ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಗುಲ್ಬರ್ಗ ವಿದ್ಯುಚ್ಚಕ್ತಿ ಸರಬರಾಜು ಕಂಪನಿ (ಜೆಸ್ಕಾಂ) ತನ್ನ ವ್ಯಾಪ್ತಿಯ 7 ಜಿಲ್ಲೆಗಳ ರೈತರು, ಸಾರ್ವಜನಿಕರು, ಉದ್ದಿಮೆಗಳು, ಕೈಗಾರಿಕಾ ವಸಾಹತುಗಳಲ್ಲಿ ನೀಡುತ್ತಿರುವ ಸೇವೆ ಅತ್ಯಂತ ಕಳಪೆಯಾಗಿದೆ, ಗ್ರಾಹಕ ಸೇವೆಯೇ ಶೂನ್ಯ ಎಂಬಂತಿರುವ ಜೆಸ್ಕಾಂ ಕಂಪನಿ ತಮ್ಮ ಮುಂದೆ ಸಲ್ಲಿಸಿರುವ ವಿದ್ಯುದ್ದರ ಹೆಚ್ಚಳ ಪ್ರಸ್ತಾವನೆಗೆ ಯಾವ ಕಾರಣಕ್ಕೂ ಅನುಮತಿ ಕೊಡಬೇಡಿ.ಹೀಗೆಂದು ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ವಿಜಯನಗರ, ಕೊಪ್ಪಳ ಹಾಗೂ ಬಳ್ಳಾರಿಯ ಸಾರ್ವಜನಕರು, ರೈತರು, ವಾಣಿಜ್ಯೋದ್ಯಮ ಸಂಸ್ಥೆಗಳ ಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಮುಖಂಡರು, ಗೃಹಿಣಿಯರು ಕೆಇಆರ್‌ಸಿಗೆ ಗಮನ ಸೆಳೆದಿದ್ದಾರೆ.
2024-25ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕೋರಿ ಜೆಸ್ಕಾಂ ಸಲ್ಲಿಸಿರುವ ಪ್ರಸ್ತಾವನೆಯನ್ನಾಧರಿಸಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಮಂಗಳವಾರ ಕಲಬುರಗಿ ಡಿಸಿ ಕಚೇರಿಯಲ್ಲಿ ನಡೆದ ಅಹವಾಲು ಆಲಿಕೆಯ ಸಭೆಯಲ್ಲಿ ಪಾಲ್ಗೊಂಡ 25ಕ್ಕೂ ಅಧಿಕ ಗ್ರಾಹಕರು ಸೇವೆಯ ವಿಷಯವಾಗಿ ಪ್ರಸ್ತಾಪಿಸುತ್ತ ಜೆಸ್ಕಾಂ ಕಂಪನಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಲಿಂಗಸುಗೂರ ರೈತರೊಬ್ಬರು ಕಂಪನಿಯ ರೈತ ವಿರೋಧಿ ಧೋರಣೆಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ದುಡ್ಡು ಕೊಟ್ಟು ಆರ್‌ಆರ್ ನಂಬರ್ ಕೊಡಿ ಎಂದರೆ ದಂಡ ಅಂತ 10 ಸಾವಿರ ರು. ತಗೊಂಡಿದ್ದಾರೆಂದು ದೂರಿದರಲ್ಲದೆ ಕಂಬ, ವೈರಿಂಗ್‌ನಲ್ಲಿ ಹೆಚ್ಚಿಗೆ ಎಸ್ಟಿಮೇಟ್ ಸದ್ಧಪಡಿಸಿ ಜೆಸ್ಕಾಂ ಅಧಿಕಾರಿಗಳು, ಗುತ್ತಿಗೆದಾರರು ಕಂಪನಿಯನ್ನೇ ಸ್ವಾಹಾ ಮಾಡುತ್ತಿದ್ದಾರೆಂದು ತಮ್ಮದೇ ಹೊಲದಲ್ಲಿನ ಕಂಬ ಹಾಕುವ ಕಾಮಗಾರಿಯನ್ನೇ ಉದಾಹರಿಸಿ ದಾಖಲೆ ನೀಡಿದರು.
ರೈತರಿಗೆ 7 ಗಂಟೆ ತಡೆ ರಹಿತ ವಿದ್ಯುತ್ ಕೊಡೋದಾಗಿ ಹೇಳುವ ಇವರು ಇದೇ ಅವಧಿಯಲ್ಲಿ ಲೈನ್ ಕಟಿಂಗ್ ತಗೊಳ್ಳುತ್ತಾರೆ, ಅದ್ಹೇಗೆ ತಡೆ ರಹಿತ ಕರೆಂಟ್ ಕೊಟ್ಹಂಗೆ ಆಗ್ತದೆ? ಎಂದು ಜೆಸ್ಕಾಂ ಇಂಜಿನಿಯರ್‌ಗಳ ಬೆವರಿಳಿಸಿದರು.8 ವರ್ಷವಾದರೂ ಗಂಗಾ ಕಲ್ಯಾಣ ಬೋರ್‌ಗೆ ಕರೆಂಟ್ ಕೊಟ್ಟಿಲ್ರಿ: ಪಟ್ಟಣ- ಭೀಮಳ್ಳಿ ಸೀಮೆಯ ರೈತ ಸುಭಾಷ ಜಮಾದರ್ ಅವರಂತೂ ತಮ್ಮ ಹೊಲದಲ್ಲಿ ಕಷ್ಟಪಟ್ಟು ಗಂಗಾ ಕಲ್ಯಾಣ ಬೋರ್‌ವೆಲ್ ಕೊರೆಸಿದರೂ ಅದಕ್ಕೆ ಕರೆಂಟ್ ಸಂಪರ್ಕ ಇನ್ನೂ ಕೊಟ್ಟಿಲ್ಲ. ಈ ಮಾತಿಗೆ ಮತ್ತೆ 8 ವರ್ಷವಾಯ್ತೆಂದು ತಮ್ಮ ಸಂಕಷ್ಟ ತೋಡಿಕೊಂಡರು.
ಈಗಾಗಲೇ ಕಳ್ಳರು ವೈರ್, ಪಂಪ್, ಎಲ್ಲಾನು ಕಳವು ಮಾಡಿದ್ದಾರೆ. ಪುಣ್ಯಕ್ಕೆ ಬೋರ್‌ನಲ್ಲಿ ನೀರಿದೆ, ಈಗಲೂ ಕರೆಂಟ್ ಕೊಡಿ ಎಂದರೆ ಕ್ಯಾರೆ ಎನ್ನುತ್ತಿಲ್ಲವೆಂದು ಜೆಸ್ಕಾಂ ಧೋರಣೆಯನ್ನು ಖಂಡಿಸಿದಾಗ ಕೆಇಆರ್‌ಸಿ ಅಧ್ಯಕ್ಷ ರವಿಕುಮಾರ್ ಮಾತನಾಡುತ್ತ ರೈತನ ಗೋಳಿಗೆ ತಕ್ಷಣ ಪರಿಹಾರ ಬೇಕೆಂದರಲ್ಲದೆ 3 ವಾರದೊಳಗೆ ಸರಿಯಾಗಬೇಕಂದು ಕಂಪನಿ ಎಂಡಿಗೆ ತಾಕೀತು ಮಾಡಿದರು.ಇಂಡಸ್ಟ್ರಿಯಲ್ ಏರಿಯಾದಾಗೂ ಕರೆಂಟಿಲ್ರಿ: ಸಭೆಯಲ್ಲಿದ್ದ ರಾಯಚೂರು, ವಿಜಯನಗರ, ಹೊಸಪೇಟೆ, ಕಲಬುರಗಿ ವಾಣಿಜ್ಯೋಮ ಸಂಸ್ಥೆಯ ಪ್ರತಿನಿಧಿಗಳು, ಉದ್ದಿಮೆ ವಸಾಹತುಗಳ ಸಂಘಗಳವರು, ಸಣ್ಣ ಕೈಗಾರಿಕೆ ಸಂಘಚನೆಯವರು 350 ರಿಂದ 400 ಘಟಕಗಳಿರುವ ಪ್ರದೇಶದಲ್ಲೇ ಇವರ ಸೇವೆ ಸರಿಯಾಗಿಲ್ಲವೆಂದು ಗಳಾಡಿದರು.
