ಸಾರಾಂಶ
ಕುಂದಗೋಳ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ರೈತರ ಅಸಮಾಧಾನ ಮತ್ತು ಆಕ್ರೋಶದ ಅಖಾಡವಾಯಿತು. ರೈತರ ಹೆಸರಿನಲ್ಲಿ ನಡೆಯುವ ಬ್ಯಾಂಕ್‌ನಲ್ಲಿ ರೈತರಿಗೆ ನಿರ್ಲಕ್ಷ್ಯ ಎಂದು ಸಭೆಯಲ್ಲೇ ಅನೇಕ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ರೈತರು “ನಮಗೆ ಸಭೆಯ ಕುರಿತು ನೋಟಿಸ್ ಬಂದಿಲ್ಲ, ಬ್ಯಾಂಕಿನ ಸವಲತ್ತುಗಳು ತಲುಪುತ್ತಿಲ್ಲ, ಸತ್ತವರ ಹೆಸರಿನ ಮೇಲೆಯೇ ನೋಟಿಸ್ ಕಳುಹಿಸಲಾಗಿದೆ. ರೈತರನ್ನು ಗೌರವಿಸುವುದಿಲ್ಲ. ಒಟ್ಟಾರೆ ರೈತರ ಹಿತದೃಷ್ಟಿ ಮರೆತು ಮನಬಂದಂತೆ ಆಡಳಿತ ನಡೆಸುತ್ತ, ತಮಗೆ ಬೇಕಾದವರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದ್ದಾರೆ” ಎಂದು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಗುರುಪಾದಪ್ಪ ಸಾದ್ವಿ ಮಾತನಾಡಿ, ನನ್ನ ತಂದೆ ಕಲ್ಲಪ್ಪ ಸಾದ್ವಿ 2023ರಲ್ಲಿ ತೀರಿಕೊಂಡಿದ್ದಾರೆ. ಅನೇಕ ಬಾರಿ ಹೇಳಿದ್ದರೂ ಇಂದಿಗೂ ಅವರ ಹೆಸರಿನ ಮೇಲೆಯೇ ನೋಟಿಸ್ ಬರುತ್ತಿದೆ. ಈಗಲೇ ಇದನ್ನು ಸರಿ ಪಡಿಸದಿದ್ದರೆ ಕಾನೂನಾತ್ಮಕ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಶಿವರುದ್ರಪ್ಪ ಕುಸುಗಲ್ ಮಾತನಾಡಿ, ನಾನು 40 ವರ್ಷಗಳಿಂದ ಸದಸ್ಯ. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಸಭೆಗೆ ಕರೆಯುವುದಿಲ್ಲ, ನೋಟಿಸ್ ಸಹ ಕಳಿಸಿಲ್ಲ. ಈ ಬ್ಯಾಂಕ್‌ನಿಂದ ನಿರಾಶನಾಗಿ ಸದಸ್ಯತ್ವವೇ ಕಿತ್ತುಕೊಳ್ಳಲು ನಿರ್ಧರಿಸಿದ್ದೇನೆ. ಸಾಲ ಕೇಳಿದರೆ ‘ಅಧ್ಯಕ್ಷರು ಇಲ್ಲ’ ಎಂದು ಹೇಳುತ್ತಾರೆ. ಇನ್ನು ಬೇರೆ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಬಡ್ಡಿಯಾದರೂ ಸಿಗುತ್ತದೆ ಎಂದರು.ಮಲ್ಲಿಕಾರ್ಜುನ ಗುರುವಿನಹಳ್ಳಿ ಗರಂ ಮಾತನಾಡಿ, 6500ಕ್ಕೂ ಹೆಚ್ಚು ಸದಸ್ಯರಿದ್ದರೂ ಮತದಾರರ ಪಟ್ಟಿಯಲ್ಲಿ ಅನೇಕರ ಹೆಸರೇ ಇಲ್ಲ. ಎರಡು ಸಭೆಗೆ ಬಾರದಿದ್ದರೆ ಸ್ವಯಂ ಸದಸ್ಯತ್ವ ಹಾಗೂ ಮತದಾನ ರದ್ದು ಆಗುತ್ತದೆ ಎಂಬ ನಿಯಮ ಅನ್ಯಾಯ. ನೋಟಿಸ್ ಎಲ್ಲರಿಗೂ ತಲುಪಬೇಕು, ಕೇವಲ ಕಾರ್ಯಕಾರಿಣಿ ಅಥವಾ ಮಂಡಳಿಗೆ ಮಾತ್ರವಲ್ಲ. ಕಡಪಟ್ಟಿ, ಅಲ್ಲಾಪೂರ ಗ್ರಾಮದ ಸದಸ್ಯರಿಗೆ 40 ಮಂದಿಗೂ ನೋಟಿಸ್ ಬಂದಿಲ್ಲ. ನಾನು ಪೋಷ್ಟ್‌ಮಾನ್‌ಗೂ ಫೋನ್ ಮಾಡಿ ಕೇಳಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಜುನಾಥ ಯಲಿಗಾರ ಮಾತನಾಡಿ, 40 ವರ್ಷಗಳಿಂದ ದುಡಿದು ಸದಸ್ಯರಾಗಿದ್ದರೂ ಇಂದು ನಮಗೆ ಬೆಲೆ ಇಲ್ಲದಂತಾಗಿದೆ. ತಮಗೆ ಬೇಕಾದವರಿಗೆ ಮಾತ್ರ ಅವಕಾಶ ಕೊಟ್ಟು ತಾರತಮ್ಯ ಮಾಡುತ್ತಿದ್ದಾರೆ. ಇಲ್ಲಿ ನಿಯತ್ತಿನ ರೈತರಿಗೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.ಇದೇ ರೀತಿ ರೈತ ಮುಖಂಡರಾದ ಮಾಣಿಕ್ಯ ಚಿಲ್ಲೂರ, ಕೆಲ ರೈತರ ಸದಸ್ಯತ್ವ ಸುಮ್ಮನೆ ರದ್ದು ಮಾಡಲಾಗಿದೆ. ಅವರ ಷೇರು ಹಣ ಎಲ್ಲಿ ಹೋಯಿತು? ಅವರಿಗೆ ಕರೆದು ಕೇಳದೇ ಹೇಗೆ ರದ್ದು ಮಾಡಬಹುದು? ಈ ಪ್ರಶ್ನೆಗೆ ಅಧ್ಯಕ್ಷೆ ಕಟಗಿ ಮತ್ತು ಬ್ಯಾಂಕ್ ಮ್ಯಾನೇಜರ್ ಉತ್ತರ ಕೊಡಲೇಬೇಕು. ಇಂತಹ ಘಟನೆಗಳಿಂದ ನೊಂದು ಬೇರೆ ದಾರಿ ಇಲ್ಲದೆ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಾರೆ. ಗುರುವಾರ ತರ್ಲಘಟ್ಟ ಗ್ರಾಮದ ರೈತ ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರು.
ರೈತರ ಹಕ್ಕುಗಳಿಗೆ ಅವಮಾನ ಮಾಡಿದ ಬ್ಯಾಂಕ್ ಆಡಳಿತ ತಕ್ಷಣ ಸ್ಪಷ್ಟನೆ ನೀಡದಿದ್ದರೆ ಮಹಾ ಆಂದೋಲನ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))