ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳವುದೇ ಪರಿಹಾರವಲ್ಲ. ಧೈರ್ಯವಾಗಿ ಸಮಸ್ಯೆ ಎದುರಿಸಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ತಾಲೂಕಿನ ಚಿನಕುರಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಕೃಷಿ ಬೇಸಾಯಕ್ಕೆ ಮಾಡಿದ್ದ ಸಾಲ ತೀರಿಸಲಾಗಿದೆ ಅಂಕೇಗೌಡನಕೊಪ್ಪಲು ಗ್ರಾಮದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಕೇಳಿ ಮನಸ್ಸಿನ ತುಂಬಾ ನೋವುಂಟಾಯಿತು ಎಂದರು.
ಮಾಡಿರುವ ಸಾಲ ತೀರಿಸಲಾಗಿದೆ ರೈತರು ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮನ್ನೆ ನೆಚ್ಚಿಕೊಂಡಿರುವ ಹೆಂಡತಿ, ಮಕ್ಕಳು, ಕುಟುಂಬಸ್ಥರ ಗತಿ ಏನು?. ರೈತರು ದೃತಿಗೆಡದೆ ಸಾಲ ತೀರಿಸುವ ಪರಿಹಾರ ಕಂಡುಕೊಳ್ಳಬೇಕು ಎಂದರು.ರೈತರು ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಎದೆಗುಂದದೆ ಮುನ್ನಡೆಯಬೇಕು, ಸಹಕಾರದ ಯಾವುದಾದರು ಸೌಲಭ್ಯ ಬಳಸಿಕೊಂಡು ಸಾಲ ತೀರಿಸುವ ಪರಿಹಾರ ಕಂಡುಕೊಳ್ಳಬೇಕು ಎಂದರು.
ಸಹಕಾರ ಬ್ಯಾಂಕ್‌ಗಳು ರೈತರಿಗೆ ಸಾಲಸೌಲಭ್ಯ ನೀಡುವ ಮೂಲಕ ನೆರವಾಗುವ ಕೆಲಸ ಮಾಡುತ್ತಿವೆ. ಅದೇರೀತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯೂ ಸಹ ಗ್ರಾಮೀಣ ಪ್ರದೇಶದ ರೈತ ಮಹಿಳೆಯರಿಗೆ ಸಾಲಸೌಲಭ್ಯ ನೀಡಿ ಮಹಿಳೆಯನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುತ್ತಿವೆ. ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಮಾಡುವುದನ್ನು ನಿಲ್ಲಿಸಬೇಕು ಎಂದರು.ಸಂಘವು ಈ ಸಾಲಿನಲ್ಲಿ 9.03 ನಿವ್ವಳ ಲಾಭ ತಂದಿದೆ. ಸಂಘದ ವತಿಯಿಂದ ನಿರ್ಮಿಸಿರುವ ರೈತರ ಸೂಪರ್ ಮಾಕೇರ್ಟ್ ಒಂದಲ್ಲಿಯೇ 3.24 ಲಕ್ಷ ರು. ಲಾಭಗಳಿಸಿದೆ. ಈ ವರ್ಷದಿಂದ ರೈತರ ಸೂಪರ್ ಮಾಕೇರ್ಟ್‌ನಲ್ಲಿ ಸಾಮಗ್ರಿ ಖರೀದಿಸುವವರಿಗೆ ಶೇ.2ರಷ್ಟು ರಿಯಾಯ್ತಿ ನೀಡಲಾಗುವುದು ಎಂಬುದಾಗಿ ಘೋಷಿಸಿದ್ದಾರೆ. ಆಡಳಿತ ಮಂಡಳಿ ಸದಸ್ಯರು ಇದೇ ರೀತಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು, ರೈತರು ಸಾಲಕ್ಕೆ ಅರ್ಜಿಸಲ್ಲಿಸದೆ ಸಂಜೆಯೊಳಗೆ ಆ ರೈತರಿಗೆ ಸಾಲಸೌಲಭ್ಯ ದೊರೆಯುವಂತೆ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಸಿ.ಎಸ್.ಮಂಜುನಾಥ್, ಉಪಾಧ್ಯಕ್ಷ ಮಹದೇವಪ್ಪ, ತಾಪಂ ಮಾಜಿ ಸದಸ್ಯರಾದ ಸಿ.ಎಸ್.ಗೋಪಾಲಗೌಡ, ಗಂಗಾಧರ್, ಮುಖಂಡ ಅಂಕೇಗೌಡ, ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಿ.ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಕಾಳೇಗೌಡ, ಸದಸ್ಯ ಸಿ.ಎ.ಲೋಕೇಶ್, ವಿಎಸ್‌ಎಸ್‌ಎನ್‌ಬಿ ನಿರ್ದೇಶಕರಾದ ರಾಮಕೃಷ್ಣೇಗೌಡ, ಸಿ.ಬಿ.ವಾಸುದೇವಯ್ಯ, ಮೊಗ್ಗಣ್ಣೇಗೌಡ, ರಾಮೇಗೌಡ, ಬಿ.ಶಿವಣ್ಣ, ಎ.ಕುಮಾರ, ಚಂದ್ರ, ಭವ್ಯಶ್ರೀ, ಪಾರ್ವತಮ್ಮ, ಪ್ರತಾಪ್, ಕಾರ್‍ಯದರ್ಶಿ ಸಿ.ಎಂ.ಕಾಂತರಾಜು, ಗುಮಾಸ್ತ ಸಿ.ಕೆ.ಕುಮಾರ್, ನಿವೃತ್ತ ಕಾರ್‍ಯದರ್ಶಿ ಪುಟ್ಟೇಗೌಡ ಸೇರಿದಂತೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಷೇರುದಾರರು ಇದ್ದರು.