ಕನ್ನಡಪ್ರಭ ವಾರ್ತೆ ಬೆಳಗಾವಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಶಶಿಕಾಂತ ಪಡಸಲಗಿ ನೇತೃತ್ವದಲ್ಲಿ ನಗರದ ಯಡಿಯೂರಪ್ಪ ಮಾರ್ಗದ ಬೈಪಾಸ್‌ ರಸ್ತೆ ಮೇಲೆ ಸಾವಿರಾರು ರೈತರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಗಮಿಸಿ, ರೈತರ ಮನವಿ ಆಲಿಸಿದರು. ಬಳಿಕ ಸುವರ್ಣಸೌಧಕ್ಕೆ ಮುತ್ತಿಗೆಗೆ ಯತ್ನಿಸಿದ ರೈತರನ್ನು ಪೊಲೀಸರು ತಡೆದು, ವಶಕ್ಕೆ ಪಡೆದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಶಶಿಕಾಂತ ಪಡಸಲಗಿ ನೇತೃತ್ವದಲ್ಲಿ ನಗರದ ಯಡಿಯೂರಪ್ಪ ಮಾರ್ಗದ ಬೈಪಾಸ್‌ ರಸ್ತೆ ಮೇಲೆ ಸಾವಿರಾರು ರೈತರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಗಮಿಸಿ, ರೈತರ ಮನವಿ ಆಲಿಸಿದರು. ಬಳಿಕ ಸುವರ್ಣಸೌಧಕ್ಕೆ ಮುತ್ತಿಗೆಗೆ ಯತ್ನಿಸಿದ ರೈತರನ್ನು ಪೊಲೀಸರು ತಡೆದು, ವಶಕ್ಕೆ ಪಡೆದರು.

ಟನ್ ಕಬ್ಬಿಗೆ ಕಾರ್ಖಾನೆಯವರು ₹3500, ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಒಂದು ಸಾವಿರ ಸೇರಿಸಿ ಒಟ್ಟು ₹5500 ದರ ನೀಡಬೇಕು. 80 ಕಾರ್ಖಾನೆಗಳ ಮುಂದೆ ಡಿಜಿಟಲ್‌ ತೂಕದ ಯಂತ್ರ ಅಳವಡಿಕೆ, ರಿಕವರಿ ಸ್ಯಾಂಪಲ್ ಮಷಿನ್ ಅಳವಡಿಕೆ ಮಾಡುವುದು, ಬೆಳಗಾವಿಯ ಸಕ್ಕರೆ ಕಮಿಷನರ್ ಕಚೇರಿಗೆ ಐಎಎಸ್‌ ಅಧಿಕಾರಿ, ಸಿಬ್ಬಂದಿ ನೇಮಕ ಮಾಡುವುದು ಸೇರಿ‌ ಒಟ್ಟು 23 ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಮಂಡ್ಯ ಭಾಗದ ರೈತರ ಕಬ್ಬಿಗೂ‌ ₹ 3300 ಬೆಲೆ ನಿಗದಿ‌ ಮಾಡಬೇಕು. ಕಿತ್ತೂರು ತಾಲೂಕಿನ ಕುಲವಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣನ ಹಿಡಿದುಕೊಟ್ಟವರಿಗೆ ನೀಡಿದ್ದ ₹ 11 ಸಾವಿರ ಇನಾಂ(ಘಾತಕ್) ಜಮೀನನ್ನು ರೈತರಿಗೆ ಹಂಚಿಕೆ ಮಾಡಬೇಕು. ಹೈನುಗಾರಿಕೆ ಮೇಲೆ ಸಣ್ಣ ಕುಟುಂಬ ಬದುಕುತ್ತಿದ್ದು, ಹಾಲಿನ ದರ ಏರಿಕೆ ಮಾಡಬೇಕು. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಸಕ್ಕರೆ ಕಮಿಷನರ್ ನೇಮಕ ಮಾಡಬೇಕು. ರಿಕವರಿ ಬಗ್ಗೆ ಪ್ರತಿದಿನ ವರದಿ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, 31 ಜಿಲ್ಲೆಗಳ ಜ್ವಲಂತ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ರೈತರ ಸಂಪೂರ್ಣ ಸಾಲ‌ಮನ್ನಾ ಮಾಡಬೇಕು. ಹಾಲಿಗೆ ಲೀಟರ್ ಗೆ‌ ₹ 100 ದರ ನಿಗದಿ ಪಡಿಸಬೇಕು. ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಹಗಲು ಹೊತ್ತು 12 ಗಂಟೆ ಕಡ್ಡಾಯವಾಗಿ ವಿದ್ಯುತ್ ನೀಡಬೇಕು. ಅಕ್ರಮ ಸಕ್ರಮ ಕಾರ್ಯಕ್ರಮ ತಕ್ಷಣ ಪುನಃ ಆರಂಭಿಸಬೇಕು.‌ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಳೆದ ನಾಲ್ಕು ದಿನಗಳಿಂದ ಅಧಿವೇಶನದಲ್ಲಿ ಕಾಲಹರಣ ಮಾಡಲಾಗುತ್ತಿದೆ. ರೈತರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಸದನದಲ್ಲಿ ಚರ್ಚೆ ಆಗಬೇಕು. 224 ಶಾಸಕರು ಸದನದಲ್ಲಿ ಹಾಜರಿದ್ದು, ಸಮಸ್ಯೆ ಇತ್ಯರ್ಥ ಪಡಿಸಬೇಕು. ಮುಖ್ಯಮಂತ್ರಿಗಳೇ ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆ ಆಲಿಸಬೇಕು. ಸಮಸ್ಯೆ ಬಗೆಹರಿಸುವ ಸ್ಪಷ್ಟ ಭರವಸೆ ಸಿಗದಿದ್ದರೆ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ, ರೈತರ ಬೇಡಿಕೆ ಆಲಿಸಿದರು. ಬಳಿಕ ಪ್ರತಿಭಟನಾ‌ನಿರತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರೈತರ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಸಮೀರವಾಡಿಯಲ್ಲಿ ಕಬ್ಬು, ಟ್ರ್ಯಾಕ್ಟರ್ ಸುಟ್ಟ ಘಟನೆ ನಡೆಯಬಾರದಿತ್ತು. ಗುರ್ಲಾಪುರ ಹೋರಾಟ ಇಡೀ ರಾಜ್ಯ ರೈತ ಸಂಘದ ಶಕ್ತಿ ಅದು. ರೈತರು ದೊಡ್ಡ ಸಂಯಮ ಪ್ರದರ್ಶನ ಮಾಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಬ್ಬಿಗೆ ರಾಜ್ಯದ ಉದ್ದಗಲಕ್ಕೂ ಸರ್ಕಾರದ ಪ್ರೋತ್ಸಾಹಧನ ಕೊಡುತ್ತೇವೆ. ರಿಕವರಿ ಆಧರಿಸಿ ಹಣ ಕೊಡುವ ಪ್ರಯತ್ನ ಸರ್ಕಾರ ಮಾಡಿದೆ. ಬೆಳಗಾವಿ ಹೋರಾಟದಿಂದ ಇಡೀ ರಾಜ್ಯದ ರೈತರಿಗೆ ಸಹಾಯವಾಗಿದೆ ಎಂದರು.

