ರಾಮನಗರ: ಒಂದು ಕಾಲದಲ್ಲಿ ಕೃಷಿ ಎಂದರೆ ಕೇವಲ ಆಹಾರ ಉತ್ಪಾದನೆ ಎಂಬ ಕಲ್ಪನೆ ಇತ್ತು. ಆದರೆ ಇಂದಿನ ಕೃಷಿ ಕೇವಲ ಆಹಾರಕ್ಕೆ ಸೀಮಿತವಾಗಿಲ್ಲ. ಕೃಷಿಯಿಂದ ಇಂಧನ, ರಾಸಾಯನಿಕ ಉತ್ಪನ್ನಗಳು, ಬಟ್ಟೆಗಳು, ಔಷಧಿಗಳು ಹಾಗೂ ಅನೇಕ ಕೈಗಾರಿಕಾ ಉತ್ಪನ್ನಗಳು ತಯಾರಾಗುತ್ತಿವೆ. ರೈತರು ಕೃಷಿ ಮೂಲಕವೇ ದೇಶವನ್ನು ಮುನ್ನೆಡೆಸುವ ಅವಕಾಶವಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯನ್ ಹೇಳಿದರು.

ನಗರದಲ್ಲಿ ಬಿಜೆಪಿ ರೈತ ಮೋರ್ಚಾದ ಕಚೇರಿ ಉದ್ಘಾಟಿಸಿದ ಅವರು, ರೈತರು ಕೃಷಿಯ ಮೂಲಕ, ಇಂಧನ ಉತ್ಪಾದನೆಯ ಮೂಲಕ, ಆರ್ಥಿಕ ಶಕ್ತಿಯ ಮೂಲಕ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಮೂಲಕ ನಮ್ಮ ರಾಷ್ಟ್ರದ ಆರ್ಥಿಕ ಬಲವನ್ನು ವೃದ್ಧಿಸಬಹುದು ಹಾಗೂ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದರು.

ಇಂದು ಭಾರತವು ಕೇವಲ ಆಹಾರ ಉತ್ಪಾದನೆಯಲ್ಲಿ ಮಾತ್ರವಲ್ಲ, ಇಂಧನ ಉತ್ಪಾದನೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಎಥನಾಲ್ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಎಥನಾಲ್ ಅನ್ನು ಕಬ್ಬು, ಧಾನ್ಯಗಳು ಹಾಗೂ ಇತರೆ ಕೃಷಿ ಉತ್ಪನ್ನಗಳಿಂದ ತಯಾರಿಸಬಹುದು. ಭವಿಷ್ಯದಲ್ಲಿ ಕೃಷಿಕರು ಮತ್ತು ರೈತರು ದೇಶದ ಆರ್ಥಿಕ ನಾಯಕತ್ವವನ್ನು ವಹಿಸುವ ಶಕ್ತಿಯನ್ನು ಪಡೆಯಲಿದ್ದಾರೆ. ನಾವು ರೈತರು ದೇಶವನ್ನಷ್ಟೇ ಅಲ್ಲ, ಜಗತ್ತನ್ನೂ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದೇವೆ. ಕೃಷಿ ಕ್ಷೇತ್ರದ ಮಹತ್ವ ಇದೇ ಆಗಿದೆ ಎಂದು ತಿಳಿಸಿದರು.

ಜಗತ್ತಿನಾದ್ಯಂತ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಗಲ್ಫ್ ಯುದ್ಧದ ನಡುವೆಯೂ ಅಮೆರಿಕಾ, ಚೀನಾ, ಜಪಾನ್ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಭಾರತ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತಂತ್ರಜ್ಞಾನ, ಕೃಷಿ ಆಧಾರಿತ ಉದ್ಯಮ, ರಕ್ಷಣಾ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತ ಇಂದು ಜಾಗತಿಕ ನಾಯಕತ್ವದ ಸ್ಥಾನದಲ್ಲಿದೆ.

ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಭಾರತ ವಿಶ್ವದ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ಅಕ್ಕಿ, ಗೋಧಿ, ತರಕಾರಿಗಳು, ಹಾಲು, ಮೊಟ್ಟೆ, ಧಾನ್ಯಗಳು, ಸಿರಿಧಾನ್ಯಗಳು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.


ಭಾರತೀಯ ರೂಪಾಯಿ ವಿಶ್ವದ ಪ್ರಮುಖ ಕರೆನ್ಸಿಗಳ ಎದುರು ತನ್ನ ಸಾಮರ್ಥ್ಯವನ್ನು ತೋರಿಸುತ್ತಿದೆ. ಇದರ ಹಿಂದಿರುವ ಪ್ರಮುಖ ಶಕ್ತಿ ನಮ್ಮ ರೈತರ ಉತ್ಪಾದಕತೆ, ಬೆಳೆ ವೈವಿಧ್ಯೀಕರಣ ಮತ್ತು ನವೀನತೆ, ಹೀಗಾಗಿ ಉತ್ಪಾದಕತೆ, ವೈವಿಧ್ಯೀಕರಣ ಮತ್ತು ನವೀನತೆಗಳ ಮೂಲಕ ನಾವು ರಾಷ್ಟ್ರವನ್ನು ಮುನ್ನಡೆಸಬಹುದು. ನಾವು ರೈತರು ನಮ್ಮ ರಾಷ್ಟçದ ಹೆಮ್ಮೆಯ ನಾಯಕರು. ಮುಂದಿನ ದಿನಗಳಲ್ಲಿ ನಾವು ಜಗತ್ತಿನ ಹೆಮ್ಮೆಯ ನಾಯಕರಾಗುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ನೆರೆದಿದ್ದ ರೈತ ಮೋರ್ಚಾದ ಕಾರ್ಯಕರ್ತರಲ್ಲಿ ಜಯಸೂರ್ಯನ್ ಹುರುಪು ತುಂಬಿದರು.

ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಂ.ರುದ್ರೇಶ್, ಜಿಲ್ಲಾಧ್ಯಕ್ಷ ಜಗನ್ನಾಥ್, ಬಿಜೆಪಿ ಮುಖಂಡರಾದ ದೇವರಾಜ್, ಎಸ್.ಅರ್.ನಾಗರಾಜ್, ವರದರಾಜಗೌಡ ಮತ್ತಿತರರು ಉಪಸ್ಥಿತರಿದ್ದರು.

18ಕೆಆರ್ ಎಂಎನ್ 5,6.ಜೆಪಿಜಿ

5.ರಾಮನಗರದಲ್ಲಿ ಬಿಜೆಪಿ ರೈತ ಮೋರ್ಚಾದ ಕಚೇರಿಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯನ್ ಉದ್ಘಾಟಿಸಿದರು.

6.ರಾಮನಗರದಲ್ಲಿ ಬಿಜೆಪಿ ರೈತ ಮೋರ್ಚಾದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಯುವ ಮುