ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಶಾಂತಿವನದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ೨೨ ಕೆರೆಗಳ ಯೋಜನೆ ವೈಫಲ್ಯದ ಬಗ್ಗೆ ರೈತ ಮುಖಂಡರು ಚರ್ಚಿಸಿದರು.
ವಿದ್ಯುತ್ ಮೋಟಾರು ದುರಸ್ಥಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರಿಂದ ₹50 ಲಕ್ಷ ನೆರವು । ತರಳಬಾಳು ಶ್ರೀಗಳ ಸಮ್ಮುಖದಲ್ಲಿ ಸಭೆಕನ್ನಡಪ್ರಭ ವಾರ್ತೆ ಸಿರಿಗೆರೆ
ದಾವಣಗೆರೆ ತಾಲೂಕಿನ 22 ಕೆರೆಗಳಿಗೆ ತುಂಗಾಭದ್ರಾ ನದಿಯ ನೀರು ತುಂಬಿಸಲು ಹಾಗೂ ಈ ಯೋಜನೆ ಸುಲಲಿತವಾಗಿ ನಡೆಯಲು ಆಗಬೇಕಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಸರಿಪಡಿಸಲು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮುಂದಾಗಿರುವುದಕ್ಕೆ ರೈತಾಪಿ ಸಮುದಾಯ ಸಂತಸ ವ್ಯಕ್ತಪಡಿಸಿದೆ. ಇದು ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.ರಾಜ್ಯ ಸರ್ಕಾರವು ಚಿತ್ರದುರ್ಗ–ದಾವಣಗೆರೆ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವ ₹೯೪.೩ ಕೋಟಿ ಯೋಜನೆಗೆ ೨೦೦೭ರಲ್ಲಿ ಅನುಮತಿ ನೀಡಿತ್ತು. ಯೋಜನೆಯ ಕಾಮಗಾರಿಯ ಗುತ್ತಿಗೆಯನ್ನು ಎಲ್ ಅಂಡ್ ಟಿ ಸಂಸ್ಥೆಯು ಪಡೆದುಕೊಂಡಿತ್ತು. ಗುತ್ತಿಗೆದಾರರು ೨೦೧೪ರ ವರೆಗೆ ಕಾಮಗಾರಿ ನಡೆಸಿದರಾದರೂ ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ನೀರು ಬರಲೇ ಇಲ್ಲ. ಇದರಿಂದ ಆ ಭಾಗದ ರೈತರು ನಿರಾಶರಾಗಿದ್ದರು.
ಪಕ್ಕದಲ್ಲಿಯೇ ಇರುವ ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಕಾಮಗಾರಿ ಮುಗಿಸಿ ಸುತ್ತಲಿನ ಕೆರೆಗಳನ್ನು ತುಂಬಿಸುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದ ರೈತರಿಗೆ ತಮ್ಮ ಯೋಜನೆ ವಿಫಲವಾಗಿರುವುದು ಬೇಸರವನ್ನುಂಟು ಮಾಡಿತ್ತು. ಇದರ ವೈಫಲ್ಯವನ್ನು ಖಂಡಿಸಿ ಹೆಬ್ಬಾಳು ಟೋಲ್ ಬಳಿ ಪ್ರತಿಭಟನೆಗೆ ಮುಂದಾಗಿದ್ದ ರೈತರು ತರಳಬಾಳು ಜಗದ್ಗುರುಗಳ ನಿರ್ಧಾರದಿಂದ ಪ್ರತಿಭಟನೆ ಕೈಬಿಟ್ಟು ಮಠದ ಶಾಂತಿವನದಲ್ಲಿ ಶ್ರೀಗಳ ಸಮ್ಮುಖದಲ್ಲಿ ಸಭೆ ಸೇರಿ ೨೨ ಕೆರೆಗಳ ಏತ ನೀರಾವರಿಗೆ ಸಂಬಂಧಿಸಿದಂತೆ ಚರ್ಚೆ ನಡಿಸಿದ್ದಾರೆ.