ಹೋರಾಟದ ನೇತೃತ್ವ ವಹಿಸಿದ್ದ ಚೂನಪ್ಪ ಪೂಜಾರಿ, ಸಕ್ಕರೆ ಸಚಿವರಿಗೆ ಹುಲಿ ಎಂದರು. ಹುಲಿ ಮನಸ್ಸು ಮಾಡಿದರೆ ಕೆಲಸ ಆಗುತ್ತದೆ. ಸಕ್ಕರೆ ಇಲಾಖೆಯಿಂದಲೂ ಕೆಲಸ ಆಗಬೇಕಿದೆ. ಬಳಿಕ 20 ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಬನ್ನಿ. ಅಲ್ಲಿ ಅವರ ಮುಂದೆ ಮಾತುಕತೆಗೆ ಬರುವಂತೆ ಆಹ್ವಾನಿಸಲಾಯಿತು. ಆ ಪ್ರಕಾರ ಚೂನಪ್ಪ ಪೂಜಾರಿ, ಶಿವಾನಂದ ಮುಗಳಿಹಾಳ ಸೇರಿ ಮತ್ತಿತರ ರೈತ ಮುಖಂಡರನ್ನು ಸುವರ್ಣ ವಿಧಾನಸೌಧದತ್ತ ಪೊಲೀಸರು ಕರೆದುಕೊಂಡು ಹೋದರು. ಆದರೆ, ಸರ್ಕಾರದಿಂದ ಬೇಡಿಕೆಗಳ ಬಗ್ಗೆ ಸ್ಪಂದನೆ ದೊರೆಯಲಿಲ್ಲ. ಹಾಗಾಗಿ, ಪ್ರತಿಭಟನಾನಿರತ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು.

-----

ಕೋಟ್‌

23 ಬೇಡಿಕೆಗಳ ಈಡೇರಿಕೆಗೆ ಮನವಿ ಕೊಟ್ಟಿದ್ದೀರಿ. ಬೆಳೆಗೆ ಸೂಕ್ತ ಬೆಲೆ ನೀಡಲು ನೀವು ಒತ್ತಾಯ ಮಾಡಿದ್ದೀರಿ. ಪ್ರಧಾನಿ ನರೇಂದ್ರ ‌ಮೋದಿ ಇನ್ನೂ 10 ವರ್ಷ ಇರಲಿ ಆದರೇ ರೈತರ ಬೆಳೆಗೆ ಸೂಕ್ತ ಬೆಲೆ ನೀಡಲಿ. ನಾನು ದ್ರಾಕ್ಷಿ ಬೆಳೆದೆ, ಉಳ್ಳಾಗಡ್ಡಿಗಿಂತ ದ್ರಾಕ್ಷಿ ದರ ಕಮ್ಮಿ ಆಯಿತು. ದೇಶದಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು. ಇದನ್ನು ಎಲ್ಲರೂ ಸೇರಿಸಿ ಮಾಡಬೇಕು. ಬೆಳೆಗಳನ್ನು ತಕ್ಷಣವೇ ಮಾರಾಟ ಮಾಡಲು ಹೋಗಬಾರದು. ಬೆಳೆ ಒತ್ತಿಸಾಲ ನೀಡುವ ವ್ಯವಸ್ಥೆ ಮರು ಜಾರಿ ಮಾಡಬೇಕು. ಎಥೆನಾಲ್ ಉತ್ಪಾದನೆ ಹೆಚ್ಚಿಸಲು ಅವಕಾಶ ಕಲ್ಪಿಸಬೇಕು.

ಶಿವಾನಂದ ಪಾಟೀಲ, ಸಕ್ಕರೆ ಸಚಿವ