ಸೋಮವಾರಪೇಟೆ: ರೈತ ಹೋರಾಟ ಸಮಿತಿ ಬೃಹತ್ ಪ್ರತಿಭಟನೆ

| Published : Aug 20 2024, 12:46 AM IST

ಸೋಮವಾರಪೇಟೆ: ರೈತ ಹೋರಾಟ ಸಮಿತಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು. ರೈತರು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ತೆರಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು ಹಾಗೂ ಸಿ ಮತ್ತು ಡಿ ಜಮೀನನ್ನು ವ್ಯವಸಾಯಕ್ಕೆ ಯೋಗ್ಯವಾದ ಭೂಮಿ ಎಂದು ಪರಿವರ್ತಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ತಾಲೂಕು ಒಕ್ಕಲಿಗರ ಸಮುದಾಯ ಭವನದಿಂದ ಹೊರಟ ಪ್ರತಿಭಟನಾನಿರತ ರೈತರು, ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ತೆರಳಿ, ಜೇಸಿ ವೇದಿಕೆಯಲ್ಲಿ ಸಮಾವೇಶಗೊಂಡರು.

ಸರ್ಕಾರದ ಆದೇಶದಂತೆ 1975ರಲ್ಲಿ ತಾಲೂಕಿನಲ್ಲಿ 25,900 ಎಕರೆ ಜಾಗವನ್ನು ಸಿ ಅಂಡ್ ಡಿ(ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ)ಎಂದು ಗುರುತಿಸಲಾಯಿತು. ನಂತರ 1977ರಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ನಂತರ ಸಣ್ಣ ಮಟ್ಟದ ಹೋರಾಟದ ನಂತರ 1985ರಲ್ಲಿ ಮರುಪರಿಶೀಲನೆಗೆ ಸರ್ಕಾರದಿಂದ ಆದೇಶವಾಯಿತು. ಆ ಸಮಯದಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಕಚೇರಿಯಲ್ಲೇ ಕುಳಿತುಕೊಂಡು ಅವೈಜ್ಞಾನಿಕ ವರದಿ ನೀಡಿರುವ ಹಿನ್ನೆಲೆಯಲ್ಲಿ ರೈತರು ಈಗ ಆಸ್ತಿ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಹೇಳಿದರು.

ಮನವಿ ಸ್ವೀಕರಿಸಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ನೂರಾರು ವರ್ಷಗಳಿಂದ ರೈತರು ಕೃಷಿ ಮಾಡಿಕೊಂಡು ಬರುತ್ತಿರುವ ಭೂಮಿಗೆ ಹಕ್ಕುಪತ್ರ ಸಿಗಲೇಬೇಕು. ಸಿ ಮತ್ತು ಡಿ ಜಾಗದ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ಸರ್ಕಾರ ರೈತರ ಪರವಾಗಿ ಸುಪ್ರಿಂಕೋರ್ಟ್‍ಗೆ ಅಫಿಡೆವಿಟ್ ಸಲ್ಲಿಸುವಂತೆ ಮಾಡಬೇಕಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಚರ್ಚೆ ಮಾಡಲು ಸಾಧ್ಯವಿಲ್ಲ. ಜಿಲ್ಲೆಯ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ಎಂ. ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಯಾವುದೇ ಕಾರಣಕ್ಕೂ ರೈತರ ಸಿ ಆ್ಯಂಡ್ ಡಿ ಭೂಮಿಯನ್ನು ತೆರವು ಮಾಡಿಸಲು ಬಿಡುವುದಿಲ್ಲ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಪ್ರಮುಖರಾದ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಕೊಡಗಿನ ನಿಯೋಗ ಮುಖ್ಯಮಂತ್ರಿಗಳನ್ನು, ಅರಣ್ಯ ಸಚಿವರನ್ನು ಭೇಟಿ ಆಗಬೇಕು. ಸುಪ್ರೀಂ ಕೋರ್ಟ್‍ಗೆ ಅಫಿಡೆವಿಟ್ ಸಲ್ಲಿಸಬೇಕಿರುವುದರಿಂದ ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ. ವಿಳಂಬ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು. ಈಗಾಗಲೇ ಜಿಲ್ಲೆಯ 55 ಗ್ರಾಮಗಳು ಸೂಕ್ಷ್ಮಪರಿಸರ ವಲಯಕ್ಕೆ ಸೇರುತ್ತವೆ. ರೈತರು ಹೋರಾಟದಿಂದ ಹಿಂದೆ ಸರಿದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.

ಹಿರಿಯ ವಕೀಲ ಬಿ.ಜೆ. ದೀಪಕ್, ಸಾಮಾಜಿಕ ಹೋರಾಟಗಾರ ಬಿ.ಪಿ. ಅನಿಲ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ರೈತ ಮುಖಂಡ ಎಸ್.ಬಿ. ಭರತ್ ಕುಮಾರ್ ಮಾತನಾಡಿದರು.

ರೈತರ ಪ್ರತಿಭಟನೆಗೆ ಪಟ್ಟಣದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಒಂದು ಗಂಟೆಗಳ ಕಾಲ ಬಂದ್ ಮಾಡುವ ಮೂಲಕ ಸಹಕಾರ ನೀಡಿದರು.