ಸಾರಾಂಶ
ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಕೃಷಿ ಮೇಳದ ಮೂರನೇ ದಿನ ಭರಪೂರವಾಗಿ ಆಗಮಿಸಿದ ಶಾಲಾ-ಕಾಲೇಜುಗಳ ಮಕ್ಕಳು ಮೇಳದ ಮರ್ಯಾದೆ ಉಳಿಸುವ ಕೆಲಸವನ್ನು ಮಾಡಿದರು.ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕಳೆದ ಮೂರು ದಿನಗಳ ಕಾಲ ಜರುಗಿದ ಪ್ರಸಕ್ತ ಸಾಲಿನ ಕೃಷಿ ಮೇಳದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರೈತರನ್ನು ಕರೆತರುವಲ್ಲಿ ಕೃಷಿ ವಿವಿವಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಸಂಪೂರ್ಣ ವಿಫಲಗೊಂಡಿವೆ ಎನ್ನುವುದಕ್ಕೆ ಮೇಳವು ಸಾಕ್ಷಿಯಾಗಿತ್ತು. ವಾರಾಂತ್ಯ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು, ಗೃಹಿಣಿಯರು, ಮಹಿಳೆಯರು, ಯುವಕ-ಯುವತಿಯರು, ಶಾಲಾ-ಕಾಲೇಜುಗಳ ಮಕ್ಕಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದು, ಇಡೀ ಕೃಷಿ ಮೇಳದಲ್ಲಿ ಅಲ್ಲಲ್ಲಿ ಮಾತ್ರ ರೈತರು ಆಗಮಿಸುತ್ತಿರುವುದನ್ನು ನೋಡಿದರೆ ರೈತರ ಜಾತ್ರೆಯಲ್ಲಿ ರೈತರೇ ಕಣ್ಮರೆಯಾಗಿದ್ದಾರೆ ಎನ್ನುವ ಪ್ರಶ್ನೆ ಹಾಕಿಕೊಳ್ಳುವಂತೆ ಮಾಡಿತು.ಮೇಳದ ಕೊನೆ ದಿನ ನಗರ ಸೇರಿದಂತೆ ಸುತ್ತಮುತ್ತಲಿನ ಶಾಲಾ-ಕಾಲೇಜುಗಳ ಸರ್ಕಾರಿ-ಖಾಸಗಿ ಶಾಲಾ ವಿದ್ಯಾರ್ಥಿಗಳ ಹಿಂಡು ತಂಡೋಪ ತಂಡವಾಗಿ ಬಂದು ಕೃಷಿ ಮೇಳದ ಸಂಭ್ರಮವನ್ನು ಹೆಚ್ಚಿಸು ವಂತೆ ಮಾಡಿದರು. ದೂರದ ಪ್ರದೇಶಗಳಿಂದ ಆಗಮಿಸಿದ್ದ ಮಕ್ಕಳಿಗೆ ಕುಡಿಯುವ ನೀರು, ಉಚಿತ ಊಟ, ನೆರಳು, ಶೌಚ ಹಾಗೂ ಇತರೆ ಸವಲತ್ತುಗಳನ್ನು ವಿವಿಯಿಂದ ಕಲ್ಪಿಸದ ಕಾರಣಕ್ಕೆ ಮಕ್ಕಳು ಪರದಾಡಿದಷ್ಟೇ ಅಲ್ಲದೇ ಮೇಳದಲ್ಲಿ ತಿರುಗಾಡಿ ಸುಸ್ತಾಗಿ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಅಲ್ಪ ಪ್ರಮಾಣದ ಊಟವನ್ನು ಸೇವಿಸಿ ತೃಪ್ತಿಪಟ್ಟರು.ಹಳಿ ತಪ್ಪಿತೇ ಕೃಷಿ ಮೇಳ? : ಕೃಷಿ ಹಾಗೂ ಕೃಷಿ ಸಂಬಂಧಿತ ಸಮಗ್ರ ಸಂಗತಿಗಳನ್ನು ಮುಂದಿಟ್ಟುಕೊಂಡು ಆಯೋಜಿಸಿದ್ದ ಕೃಷಿ ಮೇಳವು ಎಲ್ಲಿಯೋ ಹಳಿ ತಪ್ಪಿದಂತೆ ಗೋಚರವಾಯಿತು. ವ್ಯವಸಾಯಕ್ಕೆ ಸಂಬಂಧಿಸಿದ ವಿಷಯಗಳ ಜೊತೆಗೆ ಬಟ್ಟೆ-ಬರೆ, ಕುರುಚಲು ಹಿಂಡಿ-ತಿನಿಸು, ದಿನಸಿ ವಸ್ತು, ಮಕ್ಕಳ ಆಟಿಕೆ, ಆಭರಣ, ಪುಸ್ತಕ ಸೇರಿದಂತೆ ಜಾತ್ರೆಯಲ್ಲಿ ಸಿಗುವಂತಹ ಸಾಮಗ್ರಿಗಳ ವ್ಯಾಪಾರ-ವಹಿವಾಟಿಗೆ ಮಳಿಗೆಗಳನ್ನು ನೀಡಿದ್ದರಿಂದ ವಾಣಿಜ್ಯ ವ್ಯವಹಾರದ ನಡುವೆ ಕೃಷಿ ಕಣ್ಮರೆಯಾಗುವಂತೆ ಮಾಡಿದೆ ಎಂದು ಮೇಳದಲ್ಲಿ ಪಾಲ್ಗೊಂಡಿದ್ದ ರೈತರು ಆಕ್ರೋಶವನ್ನು ಹೊರಹಾಕಿದರು.ಮೂರು ದಿನಗಳ ಕಾಲ ನಡೆದ ಕೃಷಿ ಮೇಳದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಇದರಲ್ಲಿ ಬಹುತೇಕರು ಸ್ಥಳೀಯರು, ಯುವಕರು, ವಿದ್ಯಾರ್ಥಿಗಳಾಗಿದ್ದಾರೆ ಎನ್ನುವ ಸಂಗತಿ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇನ್ನು, ಮೂರು ದಿನಗಳ ಕೃಷಿ ಮೇಳಕ್ಕೆ ಎರಡು ಸಲ ಭೇಟಿ ನೀಡಿದ್ದು, ಇದರಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ವಿಚಾರಗಳಿಗಿಂತಲೂ ಅನ್ಯ ಸಂಗತಿಗಳಿಗೆ ಆದ್ಯತೆ ಜೊತೆಗೆ ಮಳಿಗೆಗಳನ್ನು ನೀಡಿದ್ದರಿಂದ ಮೂಲ ಉದ್ದೇಶಕ್ಕೆ ಹಿನ್ನಡೆ ಉಂಟಾದಂತಾಗಿದೆ ಎಂದು ತಳ್ಳಿಗೇರಿ ರೈತರಾದ ಶಂಭುಲಿಂಗ ಕೆ. ಹಾಗೂ ಬಸವರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.