ಕೊಪ್ಪಳ: ನಗರದಲ್ಲಿ ಮಂಗಳವಾರ ನಡೆದ ೪೬ನೇ ರೈತ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ಬಲ್ಡೋಟಾದ ವಶದಲ್ಲಿರುವ ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದು, ಹಿಂಸಾಚಾರಕ್ಕೆ ತಿರುಗಿದ್ದು, ರೈತರು ಬಲ್ದೋಟಾ ಕಾರ್ಖಾನೆಯ ತಡೆಗೋಡೆ ಒಡೆದು ಕಬ್ಬಿಣದ ಬೃಹತ್ ಗೇಟ್ ಸಹ ಮುರಿದು ಕಾರ್ಖಾನೆ ಒಳ ಪ್ರವೇಶಿದರು. ರೈತನೊಬ್ಬ ನಮಗೆ ಕೆರೆ ಬೇಕೆ ಬೇಕು ಎಂದು ಕೆರೆಗೆ ಹಾರಿದ ಪ್ರಸಂಗ ಜರುಗಿತು.

ರೈತ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಲ್ಡೋಟಾ ಕಾರ್ಖಾನೆ ಮುಂದೆ ರಾಜ್ಯ ರೈತ ಸಂಘ, ಪರಿಸರ ಹಿತರಕ್ಷಣಾ ವೇದಿಕೆ, ಜಂಟಿ ಕ್ರಿಯಾ ವೇದಿಕೆ ಸಹಯೋಗದಲ್ಲಿ ಕೊಪ್ಪಳದಲ್ಲಿ ಬಲ್ಡೋಟಾ ತೊಲಗಿಸಿ ಎಂದು ತಾಲೂಕಿನ ಬಸಾಪುರ ಬಳಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಪ್ರಗತಿಪರ ರೈತ ಮುಖಂಡರು ಸಹ ಭಾಗಿಯಾಗಿದ್ದರು.

ಬಲ್ಡೋಟಾ ಕಾರ್ಖಾನೆಯ ವಶದಲ್ಲಿದ್ದ ೪೪ ಎಕರೆ ಪ್ರದೇಶದ ಬಸಾಪುರ ಬಳಿಯನ್ನು ಸಾರ್ವಜನಿಕರಿಗೆ ಮುಕ್ತಿಗೊಳಿಸುವಂತೆ ಒತ್ತಾಯಿಸಿ ಸಾವಿರಾರು ರೈತ ರು ಕಾರ್ಖಾನೆಯ ಸಿಮೆಂಟ್‌ ಕಂಪೌಂಡ್ ದ್ವಂಸ ಮಾಡಿ, ಕಾರ್ಖಾನೆ ಗೇಟ್ ಮುರಿದು ಕೆರೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಇವರನ್ನು ನಿಯಂತ್ರಿಸಲು ಹಾಗೂ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇದಕ್ಕೂ ಮುನ್ನ ರೈತ ಸಂಘಟನೆಗಳು ಐದು ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ-೬೭ ತಡೆದು ತಮ್ಮ ಆಕ್ರೋಶದ ಕಹಳೆ ಮೊಳಗಿಸಿ ಕಾರ್ಖಾನೆ ವಿರುದ್ದ ಗುಡುಗಿದರು.

ಬಸಾಪುರ ಕೆರೆ ಮುಕ್ತಗೊಳಿಸಿ: ಬಸಾಪುರ ಕೆರೆ ನಮ್ಮ ಹಕ್ಕು, ಅದು ಸಾರ್ವಜನಿಕ ಕೆರೆ, ಬಲ್ಡೋಟಾ ಕಾರ್ಖಾನೆ ವಶದಲ್ಲಿಟ್ಟುಕೊಂಡಿದೆ. ಕೆರೆ ನೀರು ಬಳಕೆಗೆ ರೈತರಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಕೆರೆ ಸಾರ್ವಜನಿಕ ಮುಕ್ತಿಗೊಳಿಸಿ ಎಂದು ಪೊಲೀಸ್ ಭದ್ರತೆಯ ನಡುವೆಯೂ ಏಕಕಾಲಕ್ಕೆ ಸಾವಿರಾರು ರೈತರು, ರೈ ಮಹಿಳೆಯರು ಕಾಂಪೌಂಡ್‌ ಹಾಗೂ ಗೇಟ್‌ ಮುರಿದು ನುಗ್ಗಿದರು. ಕಾರ್ಖಾನೆ ಒಳಗೆ ಇದ್ದ ಕೆರೆಯತ್ತ ಧಾವಿಸಿದ ಸಾವಿರಾರು ರೈತರು ಜೈಕಾರದ ಘೋಷಣೆ ಕೂಗಿ ಸಂಭ್ರಮಿಸಿ ಅಲ್ಲಿಯೇ ಕುಣಿದು ಕುಪ್ಪಳಿಸಿದರು.


ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಚಾಮರಸ ಪಾಟೀಲ್, ಲಕ್ಷ್ಮಣ ಹೂಗಾರ, ರವಿಕೃಷ್ಣಾರಡ್ಡಿ, ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಹಲವು ರಾಜ್ಯ ನಾಯಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೆರೆಗೆ ಹಾರಿದ ರೈತ: ಬಲ್ಡೋಟಾ ವಶಪಡಿಸಿಕೊಂಡಿರುವ ಕೆರೆ ರೈತರ ಕೆರೆ. ಅದನ್ನು ರೈತರ ಬಳಕೆಗೆ ನೀಡಬೇಕು ಎಂದು ಕೆರೆಗೆ ರೈತ ಯಮನೂರಪ್ಪ ಎಂಬಾತ ಹಾರಿದರು. ಸ್ಥಳೀಯ ರೈತರು ಆತನನ್ನು ರಕ್ಷಿಸಿದರು. ನಂತರ ಮಾತನಾಡಿದ ಯಮನೂಪ್ಪ, ಗಿಣಿಗೇರೆಯ ಕೆರೆ ನೀರು ಕುಡಿಯಬೇಕು ಎಂಬ ಆಸೆ. ಆ ಕೆರೆ ನೀರು ಕುಡಿದು ಬೆಳೆದಿದ್ದೇವೆ. ಜಾನುವಾರುಗಳಿಗೆ ಸಹ ಕೆರೆ ನೀರನ್ನು ಕುಡಿಸುತ್ತಾ ಬಂದಿದ್ದೇವೆ. ಕೆರೆ ನೀರು ನಮಗೆ ಅಮೃತ. ಆದರೆ ಕಾರ್ಖಾನೆ ಅವರಿಂದ ಕೆರೆಗೆ ಹೋಗಲು ಅವಕಾಶ ಇಲ್ಲ. ಹಾಗಾಗಿ ಕೆರೆಗೆ ಹಾರಿದ್ದೇನೆ. ಸತ್ತರೆ ಸಾಯ್ತಿದ್ದೆ. ಆದರೆ ನಮ್ಮ ರೈತರಿಗೆ, ರೈತರ ಜಾನುವಾರುಗಳಿಗೆ ಕೆರೆ ಬೇಕೆ ಬೇಕು ಎಂದರು.

ಇನ್ನೂ ಕೆಲವು ರೈತರು ನಮಗೆ ಕೆರೆ ಬೇಕು ಎಂದು ಕೆರೆಗೆ ಹಾರಲು ಯತ್ನಿಸಿದರು. ಪೊಲೀಸರು ಅವರನ್ನು ತಡೆಯಲು ಮುಂದಾದರು. ಪೊಲೀಸರು ತಡೆದರೂ ಸಹ ಅವರಿಂದ ಕೊಸರಿಕೊಂಡು ಕೆರೆಗೆ ಹಾರಲು ಯತ್ನಿಸಿದರು.

ಒಳ ನುಗ್ಗಿ ಕುಣಿದ ರೈತರು: ಕಾರ್ಖಾನೆಯ ಗೋಡೆ ಒಡೆದು ಒಳಗೆ ನುಗ್ಗಿದ ಖುಷಿಯಲ್ಲಿ ರೈತರು ಕುಣಿದು ಕುಪ್ಪಳಿಸಿದರು. ಬಲ್ದೋಟಾ ತೊಲಗಿಸಲೇ ಬೇಕು. ಈ ಕಾರ್ಖಾನೆ ನಮಗೆ ಬೇಡ. ನಮ್ಮ ಕೆರೆ ನಮಗೆ ನೀಡಿ ಎಂದು ಗೋಡೆ ಒಡೆದು ಗೇಟ್ ಮುರಿದು ಒಳ ನುಗ್ಗಿದ ರೈತರು ಹರ್ಷದಿಂದ ಕುಣಿದರು.