ಬರಗಾಲ ಪರಿಹಾರ ನಿಧಿಯಾಗಿ ರಾಜ್ಯ ಸರ್ಕಾರ ರೈತರಿಗೆ ₹೨೫೦೦ ನೀಡಿದ್ದನ್ನು ಖಂಡಿಸಿ ರೈತ ಸಂಘದ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಕ್ಷಾಟನೆ ಮೂಲಕ ಹಣ ಸಂಗ್ರಹಿಸಲಾಯಿತು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ರೈತರಿಗೆ ₹2500 ಬರ ಪರಿಹಾರ ನೀಡಿದ್ದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಿಂದ ಪ್ರಮುಖ ರಸ್ತೆಗಳಲ್ಲಿ ರಾಜ್ಯ ಸರ್ಕಾರಕ್ಕೆ ನೆರವು ನೀಡಲು ಜೋಳಿಗೆ ಹಿಡಿದು ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಪಟ್ಟಣದ ಮುಖ್ಯ ರಸ್ತೆಯ ಅಂಗಡಿ ಮಾಲೀಕರು, ರೈತ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಈ ಅಭಿಯಾನದಲ್ಲಿ ತಮ್ಮ ಶಕ್ಯಾನುಸಾರ ಹಣ ನೀಡಿದರು. ಒಟ್ಟು ₹೩,೪೮೫ ದೇಣಿಗೆ ಸಂಗ್ರಹವಾಯಿತು. ಸಂಗ್ರಹವಾದ ಹಣವನ್ನು ತಹಸೀಲ್ದಾರಗೆ ಹಸ್ತಾಂತರಿಸಲು ಹೋದಾಗ ಅವರು ಸ್ವೀಕರಿಸಲು ನಿರಾಕರಿಸಿದ್ದರಿಂದ, ಗುರುವಾರ ಡಿಡಿ ಮೂಲಕ ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಅರವಿಂದ ಕುಲಕರ್ಣಿ ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ, ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಹಾಗೂ ಉಪಾಧ್ಯಕ್ಷ ರಾಮನಗೌಡ ಹಾದಿಮನಿ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.ಬಿಕ್ಷಾಟನಾ ಅಭಿಯಾನದಲ್ಲಿ ಸಂಘಟನೆಯ ಪ್ರಮುಖರಾದ ವಿಠ್ಠಲ ಬಿರಾದಾರ, ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಸಂತೋಷ ಬಿರಾದಾರ, ಹಣಮಂತರಾಯ ಹಂದ್ರಾಳ, ಸಿದ್ಧಲಿಂಗಪ್ಪ ಬಿರಾದಾರ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಪ್ರಭುಗೌಡ ಬಿರಾದಾರ, ಸುಭಾಷ ಗುದಗಿ, ಹನುಮಂತರಾಯ ಸಾಸನೂರ, ಸಂಗನಗೌಡ ಕೊಳೂರು, ಬಸನಗೌಡ ಕವದಿ ಸೇರಿ ರೈತರು ಭಾಗವಹಿಸಿದ್ದರು.