ಸೆಕ್ಷನ್ ಆಫೀಸರ್ ಮದ್ಯ ವ್ಯಸನಿ, ಏನೂ ಗೊತ್ತಿರದವರು ಇದ್ದಾರೆ. ಇವರಿಂದ ಸೇವೆಯೇ ಸಿಗುತ್ತಿಲ್ಲವೆಂದು ಗೋಳಾಡುತ್ತ ಸೆಕ್ಷನ್ ಅಧಿಕಾರಿ ಕೊನೆಪಕ್ಷ ಕಲಿತವರು ಇರೋಹಾಗೆ ಮಾಡಿರೆಂದು ಕೆಇಆರ್‌ಸಿಗೇ ದುಂಬಾಲು ಬಿದ್ದರು. ರಾಜ್ಯದ ಯಾವ ವಿದ್ಯುಚ್ಚಕ್ತಿ ಕಂಪನಿಯಲ್ಲೂ ಇಲ್ಲದ ಸೆಕ್ಷನ್ ಆಫೀಸರ್ ಸಮಸ್ಯೆ ಇಲ್ಲಿದೆ, ಸೆಕ್ಷನ್ ಅಧಿಕಾರಿಗಳನ್ನಾಗಿ ಲೈನ್‌ಮನ್, ಅಕೌಂಟ್ಸ್‌ನವರಿಗೆ ಬಡ್ತಿ ಕೊಡೋದು ಇಲ್ಲೇ ಮಾತ್ರ ಎಂದು ಹೇಳುತ್ತ ಈ ಸಮಸ್ಯೆ ಸರಿಪಡಿಸುವಂತೆ ಎಂಡಿಗೆ ಕೆಇಆರ್‌ಸಿ ಸೂಚನೆ ನೀಡಿತು.ಕೆಕೆಸಿಸಿಐ ಪ್ರತಿನಿಧಿ ಶಶಿಕಾಂತ ಪಾಟೀಲ್, ಚೆನ್ನವೀರಯ್ಯ ನಂದಿಕೋಲ್ಮಠ ಮಾತನಾಡುತ್ತ ಸೆಕ್ಷನ್ ಆಫೀಸರ್ ಅನತ್ರಕ್ಷರಸ್ಥರಾದರೆ ಗತಿ ಏನು? ಲೈನ್‌ಮನ್‌ಗಳಿಗೆ ಈ ಜವಾಬ್ದಾರಿ ಕೊಡೋದಾದಲ್ಲಿ ಅವರು ಆ ಕೆಲಸ ಮಾಡುವಂತಹವರಾಗಿರಬೇಕು, ಅಂತಹವರಿಗೆ ಕೊಡಿರೆಂದರು.
ಸಾಮಾಜಿಕ ಕಾರ್ಯಕರ್ತ ದೀಪಕ ಗಾಲಾ, ಸುಭಾಶಚಂದ್ರ ಬೆನಕನಹಳ್ಳಿ, ಹಿಟ್ಟಿನ ಗಿರಣಿ ಮಾಲೀಕರ ಸಂಘದ ಪರವಾಗಿ ಮಲ್ಲಿಕಾರ್ಜುನ ರೆಡ್ಡಿ, ಲಲಿತಾ ರೆಡ್ಡಿ, ಅಶ್ವಿನ್ ಕೋತಂಬ್ರಿ, ಲಕ್ಷ್ಮೀರೆಡ್ಡಿ, ಬಸವರಾಜ, ಸೇಡಂ ಉಮಾಪತಿಯವರು ಮಾತನಾಡುತ್ತ ಜೆಸ್ಕಾಂ ಕಚೇರಿಗಳಿಗೆ ಹೋದಲ್ಲಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸೋದಿಲ್ಲವೆಂದು ದೂರಿದರಲ್ಲದೆ ಇವರಿಗೂ ಸಮವಸ್ತ್ರ ಇದ್ರೆ ಯಾರೆಂದು ಗೊತ್ತಾಗುತ್ತದೆ, ಲೈನಮನ್‌ಗೆ ಮಾತ್ರ ಡ್ರೆಸ್‌ಕೋಡ್ ಯಾಕೆ, ಇತರರಿಗೂ ಡ್ರೆಸ್ ಕೊಡ ಕೋಡಿರೆಂದು ಕೋರಿದರು. ಜೆಸ್ಕಾಂ ಎಂಡಿಯವರು, ಇಂಜಿನಿಯರ್‌ಗಳು ಮಾಸಿಕ ಅಥವಾ 2 ತಿಂಗಳಿಗೊಮ್ಮೆ ಜಿಲ್ಲಾ ಹಂತದಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಅರಿತು ಪರಿಹಾರಕ್ಕೆ ಮುಂದಾಗಲಿ ಎಂದೂ ಸಲಹೆ ನೀಡಿದರು.ಬರಗಾಲದಾಗ ದರ ಹೆಚ್ಚಳ ಬ್ಯಾಡ್ರಿ ಎಂದ ಜಂಬಣ್ಣ: ರಾಯಚೂರಿನ ರೈಸ್‌ಮಿಲ್ ಸಂಘಟನೆಯ ಜಂಬಣ್ಣ ಮಾತನಾಡುತ್ತ ಬರಗಾಲದಾಗ ದರ ಹೆಚ್ಚಳ ಅನ್ಯಾಯದ್ದು, ಮಾಡಲೇಬೇಡಿರೆಂದರು. ಮೊದಲೇ ಬಾರತ ಅಕ್ಕಿ ಬಂದು ನಮ್ಮ ಮಿಲ್ ಬಂದ್ ಆಗ್ಯಾವ, ಕರೆಂಟ್ ಬೆಲೆ ಹೆಚ್ಚಾದ್ರೆ ಮುಂದಿನ ಫಜೀತಿ ಹೇಳಲಾಗದು ಎಂದು ಕೆಇಆರ್‌ಸಿ ಗಮನ ಸೆಳೆದರು. ಅದ್ಬುಲ್ ಖದೀರ್ ಕಲಬುರಗಿಯವರು ಜೆಸ್ಕಾಂನಲ್ಲಿ ಹೊಸ ಸಂಪರ್ಕಕ್ಕೆ ಲಂಚದ ಹಾವಳಿ ಸಾಗಿದೆ. ನೇರ ಅರ್ಜಿ ಪುರಸ್ಕರಿಸಿದ್ರೆ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಕಮೀಷನ್ ದಂಧೆ ನಡೆಸುತ್ತಿದ್ದಾರೆಂದು ಸಭೆಯ ಗಮನ ಸೆಳೆದರು. ಆಯೋಗದ ಸದಸ್ಯ ಎಂಡಿ ರವಿ, ಜೆಸ್ಕಾಂ ವ್ಯಾಪ್ತಿಯ ಅಧಿಕಾರಿಗಳು, ಸಂಘಟನೆಗಳವರು ಇದ್ದರು.
