ಸಾರಾಂಶ
ಕಾಡಾನೆಗಳ ಹಾವಳಿಯಿಂದ ರೈತರ ಬದುಕಿಗೆ ಕಂಟಕ ಎದುರಾಗಿದೆ, ಬುಧವಾರ ರಾತ್ರಿ ನನ್ನ ಜಮೀನಿಗೆ ನುಗ್ಗಿ ಜಮೀನಿನಲ್ಲಿದ್ದ 9ಕ್ಕೂ ಹೆಚ್ಚು ತೆಂಗಿನ ಮರಗಳು, ಜೋಳ ಮತ್ತು ಇನ್ನಿತರೆ ಬೆಳೆಗಳು ಸೇರಿದಂತೆ ಪಂಪ್ಸೆಟ್, ಬಾವಿ ಪೈಪುಗಳನ್ನು ನಾಶ ಮಾಡಿವೆ. ಇದರಿಂದ ನನಗೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ರೈತರು ಬೆಳೆದ ಬೆಳೆಗಳು ಸಹಿತ ಕೊಳವೆ ಬಾವಿಗಳನ್ನು ಕಾಡಾನೆಗಳು ನಾಶ ಮಾಡಿದ ಘಟನೆ ಕೋಗಿಲೆ ಮನೆ ಸೇರಿದಂತೆ ಸುತ್ತಮುತ್ತಲೂ ನಡೆದಿದೆ.ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಕೋಗಿಲೆಮನೆ ಗ್ರಾಮದಲ್ಲಿ ಕಳೆದ 20 ದಿನಗಳಿಂದ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕೋಗಿಲೆಮನೆ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ನಿತ್ಯ ಸಂಜೆ 7 ರಿಂದ 8 ಗಂಟೆ ವೇಳೆಗೆ ಅರಣ್ಯ ಪ್ರದೇಶದಿಂದ ಹೊರಬಂದು ಕೋಗಿಲೆಮನೆ, ಕೊತ್ನಳ್ಳಿ, ಮಾಳೆಗೆರೆ, ಬಸವನಕೊಪ್ಪಲು, ರಣಘಟ್ಟ, ಚಿಕ್ಕೋಲೆ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ ನುಗ್ಗಿ ಜಮೀನಿನಲ್ಲಿ ಬೆಳೆಯಲಾಗಿದ್ದ ಬೆಳೆಗಳನ್ನು ನಾಶ ಮಾಡುವ ಜೊತೆಗೆ ಜಮೀನಿನಲ್ಲಿದ್ದ ಪಂಪ್ಸೆಟ್, ಕೊಳವೆ ಬಾವಿಗಳನ್ನು ನಾಶ ಮಾಡಿದ ಘಟನೆ ಕಳೆದ 20 ದಿನಗಳಿಂದ ನಡೆಯುತ್ತಿದೆ. ಕೋಗಿಲೆಮನೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ನಿತ್ಯ ಭಯಭೀತರಾಗಿ ಉಸಿರುಗಟ್ಟಿದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಗ್ರಾಮಸ್ಥರು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೋಗಿಲೆಮನೆ ಗ್ರಾಮಸ್ಥ ಕುಮಾರ್ ಮಾತನಾಡಿ, ಕಾಡಾನೆಗಳ ಹಾವಳಿಯಿಂದ ರೈತರ ಬದುಕಿಗೆ ಕಂಟಕ ಎದುರಾಗಿದೆ, ಬುಧವಾರ ರಾತ್ರಿ ನನ್ನ ಜಮೀನಿಗೆ ನುಗ್ಗಿ ಜಮೀನಿನಲ್ಲಿದ್ದ 9ಕ್ಕೂ ಹೆಚ್ಚು ತೆಂಗಿನ ಮರಗಳು, ಜೋಳ ಮತ್ತು ಇನ್ನಿತರೆ ಬೆಳೆಗಳು ಸೇರಿದಂತೆ ಪಂಪ್ಸೆಟ್, ಬಾವಿ ಪೈಪುಗಳನ್ನು ನಾಶ ಮಾಡಿವೆ. ಇದರಿಂದ ನನಗೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಾಡಾನೆಗಳನ್ನು ಹಿಡಿದು ಸ್ಥಳಾಂತರಗೊಳಿಸುವ ಮೂಲಕ ನಮ್ಮನ್ನು ಸಂಕಷ್ಟದಿಂದ ಮುಕ್ತಿಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೋಗಿಲೆಮನೆ ಸೇರಿ ಸುತ್ತಮುತ್ತಲ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.