ಸಾರಾಂಶ
ವಕ್ಫ್ ಬೋರ್ಡ್ ಅಧಿಕಾರಿಗಳು ಸುಪ್ರೀಂನಂತೆ ವರ್ತಿಸುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಕುಕನೂರು
ರಾಜ್ಯದಲ್ಲಿ ವಕ್ಫ್ ಬೋರ್ಡ್ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದು, ನಿಜಾಮರ ಆಡಳಿತದಲ್ಲಿ ನೀಡಿರುವ ಇನಾಮಿ ಭೂಮಿಯನ್ನು ಕೂಡ ವಕ್ಫ್ ಆಸ್ತಿ ಎಂದು ಪಹಣಿಯ ೯ ಮತ್ತು ೧೧ ಕಾಲಂನಲ್ಲಿ ನಮೂದಿಸುತ್ತಿರುವುದನ್ನು ವಿರೋಧಿಸುತ್ತೇವೆ ಎಂದು ಕ್ರಾಂತಿಕಾರಿ ರೈತ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಎನ್. ಕುಕನೂರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ವನವಾಡಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರಿಲ್ಲ. ಆದರೂ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದ್ದು, ರೈತರಿಗೆ ನೋಟಿಸ್ ಕೂಡ ನೀಡುತ್ತಿದ್ದಾರೆ. ಕುಕನೂರು ಹಾಗೂ ಯಲಬುರ್ಗಾ ಅವಳಿ ತಾಲೂಕಿನ ೯೧೦ ಎಕರೆ ರೈತರ ಜಮೀನನ ಪಹಣಿಯಲ್ಲಿ ಕೂಡ ವಕ್ಫ್ ಆಸ್ತಿ ಎಂದಿದೆ ಎನ್ನಲಾಗುತ್ತಿದೆ. ಕುಕನೂರು ಪಟ್ಟಣದ ಪಪಂ ಕಚೇರಿ ಇರುವ ಸ್ಥಳದ ಸರ್ವೇ ನಂ.೫೪ರ ಪಹಣಿಯು ರಾಜ್ಯಪಾಲರ ಹೆಸರಿನಲ್ಲಿದ್ದು, ಸದ್ಯ ೧೧ರ ಕಾಲಂನಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ವಕ್ಫ್ ಬೋರ್ಡ್ ರಚನೆಯಾಗುವ ಮುನ್ನವೇ ನಿಜಾಮರ ಆಡಳಿತದಲ್ಲಿ ಇನಾಮಿಯಾಗಿ ಭೂಮಿ ನೀಡಿದ್ದು, ಆನಂತರ ೧೯೭೪ರಲ್ಲಿ ಉಳುವವನೆ ಒಡೆಯ ಕಾನೂನು ಜಾರಿಯಾದ ನಂತರ ರೈತರಿಗೆ ಗೇಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಸದ್ಯ ಇಂತಹ ಭೂಮಿ ಹೊಂದಿರುವ ರೈತರಿಗೆ ೧೧ರ ಕಾಲಂನಲ್ಲಿ ವಕ್ಫ್ ಎಂದು ನಮೂದಿಸಿದ್ದು, ಇದರಿಂದ ಬ್ಯಾಂಕ್ ಸಾಲ ಸೌಲಭ್ಯ, ಇತರ ಸೌಲಭ್ಯಗಳು ರೈತರಿಗೆ ದೊರೆಯುತ್ತಿಲ್ಲ. ವಕ್ಫ್ ಬೋರ್ಡ್ ಅಧಿಕಾರಿಗಳು ಸುಪ್ರೀಂನಂತೆ ವರ್ತಿಸುತ್ತಿದ್ದಾರೆ. ಕೂಡಲೇ ವಕ್ಫ್ ಬೋರ್ಡ್ ಇದನ್ನು ಇಲ್ಲಿಗೆ ನಿಲ್ಲಿಸಬೇಕು. ತಕ್ಷಣ ಜಿಲ್ಲೆಯ ಸಂಸದರು, ಸಚಿವರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿ, ಆನಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ವಕ್ಫ್ ಮಾಜಿ ಅಧ್ಯಕ್ಷ ನೂರಅಹ್ಮದ್ ಹಣಜಗಿ ಮಾತನಾಡಿ, ರೈತರ ಭೂಮಿಯ ಪಹಣಿಯಲ್ಲಿರುವ ವಕ್ಫ್ ಆಸ್ತಿ ಎನ್ನುವುದನ್ನು ಕೈಬಿಡಬೇಕು ಎಂದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ರೈತರಾದ ಬಶೀರ್‌ಖಾನ್ ಮುಲ್ಲಾ, ಮಾಜಿದ್‌ಖಾನ್ ಮುಲ್ಲಾ ಇತರರಿದ್ದರು.