ಈಗಾಗಲೇ ಮದ್ದೂರು ತಾಲೂಕಿನ ವಿ.ಸಿ.ನಾಲೆಯ ಕೊನೇ ಭಾಗಕ್ಕೂ ಸರಾಗವಾಗಿ ನೀರು ಹರಿಯುವಂತೆ ಹಂತ ಹಂತವಾಗಿ ನಾಲೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ಕ್ಷೇತ್ರದ ನೀರಾವರಿ ಯೋಜನೆಗಳಿಗೆ 800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ನಿರೀಕ್ಷಿತ ಮಳೆಯಾಗದ ಪರಿಣಾಮ ಪ್ರಸಕ್ತ ಸಾಲಿನಲ್ಲಿ ತೀವ್ರ ಬರಗಾಲ ಆವರಿಸಿದೆ. ರೈತರು ಕೆಆರ್‌ಎಸ್ ಜಲಾಶಯದ ನೀರಿನ ಲಭ್ಯತೆ ನೋಡಿಕೊಂಡು ಬೆಳೆ ಬೆಳೆಯಬೇಕು ಎಂದು ಶಾಸಕ ಕೆ.ಎಂ.ಉದಯ್ ಸಲಹೆ ನೀಡಿದರು.

ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಅಂದಾಜು 2 ಕೋಟಿ ರು. ವೆಚ್ಚದಲ್ಲಿ ನಾಲಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೃಷ್ಣರಾಜಸಾಗರ ಜಲಾಶಯದಲ್ಲಿ ಪ್ರಸ್ತುತ 107 ಅಡಿ ನೀರಿನ ಸಂಗ್ರಹವಿದೆ. ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜನರಿಗೆ ಕುಡಿಯುವ ನೀರು ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕಿದೆ. ಹೀಗಾಗಿ, ರೈತರು ನೀರಿನ ಲಭ್ಯತೆ ನೋಡಿಕೊಂಡು ಬೆಳೆ ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದರು.

ಈಗಾಗಲೇ ತಾಲೂಕಿನ ವಿ.ಸಿ.ನಾಲೆಯ ಕೊನೇ ಭಾಗಕ್ಕೂ ಸರಾಗವಾಗಿ ನೀರು ಹರಿಯುವಂತೆ ಹಂತ ಹಂತವಾಗಿ ನಾಲೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ಕ್ಷೇತ್ರದ ನೀರಾವರಿ ಯೋಜನೆಗಳಿಗೆ 800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ತಾಲೂಕಿನ ರೈತರ ಬಹು ದೊಡ್ಡ ಸಮಸ್ಯೆಯಾಗಿರುವ ನಾಲೆಗಳ ಅಭಿವೃದ್ಧಿಗೆ ಹಂತ ಹಂತವಾಗಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಚರಣ್, ಮಹದೇವು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪಿ.ರಾಘವಾ, ಪ್ರವೀಣ್, ಪ್ರಶಾಂತ್ ಕಾವೇರಿ ನೀರಾವರಿ ನಿಗಮದ ಇಇ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

ಹಲಗೂರು: ಸಮೀಪದ ವಳಗೆರೆದೊಡ್ಡಿ ಗ್ರಾಮದ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ರಾಧೆ- ಕೃಷ್ಣ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟ್ ನ ಆಡಳಿತ ಮಂಡಳಿ ಉತ್ತಮ ಕೃಷ್ಣ ಮತ್ತು ರಾಧೆಯ ವೇಷ ಧರಿಸಿದ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿತು.

ಮುಖ್ಯ ಶಿಕ್ಷಕ ಮಹಾದೇವ ಪ್ರಸಾದ್ ಮಾತನಾಡಿ, ಹಿಂದೂ ಧರ್ಮಕ್ಕೆ ಯಾವ ಗುರು ಇಲ್ಲ, ಆ ಧರ್ಮವೇ ಗುರು. ನಮ್ಮ ಸನಾತನ ಧರ್ಮದಲ್ಲಿ ಒಳ್ಳೆಯ ಆಲೋಚನೆಗೆ ಮಾನ್ಯತೆ ಇದೆ. ಕುಟುಂಬದಲ್ಲಿ ಹಿರಿಯರು ಒಳ್ಳೆಯದನ್ನು ಹೇಳಿಕೊಟ್ಟಾಗ ಮಕ್ಕಳು ಅದನ್ನು ಅನುಸರಿಸುತ್ತಾರೆ ಎಂದರು.ನಿವೃತ್ತ ಶಿಕ್ಷಕ ಲಿಂಗಪಟ್ಟಣದ ಸುಂದರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಚಿಕ್ಕವಯಸ್ಸಿನಿಂದಲೇ ನಮ್ಮ ಸಂಸ್ಕೃತಿಯನ್ನು ಕಲಿಸಲು ಪೋಷಕರು ಮುಂದಾಗಬೇಕು ಎಂದರು.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬಾಲಕೃಷ್ಣನನ್ನು ತೊಟ್ಟಿಲಿಗೆ ಹಾಕಿ ತೂಗುವುದು, ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುವುದು, ಬೆಣ್ಣೆ ಮಡಿಕೆ ಹೊಡೆಯುವುದು ಮುಂತಾದ ಚಟುವಟಿಕೆಗಳನ್ನು ಮಾಡಲಾಯಿತು. ಈ ವೇಳೆ ಶಾಲೆ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್, ಮೇಲ್ವಿಚಾರಕಿ ಎಚ್.ವಿ.ಶ್ವೇತಕುಮಾರಿ, ಅಕ್ಷತಾ ಅಶ್ವಿನ್ ಕುಮಾರ್, ಶಿಕ್ಷಕರು, ಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.