ರೈತರ ಜೊತೆಗಿನ ಮಾತುಕತೆಯ ನಂತರ ಶ್ರೀಗಳು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರೊಡನೆ ಯೋಜನೆಯನ್ನು ಸರಿದಾರಿಗೆ ತರುವ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಒಡೆದು ಹೋಗುತ್ತಿರುವ ಪೈಪ್‌ಲೈನ್‌ಗಳನ್ನು ಈಗಿರುವ ₹೫೦ ಲಕ್ಷ ಅನುದಾನದಲ್ಲಿ ವಿಳಂಬಕ್ಕೆ ಅವಕಾಶ ಇಲ್ಲದಂತೆ ದುರಸ್ಥಿ ಕೆಲಸವನ್ನು ನೀರಾವರಿ ನಿಗಮದ ಅಧಿಕಾರಿಗಳು ಮಾಡಬೇಕು. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವ ಮುನ್ನವೇ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಇರುವುದರಿಂದ ಅಧಿಕಾರಿಗಳು ವಿಳಂಬ ಇಲ್ಲದಂತೆ ಕೆಲಸ ಮಾಡಬೇಕು ಎಂದು ಶ್ರೀಗಳು ಸೂಚಿಸಿದ್ದಾರೆ.
ಮಲ್ಲಶೆಟ್ಟಿಹಳ್ಳಿಯ ಜಾಕ್‌ವೆಲ್‌ನಲ್ಲಿ ಕೆಟ್ಟಿರುವ ಮೋಟಾರುಗಳನ್ನು ದುರಸ್ಥಿ ಮಾಡಿಸಲು ಸದ್ಯಕ್ಕೆ ಅನುದಾನದ ಕೊರತೆ ಇರುವುದರಿಂದ, ದುರಸ್ಥಿಗೆ ಬೇಕಾದ ₹ ೫೦ ಲಕ್ಷ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮತ್ತು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಖರ್ಚು ಮಾಡಿ ಸರ್ಕಾರದಿಂದ ಹಣ ಬಂದ ನಂತರ ತೆಗೆದುಕೊಳ್ಳಬೇಕು. ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ಪತಿ ಮಲ್ಲಿಕಾರ್ಜುನ್ ಅವರಿಗೆ ಹೇಳಿ ಈ ಕೆಲಸಕ್ಕೆ ಮುಂದಾಗಬೇಕೆಂದು ಸೂಚಿಸಿದರು.ಕೆರೆ ಯೋಜನೆಯ ಪೈಪುಗಳನ್ನು ಹೊಸದಾಗಿ ಅಳವಡಿಸಲು ಸರ್ಕಾರದಿಂದ ೭೪ ಕೋಟಿ ರು. ಅನುದಾನ ದೊರೆತಿದೆ. ಮುಂದಿನ ಮಳೆಗಾಲದ ಒಳಗೆ ಯೋಜನಾ ವ್ಯಾಪ್ತಿಯ ಪೈಪುಗಳನ್ನು ಬದಲಿಸಿ ಯೋಜನೆಯು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶ್ರೀಗಳು ಅಧಿಕಾರಿಗಳಿಗೆ ಸೂಚಿಸಿದರು.
