ಶ್ರಮಶಕ್ತಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ ಎಂದು ಹೇಳಿದರು.ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲದಿಂದಾಗಿ ರೈತರು, ಸ್ವಾಭಿಮಾನಿ ಹಾಗು ಸದೃಢ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 12 ಕೋಟಿಗೂ ಅಧಿಕ ರೈತ ಕುಟುಂಬಗಳಿಗೆ ವಾರ್ಷಿಕ 6000 ರು. ಆರ್ಥಿಕ ನೆರವಿನ ಮೂಲಕ 3 ಲಕ್ಷ ಕೋಟಿ ರು. ನೀಡಲಾಗಿದೆ ಹಾಗೂ ರಾಜ್ಯದ 53 ಲಕ್ಷ ರೈತರಿಗೆ ಕೇಂದ್ರದಿಂದ ಸುಮಾರು 4900 ಕೋಟಿ ರು. ನೀಡಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ರಾಜ್ಯ ರೈತ ಮೋರ್ಚಾ ಪ್ರ. ಕಾರ್ಯದರ್ಶಿ ಕಲ್ಮುರುಡಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಕಾರ್ಯದರ್ಶಿಗಳಾದ ಪುಷ್ಪರಾಜ ಶೆಟ್ಟಿ, ಶ್ರೀಕಾಂತ ಕಾಮತ್, ಜಿಲ್ಲಾ ವಕ್ತಾರರಾದ ವಿಜಯ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.