ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಹೇಮಗಿರಿ ಸಕ್ಕರೆ ಕಾರ್ಖಾನೆ ಕಬ್ಬು ಕಟಾವು ಮತ್ತು ಸಾಗಾಣಿಕೆ ಕುರಿತಂತೆ ತಹಸೀಲ್ದಾರ್ ತಕ್ಷಣ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತರ ಸಭೆ ಕರೆಯುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.ಪಟ್ಟಣದ ರೈತಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕಬ್ಬು ಸಾಗಾಣಿಕೆ ಸಮಯದಲ್ಲಿ ಕಟಾವು ಕಾರ್ಮಿಕರಿಂದ ರೈತರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಮಾಕವಳ್ಳಿಯ ಹೇಮಗಿರಿ ಷುಗರ್ಸ್ ವಾರ್ಷಿಕ 8 ಲಕ್ಷ ಟನ್ ಗಳಷ್ಟು ಕಬ್ಬು ಅರೆಯುತ್ತಿದೆ. ಕಬ್ಬು ಕಟಾವು ಕಾರ್ಮಿಕರನ್ನು ಹೊರಗಿನಿಂದ ಕರೆತಂದು ಅವರಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಆದರೂ ಕಬ್ಬು ಕಟಾವು ಕಾರ್ಮಿಕರು ಕಾರ್ಖಾನೆ ನಿಗದಿಪಡಿಸಿದ ದರಕ್ಕಿಂತಲೂ ಅಧಿಕ ಹಣವನ್ನು ರೈತರಿಂದ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.ಈಗಾಗಲೇ ಒಂದು ಟನ್ ಕಬ್ಬು ಕಡಿಯಲು 700 ರು. ಹಣ ವಸೂಲಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಒಂದು ಸಾವಿರ ಗಡಿ ದಾಟಲಿದೆ. ಪ್ರತಿವರ್ಷವೂ ರೈತರು ಕಬ್ಬು ಕಟಾವು ಕಾರ್ಮಿಕರ ಸುಲಿಗೆಗೆ ಒಳಗಾಗುತ್ತಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿ ಇದನ್ನು ಕಂಡೂ ಕಾಣದಂತೆ ವ್ಯವಹರಿಸುತ್ತಿದೆ ಎಂದರು.
ಕಾರ್ಖಾನೆಯ ಕಬ್ಬು ಕಟಾವು ಮತ್ತು ಸಾಗಣಿಕೆ ನೀತಿಯಿಂದ ಕಬ್ಬು ಬೆಳೆಗಾರರು ಸಾಲಗಾರರಾಗುತ್ತಿದ್ದಾರೆ. ರೈತ ಬೆಳೆದ ಕಬ್ಬಿನಿಂದ ಕಾರ್ಖಾನೆ ಲಾಭ ಮಾಡಿಕೊಳ್ಳುತ್ತಿದೆಯೇ ಹೊರತು, ರೈತರು ಮಾತ್ರ ಸಾಲಗಾರರಾಗುತ್ತಿದ್ದಾರೆ. ಕಬ್ಬು ಕಟಾವು ಮತ್ತು ಸಾಗಣಿಕೆ ಜವಾಬ್ದಾರಿಯನ್ನು ಕಾರ್ಖಾನೆಯೇ ಹೊತ್ತುಕೊಳ್ಳಬೇಕು. ಈ ಬಗ್ಗೆ ರೈತ ಸಂಘ ಮನವಿ ಮಾಡುತ್ತಿದ್ದರೂ ತಾಲೂಕು ಆಡಳಿತ ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿ ಮುಖಾಮುಖಿ ಸಭೆ ಕರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಕ್ರಮ ಸಂಪರ್ಕ ಪಡೆದಿರುವ ರೈತರ ಕೃಷಿ ಪಂಪ್ ಸೆಟ್ಟುಗಳ ಸಕ್ರಮಕ್ಕೆ ರಾಜ್ಯ ಸರ್ಕಾರ ಗಡುವು ವಿಧಿಸಿದೆ. ಸರ್ಕಾರ ವಿಧಿಸಿರುವ ಡೆಡ್ ಲೈನ್ ನೀತಿಯನ್ನು ಕೈಬಿಟ್ಟು ರೈತರು ಹಣ ಹೊಂದಿಸಿಕೊಂಡು ತಮ್ಮ ಪಂಪ್ ಸೆಟ್ಟುಗಳ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಕ್ರಮ ಸಕ್ರಮಕ್ಕೆ 17 ಸಾವಿರ ರು. ಶುಲ್ಕ ನಿಗದಿಪಡಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಇದನ್ನು 23 ಸಾವಿರ ರು.ಗಳಿಗೆ ಹೆಚ್ಚಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಕ್ರಮ- ಸಕ್ರಮಕ್ಕಿರುವ ಡೆಡ್ ಲೈನ್ ದಿನಾಂಕವೂ ಬಹುತೇಕ ರೈತರಿಗೆ ಗೊತ್ತಿಲ್ಲ. ಇದರ ಬಗ್ಗೆ ವಿದ್ಯುತ್ ಇಲಾಖೆ ಅಗತ್ಯ ಪ್ರಚಾರ ಮಾಡಿಲ್ಲ ಎಂದು ದೂರಿದರು.ರಾಜ್ಯ ಸರ್ಕಾರದ ಡೆಡ್ ಲೈನ್ ನೀತಿಯಿಂದ ಲೈನ್ ಮೆನ್ ಗಳಿಗೆ ಅನುಕೂಲವಾಗಲಿದೆ. ಅಕ್ರಮ ಸಕ್ರಮ ಮಾಡಿಸಿಕೊಳ್ಳದ ರೈತರ ವಿದ್ಯುತ್ ಸಂಪರ್ಕ ಕಡಿತ ಮಾಡಲು ಲೈನ್‌ಮೆನ್ ಗಳು ಮುಂದಾಗುತ್ತಾರೆ. ಬೆಳೆದಿರುವ ಬೆಳೆ ಉಳಿಸಿಕೊಳ್ಳಲು ರೈತರು ಲೈನ್‌ಮೆನ್ ಗಳಿಗೆ ಸಮ್ ತಿಂಗ್ ನೀಡಬೇಕಾಗಿದೆ. ಇದು ಭ್ರಷ್ಟಾಚಾರಕ್ಕೆ ನಾಂದಿ ಹಾಡಲಿದೆ ಎಂದು ಕಿಡಿಕಾರಿದರು.
ಸುದ್ಧಿಗೋಷ್ಠಿಯಲ್ಲಿ ರೈತಸಂಘದ ಮುಖಂಡರಾದ ಚೌಡೇನಹಳ್ಳಿ ಕೃಷ್ಣೇಗೌಡ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ ಇದ್ದರು.