ಹಿಂಗಾರು ಬೆಳೆಗೆ ಮಾರ್ಚ್‌ವರೆಗೆ ನೀರು ಹರಿಸಲು ರೈತರ ಒತ್ತಾಯ

| Published : Nov 18 2025, 01:15 AM IST

ಸಾರಾಂಶ

ಡಿಸಿಎಂ ಡಿ.ಕೆ. ಶಿವಕುಮಾರ್ ಎರಡನೇ ಬೆಳೆಗೆ ನೀರು ಬಿಡುವುದಿಲ್ಲ.

ಹೊಸಪೇಟೆ: ಡಿಸಿಎಂ ಡಿ.ಕೆ. ಶಿವಕುಮಾರ್ ಎರಡನೇ ಬೆಳೆಗೆ ನೀರು ಬಿಡುವುದಿಲ್ಲ. ಜನವರಿ ತಿಂಗಳವರೆಗೆ ಮಾತ್ರ ನೀರು ಬಿಡುತ್ತೇವೆ ಎಂದು ಇತ್ತೀಚೆಗೆ ತೆಗೆದುಕೊಂಡ ನಿಲುವನ್ನು ವಿರೋಧಿಸಿ ಹಿಂಗಾರು ಬೆಳೆಗಳಿಗೆ ಕಾಲುವೆಗೆ ಜನವರಿಯಿಂದ ಮಾರ್ಚ್ ವರೆಗೆ ನೀರು ಹರಿಸಲು ಮತ್ತು ಕ್ರಸ್ಟ್ ಗೇಟ್ ಅಳವಡಿಸಲು ರೈತರು ಆಗ್ರಹಿಸಿ ಸಿರುಗುಪ್ಪದ ಕರೂರು ಗ್ರಾಮದಿಂದ ತುಂಗಭದ್ರಾ ಮಂಡಳಿವರೆಗೆ ನೂರಾರು ರೈತರು ಸುಮಾರು 120 ಕಿ.ಮೀ. ಪಾದಯಾತ್ರೆ ನಡೆಸಿ ಮಂಡಳಿಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಎರಡನೇ ಬೆಳೆಗೆ ನೀರು ಬಿಡಬೇಕೆಂದು ಆಗ್ರಹಿಸಿ ನ.12ರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಸಿರುಗುಪ್ಪ ತಾಲೂಕಿನ ಹಳ್ಳಿಗಳಾದ ಕರೂರು ಗ್ರಾಮದಿಂದ ಪ್ರಾರಂಭವಾದ ಪಾದಯಾತ್ರೆ ಸಿರಿಗೇರಿ ಕ್ರಾಸ್, ಶಾನವಾಸಪುರ ದಿಂದ 30 ಹಳ್ಳಿಗಳ ಮೂಲಕ ನೂರಾರು ರೈತರು ಏಳು ದಿನಗಳ ಬೃಹತ್ ಪಾದಯಾತ್ರೆ ನಡೆಸಿದರು.

ರೈತ ಸಂಘದ ಕರೂರು ಅಧ್ಯಕ್ಷ ಆರ್.ಮಾಧವ ರೆಡ್ಡಿ ಮಾತನಾಡಿ, ರೈತರ ಹೆಸರನ್ನು ಹೇಳಿಕೊಂಡು ಕಾರ್ಖಾನೆಗಳಿಗೆ ನೀರು ಬಿಡುತ್ತಿದ್ದಾರೆ. ಎರಡನೇ ಬೆಳೆಗೆ ನೀರು ಕೊಡುವುದಿಲ್ಲ ಬೆಳೆಗಳನ್ನು ಬೆಳೆಯಬೇಡಿ ಎಂದು ಯಾರಿಗಾದರೂ ಮಾಹಿತಿ ಕೊಟ್ಟಿದ್ದಾರಾ? ಅಥವಾ ರೈತರನ್ನು ಸಭೆ ಕರೆದು ನಿರ್ಣಯಿಸಿದ್ದಾರಾ? ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ತುಂಗಭದ್ರಾ ಆಡಳಿತ ಮಂಡಳಿಯವರು ಸರಿಯಾಗಿ ರೈತರ ಅಗತ್ಯಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಬೇಕು. ಜಲಾಶಯದಲ್ಲಿ 78 ಕ್ಯುಸೆಕ್‌ ನೀರಿದ್ದರೂ ಬಿಡಲ್ಲ ಎಂದು ಹೇಳುತ್ತಿದ್ದಾರೆ. ಕೆಲವೊಮ್ಮೆ 40 ಕ್ಯುಸೆಕ್‌ ನೀರಿದ್ದರೂ ಎರಡನೇ ಬೆಳೆಗೆ ನೀರು ಬಿಟ್ಟಿದ್ದು ನಿದರ್ಶನಗಳಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಈ ನಾಲ್ಕು ಜಿಲ್ಲೆಗಳು ತುಂಗಭದ್ರ ಜಲಾಶಯವನ್ನೇ ನಂಬಿಕೊಂಡು 10 ಲಕ್ಷ ಎಕರೆಯ ಜಮೀನಿನ ರೈತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಜಲಾಶಯದ ಕ್ರಸ್ಟ್‌ ಗೇಟ್‌ ಕಿತ್ತು ಹೋಗಿದ್ದರಿಂದ ರೈತರಿಗೆ ಲಭ್ಯವಾಗಬೇಕಿದ್ದಂತಹ ಸಾವಿರಾರು ಕ್ಯುಸೆಕ್‌ ನೀರು ಸಮುದ್ರ ಪಾಲಾಯಿತು. ಜೊತೆಗೆ ಮುಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದ ಎಡದಂಡೆ, ಮೇಲ್ದದಂಡೆ ಕಾಲುವೆ ಭಾಗದ ರೈತರ ಬೆಳೆಗಳು ಹಾನಿಗೊಳಗಾಗಿವೆ. ಇದು ವರೆಗೂ ಒಂದು ಗೇಟ್ ಅಳವಡಿಸಲು ಸಾಧ್ಯವಾಗಿಲ್ಲ. ಜಿಂದಾಲ್ ಕಾರ್ಖಾನೆಯಲ್ಲಿ ನೀರಿನ ಕಾರಂಜಿಗಳು ಜಿನುಗುಡುತ್ತಿವೆ. ನಮಗೆ ನೀರು ಕೊಡಲು ಸಾಧ್ಯವಾಗುವುದಿಲ್ಲವೇ ಕೇವಲ 50 ದಿನಗಳವರೆಗೆ ನೀರು ಬಿಡಿ ಎಂದು ಕೇಳುತ್ತಿದ್ದೇವೆ. ಕೇವಲ 50 ದಿನಗಳವರೆಗೆ ನೀರು ಎಷ್ಟೋ ರೈತರ ಬದುಕು ಹಸನಾಗುತ್ತದೆ ಎಂದರು.

