ಸಾರಾಂಶ
ಗದಗ: ಜಿಲ್ಲೆಯು ಪವನ ಹಾಗೂ ಸೌರ ವಿದ್ಯುತ್ ಉತ್ಪಾದನೆಯ ಹಬ್ ಆಗಿದ್ದು. ಇದಕ್ಕಾಗಿ ಬಳಕೆಯಾಗುವ ರೈತರ ಜಮೀನುಗಳಿಗೆ ಶೇ. 10 ರಷ್ಟು ಪಾಲುದಾರಿಕೆ ನೀಡಬೇಕು ಎಂದು ಕಾನೂನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಗ್ರಹಿಸಿದರು.
ಬುಧವಾರ ಜಿಪಂ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಆಗ್ರಹಿಸಿದರು.ಗದಗ ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಅವಕಾಶ ಇದೆ. ಇದರ ಲಾಭ ಇಲ್ಲಿನ ರೈತರಿಗೆ ಸಿಗುವಂತಾಗಬೇಕು. ಈ ಯೋಜನೆಗಳಿಗೆ ಜಮೀನು ನೀಡುವ ರೈತರಿಗೆ ಯೋಜನೆಯಲ್ಲಿ ಕನಿಷ್ಠ ಶೇ. 10 ರಷ್ಟು ಪಾಲುದಾರಿಕೆ ನೀಡಬೇಕು. ವಿದ್ಯುತ್ ಉತ್ಪಾದಿಸುವ ಉತ್ತರ ಕನ್ನಡ ಜಿಲ್ಲೆಗೆ ಈ ಹಿಂದೆ ಕೆಲ ರಿಯಾಯಿತಿ ನೀಡಲಾಗುತ್ತಿತ್ತು. ಅದೇ ರೀತಿ ಗದಗ ಜಿಲ್ಲೆಗೂ ರಿಯಾಯಿತಿ ಸಿಗಬೇಕು.
ಗದಗ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯಿಂದ ಕೆಲವೆಡೆ ವಿದ್ಯುತ್ ಕಂಬ, ತಂತಿಗಳು ವಾಲಿವೆ. ಅವುಗಳನ್ನು ಸರಿಪಡಿಸಬೇಕು. ಪರೀಕ್ಷಾ ಸಂದರ್ಭದಲ್ಲಿ ರಾತ್ರಿ ಹೊತ್ತಿನಲ್ಲಿ ವಿದ್ಯುತ್ ನೀಡಬೇಕು ಎಂದು ನರಗುಂದ ಶಾಸಕ ಸಿ.ಸಿ ಪಾಟೀಲ ಹೇಳಿದರು. ರೋಣ ಶಾಸಕ ಜಿ.ಎಸ್ ಪಾಟೀಲ್, ರಾತ್ರಿ ಹೊತ್ತಿನಲ್ಲಿ ತೋಟದ ಮನೆಗಳಿಗೆ ಸಿಂಗಲ್ ಫೇಸ್ ನಿರಂತರ ವಿದ್ಯುತ್ ನೀಡಬೇಕು. 24 ಗಂಟೆಯೊಳಗೆ ರೈತರಿಗೆ ಟ್ರಾನ್ಸ್‌ಫಾರ್ಮರ್ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಫೀರ್ ಎಸ್. ಖಾದ್ರಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ ಪಾಂಡೆ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಎಸ್ಪಿ ರೋಹನ್ ಜಗದೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ಸೇರಿದಂತೆ ಹೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಇದ್ದರು. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ಸ್ವಾಗತಿಸಿ ಸಭೆ ನಿರ್ವಹಿಸಿದರು.
ಹೆಸ್ಕಾಂ ವ್ಯಾಪ್ತಿಯಲ್ಲಿ ಟ್ರಾನ್ಸಫಾರ್ಮರ್ ದುರಸ್ತಿಯ ವೇಳೆಯಲ್ಲಿ ಹಳೆಯ ಆಯಿಲ್ ಹಾಕುತ್ತಿದ್ದಾರೆ. ಇದರಿಂದ ಪದೇ ಪದೇ ಟಿಸಿಗಳು ಸುಟ್ಟು ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಟಿಸಿ ರಿಪೇರಿ ಎನ್ನುವುದು ದೊಡ್ಡ ಮಾಫಿಯಾವಾಗಿ ಬೆಳೆದಿದೆ. ಈ ಕುರಿತು ಒಂದು ವಿಶೇಷ ವಿಜೆಲೆನ್ಸ್ ಕಮೀಟಿ ಮಾಡಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.