ದೇಶದ ಪ್ರಗತಿಗೆ ರೈತರ ಕೊಡುಗೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ

| Published : Dec 25 2024, 12:47 AM IST

ಸಾರಾಂಶ

ದಿ. ಚೌಧರಿಯವರು ರೈತರ ಶ್ರೇಯೋಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗಮನಿಸಿ ಅವರ ಜನ್ಮದಿನವನ್ನು‌ ರೈತರ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ.

ಹೊನ್ನಾವರ: ದೇಶ ಸದೃಢವಾಗಿರಲು ರೈತರು ಮೂಲ ಕಾರಣ. ರೈತರ ಬಗ್ಗೆ ಗೌರವ ಭಾವನೆ ಹೊಂದಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.

ತಾಲೂಕಿನ ಕೃಷಿ ಇಲಾಖೆ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕೃಷಿ ಇಲಾಖೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿ. ಚೌಧರಿಯವರು ರೈತರ ಶ್ರೇಯೋಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗಮನಿಸಿ ಅವರ ಜನ್ಮದಿನವನ್ನು‌ ರೈತರ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ರೈತಾಪಿ ವೃತ್ತಿಯು ಕಷ್ಟದ ಜೀವನವಾಗಿದೆ. ರೈತರಿಗೆ ಪೂರಕವಾದ ಯೋಜನೆಯನ್ನು ಸರ್ಕಾರ ಇಲಾಖೆ ಮೂಲಕ ಮಾಡುತ್ತಾ ಬಂದಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುವರಿಗೆ ತೋಟ ಅಥವಾ ಗದ್ದೆ ಇರಬೇಕು ಎನ್ನುವ ಕಡ್ಡಾಯ ನಿಯಮ ಜಾರಿಗೊಳಿಸಿದರೆ ಆಗ ರೈತರ ಸಮಸ್ಯೆ ಅರಿವಾಗಲಿದೆ ಎಂದರು.ಆತ್ಮ ಯೋಜನೆಯಡಿ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಸಚಿವ ಮಂಕಾಳ ವೈದ್ಯ ಹಾಗೂ ಇಲಾಖೆಯಿಂದ ಸೇವಾ ನಿವೃತ್ತಿಯಾಗುತ್ತಿರುವ ಜಿಪಂ ಯೋಜನಾಧಿಕಾರಿ ವಿನೋದ ಅಣ್ವೇಕರ್ ಅವರನ್ನು ಗೌರವಿಸಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಪಾಂಡಪ್ಪ ಲಂಬಾಣಿ ಮಾತನಾಡಿದರು.ಶಿರಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಅರ್ಜುನ ಸೂಲಗಿತ್ತಿ ರೈತರಿಗೆ ತರಬೇತಿ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚೇತನಕುಮಾರ, ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಅರುಣ ನಾಯ್ಕ, ಪಶು ಇಲಾಖೆಯ ಡಾ. ಬಸಪ್ಪ, ತೋಟಗಾರಿಕಾ ಇಲಾಖೆಯ ಅಧಿಕಾರಿ ಸೂರ್ಯಕಾಂತ ವಡೇರ, ಕೃಷಿ ಅಧಿಕಾರಿ ಪುನೀತಾ ಎಸ್.ಬಿ. ಇಲಾಖೆಯ ಅಧಿಕಾರಿಗಳು ಇದ್ದರು. ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಮಹಾಪೂಜೆ, ಅನ್ನಸಂತರ್ಪಣೆ

ದಾಂಡೇಲಿ: ಕುಳಗಿ ರಸ್ತೆಯ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ನಡೆಯುವ ವಾರ್ಷಿಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಶೋಭಾಯಾತ್ರೆ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.ಭಾನುವಾರ ಬೆಳಗಿನ ಜಾವ 6ಕ್ಕೆ ಅಯ್ಯಪ್ಪ ಸ್ವಾಮಿ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಸಾಮೂಹಿಕ ಭಜನೆ, ಪಡಿ ಪೂಜೆ ಕಾರ್ಯಕ್ರಮಗಳು ನಡೆದವು.ಅಯ್ಯಪ್ಪ ಸ್ವಾಮಿ ಸನ್ನಿಧಾನದಿಂದ ಪ್ರಾರಂಭವಾದ ಬೆಳ್ಳಿ ರಥದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ಶೋಭಾಯಾತ್ರೆಯು ಚೆನ್ನಮ್ಮ ವೃತ್ತ, ಸೋಮಾನಿ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅನಂತರ ಸನ್ನಿಧಾನದಲ್ಲಿ ಮಹಾ ಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು.ಕಾಳಿ ನದಿಯಲ್ಲಿ ಪಂಪಾ ಬೆಳಕು ಭಾನುವಾರ ತಡರಾತ್ರಿ ವಿಶೇಷ ಆಚರಣೆ ನಡೆಯಿತು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕಾಳಿ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಾಳಿ ನದಿಗೆ ಮಂಗಳಾರತಿ ನೆರವೇರಿಸಿ ಪಂಪಾ ಬೆಳಕು ಕಾರ್ಯಕ್ರಮ ನಡೆಯಿತು.ಸೇವಾ ಸಮಿತಿ ಅಧ್ಯಕ್ಷ ಅಧ್ಯಕ್ಷ ಟಿ.ಆರ್. ಚಂದ್ರಶೇಖರ, ಉಪಾಧ್ಯಕ್ಷ ಕೃಷ್ಣ ಪೂಜಾರಿ, ಖಜಾಂಚಿ ವಿಶ್ವನಾಥ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಎಸ್‌. ಸೋಮಕುಮಾರ್ ಹಾಗೂ ಗುರುಸ್ವಾಮಿ ಮೋಹನ ಸನದಿ, ಪದಾಧಿಕಾರಿಗಳಾದ ಅನಿಲ್ ದಂಡಗಲ, ರಾಜಶೇಖರ್ ಪಾಟೀಲ್, ಸುರೇಶ್ ನಾಯರ, ಮಂಜುನಾಥ ಪಾಟೀಲ, ನಂದೀಶ ಮುಂಗರವಾಡಿ, ಅನಿಲ್ ನಾಯ್ಕ‌ ಸಹಕರಿಸಿದರು.