ಟಿ.ಬಿ.ಬೋರ್ಡ್ ಕಾರ್ಯದರ್ಶಿ ಓಆರ್‌ಕೆ ರೆಡ್ಡಿ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರ ಇಂಡೆಂಟ್ ಕೊಟ್ಟಂತೆ ನೀರು ಬಿಡುತ್ತೇವೆ. ನೀರು ಬ್ಯಾಂಕ್ ನಲ್ಲಿರುವ ಹಣ ಇದ್ದಂತೆ ನಿಮ್ಮ ನೀರು ನಿಮಗೆ ಬಳಕೆಗೆ ಬೇಕೆಂದಾಗ ಬಳಸಿಕೊಳ್ಳಬಹುದು. ಸರ್ಕಾರ ಹೇಳಿದರೆ ಬಿಡಲು ನಮ್ಮ ಅಭ್ಯಂತರವಿಲ್ಲ, ಕ್ರಸ್ಟ್ ಗೇಟ್ ಗಳನ್ನು ಡಿಸೆಂಬರ್ 23ಕ್ಕೆ ಗೇಟ್ ಅಳವಡಿಸಲು ಪ್ರಾರಂಭಿಸಿ ಜೂನ್ 20ರೊಳಗೆ ಮುಗಿಸಲು ಪ್ರಯತ್ನಿಸುತ್ತೇವೆ. 40ಟಿಎಂಸಿ ನೀರು ಇದ್ದಾಗ ಗೇಟ್ ಅಳವಡಿಸುವುದಕ್ಕೂ ನೀರು ಬಿಡುವುದಕ್ಕೂ ಸಂಬಂಧವಿಲ್ಲ ಎಂದರು.

ಮಾರ್ಚ್ ವರೆಗೆ 50 ದಿನಗಳ ಕಾಲ ನೀರು ಬಿಡಿ ಎಂದು ರೈತರು ಕೇಳುತ್ತಿದ್ದಾರೆ ಎಂದು ರೈತರ ಪರವಾಗಿ ಸರ್ಕಾರಕ್ಕೆ ಮಾನವೀಯ ದೃಷ್ಟಿಯಿಂದ ಪತ್ರ ವ್ಯವಹಾರ ಮಾಡಿ ಎಂದು ರೈತರು ಒತ್ತಾಯಿಸಿದರು. ನಾವು ಸರ್ಕಾರಕ್ಕೆ ಕೇಳಿಕೊಳ್ಳುತ್ತೇವೆ ಎಂದು ಕಾರ್ಯದರ್ಶಿ ಉತ್ತರಿಸಿದರು. ಆಗ ಪತ್ರ ವ್ಯವಹಾರದ ಪ್ರತಿ ಸ್ಥಳದಲ್ಲೇ ಕೊಡಿ ಎಂದು ರೈತರು ಕೋರಿದಾಗ ಕಾರ್ಯದರ್ಶಿ ಸಮ್ಮತಿಸಿದರು.

ಪಾದಯಾತ್ರೆಯಲ್ಲಿ ರೈತರಾದ ಜಾಗನೂರು ಮಲ್ಲಿಕಾರ್ಜುನರೆಡ್ಡಿ, ಕಾಳಿದಾಸ, ಬಸವರಾಜ ಸ್ವಾಮಿ, ಲೇಪಾಕ್ಷಿ,ಪಂಪನಗೌಡ, ಸದಾಶಿವಪ್ಪ, ಮುಖಂಡರಾದ ಕರಿಯಪ್ಪ ಗುಡಿಮನಿ, ವಸಂತ್ ರಾಜಕಾಳೆ, ಗಣೇಶ್ ಮತ್ತಿತರರಿದ್ದರು..