೨೨ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಹರಿಹರದ ಹಲಸಬಾಳು ಸಮೀಪದ ತುಂಗಾಭದ್ರ ನದಿಯ ಬಳಿ ನಿರ್ಮಿಸಲಾಗಿರುವ ಜಾಕ್‌ವೆಲ್ (೧) ರಲ್ಲಿ ಬೃಹತ್ ಪ್ರಮಾಣದ ಎರಡು ಮೋಟಾರುಗಳನ್ನು ಅಳವಡಿಸಲಾಗಿದೆ. ಆದರೆ ಎರಡೂ ಮೋಟಾರುಗಳನ್ನು ಬಳಸಿ ನೀರು ಎತ್ತಲು ಮುಂದಾದರೆ ಯೋಜನೆಯ ವ್ಯಾಪ್ತಿಯಲ್ಲಿ ಅಳವಡಿಸಿರುವ ಪೈಪುಗಳು ನೀರಿನ ಒತ್ತಡಕ್ಕೆ ಒಡೆದುಹೋಗುವ ಸಾಧ್ಯತೆ ಇರುವುದರಿಂದ ಒಂದೇ ಮೋಟಾರ್ ಬಳಸಿ ಸದ್ಯಕ್ಕೆ ನೀರು ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ.ಬರುವ ಡಿಸೆಂಬರ್ ಒಳಗೆ ಸಾಧ್ಯವಾದಷ್ಟು ಹೆಚ್ಚು ಪ್ರಮಾಣದ ನೀರನ್ನು ಕೆರೆಗಳಿಗೆ ತುಂಬಿಸುವ ಉದ್ದೇಶದಿಂದ ಜಾಕ್‌ವೆಲ್ -೧ ಮತ್ತು ೨ ರ ಮಧ್ಯೆ ಪೈಪುಗಳನ್ನು ದುರಸ್ಥಿ ಮಾಡಿ ಪೋಲಾಗುತ್ತಿರುವ ನೀರನ್ನು ತಡೆಗಟ್ಟಬೇಕು.
ಮಲ್ಲಶೆಟ್ಟಿಹಳ್ಳಿ ಜಾಕ್‌ವೆಲ್‌ನಿಂದ ನೀರು ಹರಿಯುವ ಎಲ್ಲಾ ಕೆರೆಗಳ ವಾಲ್ವ್ ಕಾಂಕ್ರೀಟ್ ಚೇಂಬರ್‌ಗಳನ್ನು ನಿರ್ಮಿಸಿ ಕಬ್ಬಿಣದ ಬೀಗ ಮುದ್ರೆಯನ್ನು ಅಳವಡಿಸಿ ಉದ್ದೇಶಪೂರ್ವಕವಾಗಿ ರೈತರು ವಾಲ್ವ್‌ಗಳನ್ನು ಮುಟ್ಟದಂತೆ ಮಾಡಬೇಕು.ಮಲ್ಲಶೆಟ್ಟಿಹಳ್ಳಿ ಜಾಕ್‌ವೆಲ್‌ಗೆ ನೀರು ಬಂದ ಮೇಲೆ ಸದ್ಯಕ್ಕೆ ಒಂದು ಪಂಪನ್ನು ಆನ್ ಮಾಡಿ ಮೊದಲ 11 ಕೆರೆಗಳಿಗೆ ಕಬ್ಬಿಣದ ಬೀಗ ಮುದ್ರೆ ಅಳವಡಿಸುವವರೆಗೂ ನೀರು ಬಿಡುವುದು. ಬೀಗ ಮುದ್ರೆ ಅಳವಡಿಸಿದ ಮೇಲೆ ಈ 11 ಕೆರೆಗಳ ವಾಲ್ವಗಳನ್ನು ಬಂದ್ ಮಾಡಿ ಮುಂದಿನ ಕೆರೆಗಳಿಗೆ ನೀರು ಬಿಡಬೇಕು.
ಎರಡನೇ ಪಂಪ್ ರಿಪೇರಿ ಆದ ಮೇಲೆ ಸರದಿ ಪ್ರಕಾರ ಕೆಲವು ದಿನಗಳ ಕಾಲ ಮೊದಲ 11 ಕೆರೆಗಳಿಗೆ ನೀರು ಬಿಡುವುದು ಮತ್ತು ಅವುಗಳನ್ನು ಬಂದ್ ಮಾಡಿ ಮುಂದಿನ ಕೆರೆಗಳಿಗೆ ನೀರು ಬಿಡುವುದು ಎಂಬಿತ್ಯಾದಿ ನಿರ್ಧಾರಕ್ಕೆ ಬಂದ ನಂತರ ಯೋಜನೆಯ ಬಗ್ಗೆ ರೈತರ ಮನಸ್ಸಿನಲ್ಲಿ ಆಶಾಭಾವ ಮೂಡಿದೆ.