ಐಡಿಸಿ ಮೊತ್ತ ರೂಪದ್ಎಲ್ಲಿ ಗ್ರಾಹಕರ ಸುಲಿಗೆ ಮಾಡುತ್ತಿರೋ ಜೆಸ್ಕಾಂ: ಸಭೆಯಲ್ಲಿ ಬಹುತೇಕರು ಇನ್‌ಫ್ರಾಸ್ಟಕ್ಚರ್ ಡೆವಲಪ್ಮೆಂಟ್ ಚಾರ್ಜ್ ಐಡಿಸಿ ಹೆಸರಲ್ಲಿ ಜೆಸ್ಕಾಂ ಗ್ರಾಹಕರನ್ನೆಲ್ಲ ಕಿರಿಕಿರಿ ಮಾಡುತ್ತಿದೆ. ಇದು ನಿಲ್ಲೇಕು, ಐಡಿಸಿ ಹೆಸರಲ್ಲಿ ಕಂಪನಿ ಗ್ರಾಹಕರಿಗೇ ಸುಲಿಗೆ ಮಾಡುತ್ತಿದೆ ಎಂದು ಅನೇಕರು ಮಾಡಿದ ಗಂಭೀರ ಆರೋಪ ಕೆಇಆರ್‌ಸಿ ಅಧ್ಯಕ್ಷರು ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿಗೂ ಕಾರಣವಾಯ್ತು. ಅಧ್ಯಕ್ಷ ರವಿಕುಮಾರ್ ಮಾತನಾಡಿ, ಎಲ್ಲೂ ಇಲ್ಲದ ಐಡಿಸಿ ಕಿರಿಕ್ ಇಲ್ಯಾಕೆ? ತಾವೇ ಖುದ್ದು ಕಚೇರಿಗೆ ಹೋಗಿ ಪರಿಶೀಲನೆ ಸರಿಪಡಿಸೋದಾಗಿಯೂ ಗ್ರಾಹಕರಿಗೆ ಭರವಸೆ ನೀಡಿದರು.ಜೆಸ್ಕಾಂನಿಂದ ಯೂನಿಟ್‌ಗೆ 163 ಪೈಸೆ ಹೆಚ್ಚಳ ಪ್ರಸ್ತಾವನೆ ಸಲ್ಲಿಕೆ: ಸಭೆಯಲ್ಲಿ ಮಾತನಾಡಿದ ಜೆಸ್ಕಾಂ ಎಂಡಿ 8,079 ಕೋಟಿ ರು. ಆದಾಯವಿದ್ದರೆ ಕಂಪನಿಯ ವೆಚ್ಚದ ಬಾಬ್ತು 9,287 ಕೋಟಿ ರು. ದಾಟಿದೆ. 1,207 ಕೋಟಿ ರು. ಕೊರತೆ ಭರಿಸೋದೇ ಕಷ್ಟವಾಗುತ್ತಿದೆ. 2023ರಲ್ಲೂ ಕೊರತೆಯ ಪ್ರಮಾಣ 385 ಕೋಟಿ ರು. ಆಗಿತ್ತು. ಪ್ರಸಕ್ತ ಸಾಲಿಗೆ ಕೊರತೆಯ ಒಟ್ಟು ಪ್ರಮಾಣ 1,593 ಕೋಟಿ ರು. ಆಗಿದೆ. ಅದಕ್ಕಾಗಿ ಪ್ರತಿ ಯೂನಿಟ್‌ಗೆ ಎನರ್ಜಿ ಚಾರ್ಜ್, ಫಿಕ್ಸೆಡ್ ಚಾರ್ಜ್ 163 ಪೈಸೆ ಹೆಚ್ಚಿಸುವಂತೆ ಕೆಇಆರ್‌ಸಿಗೆ ಕೋರಿದರು.