ಸಾರಾಂಶ
ಕನ್ನಡಪ್ರಭ ವಾರ್ತೆ ನಿಡಗುಂದಿ
ನಿಡಗುಂದಿ, ಕೊಲ್ಹಾರ ಹಾಗೂ ಬಸವನಬಾಗೇವಾಡಿ ತಾಲೂಕಿನ ರೈತರ ಜಮೀನುಗಳಲ್ಲಿ ಅಳವಡಿಸುತ್ತಿರುವ 765 ಕೆವಿ ವಿದ್ಯುತ್ ಗೋಪುರಗಳಿಗೆ ಸಂಬಂಧಿಸಿದಂತೆ ರೈತರ ಬೇಡಿಕೆ ಈಡೇರುವವರೆಗೆ ಕಂಬ ಅಳವಡಿಕೆ ಸ್ಥಗಿತ ಮಾಡುವಂತೆ ಆಗ್ರಹಿಸಿ ನಿಡಗುಂದಿ ತಾಲೂಕು ರೈತರು ತಹಸೀಲ್ದಾರ್ ಎ.ಡಿ ಅಮರವಾದಗಿ ಅವರ ಮೂಲಕ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಿಡಗುಂದಿಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಸೆ.26ರಂದು ಹೆಚ್ಚುವರಿ ಜಿಲ್ಲಾಧಿಕಾರಿಗಳ ದರ ನಿರ್ಧರಣಾ ಸಮಿತಿ ಸಭೆ ನಡೆಸಲಾಗಿತ್ತು. ಅಂದಿನ ಸಭೆಯಲ್ಲಿ ನಿಡಗುಂದಿ, ಕೊಲ್ಹಾರ ಮತ್ತು ಬಸವನಬಾಗೇವಾಡಿ ತಾಲೂಕುಗಳ ರೈತರು ಪಾಲ್ಗೊಂಡಿದ್ದು, ರೈತರ ಹಲವಾರು ಬೇಡಿಕೆಗಳನ್ನು ಮುಂದಿಡಲಾಗಿತ್ತು. ಅಲ್ಲದೇ, ಬೇಡಿಕೆ ಈಡೇರುವವರೆಗೆ ಕಂಬ ಅಳವಡಿಕೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿತ್ತು. ಆದರೆ, ಗುತ್ತಿಗೆ ಪಡೆದ ಕಂಪನಿಗಳು ತಾಲೂಕಿನ ಜಮೀನುಗಳಲ್ಲಿ ಏಕಾಏಕಿ ಕಂಬಗಳನ್ನು ಅಳವಡಿಕೆಗೆ ಸಜ್ಜಾಗಿದ್ದು, ರೈತರನ್ನು ನಿದ್ದೆಗೆಡುವಂತೆ ಮಾಡಿದೆ. ರೈತರ ಅನುಮತಿಯನ್ನು ಪಡೆಯದೇ ಒಂದೇ ಕಂತಿನಲ್ಲಿ ಪರಿಹಾರ ನೀಡಬೇಕು, ಕಂಬದ ಜತೆಗೆ ಹಾದುಹೋದ ತಂತಿಗಳ ಕೆಳ ಭಾಗದಲ್ಲಿನ ಜಾಗೆಗೆ ಕಂಬದಷ್ಟೆ ಪರಿಹಾರ ನೀಡಬೇಕು, ಗೋಪುರ ಅಳವಡಿಕೆ ಸಮಯದಲ್ಲಿ ಹಾನಿಯಾದ ಬೆಳೆಗಳ ಹಾನಿಗೆ ಪರಿಹಾರ ನೀಡಬೇಕು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರ ಸಮಾಲೋಚನೆ ಸಭೆ ಕರೆದು ದರ ಹಾಗೂ ಪರಿಹಾರದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ರೈತರ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸುವ ಮುನ್ನವೇ ಕಂಬ ಹಾಕಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈಗಾಗಲೇ ಕೆಲ ಜಮೀನುಗಳಲ್ಲಿ ರೈತರ ಮೇಲೆ ದೌರ್ಜನ್ಯ ನಡೆಸಿ ಕಂಬಗಳ ಅಡಿಪಾಯ ಹಾಕುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಅದನ್ನು ತಡೆಹಿಡಿಯಲು ಆದೇಶ ಮಾಡಬೇಕು ಎಂದು ನೂರಾರು ರೈತರು ಮನವಿ ಮಾಡಿದ್ದಾರೆ.
ರೈತ ಮುಖಂಡ ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಶ್ಯಾಮರಾವ್ ಪರ್ವತಿಕರ, ಇಬ್ರಾಹಿಂ ವಾಲಿಕಾರ, ಗೌಡಪ್ಪಗೌಡ ಹಂಗರಗಿ, ಮಹಾಂತೇಶ ಹಂಗರಗಿ, ರಮೇಶ ಹೋಗೋಡಿ, ಬಸವರಾಜ ಡಮನಾಳ, ಎಂ.ಕೆ.ಮುತ್ತಣ್ಣವರ, ಕೆ.ವೈ ಉಕ್ಕಲಿ, ಶರಣಗೌಡ ಗೌಡರ, ಭೀಮಣ್ಣ ಮುರನಾಳ, ಕುಮಾರ ವಂದಾಲ ಸೇರಿದಂತೆ ಮೂರು ತಾಲೂಕುಗಳ ನೂರಾರು ರೈತರು ಈ ವೇಳೆ ಹಾಜರಿದ್ದರು.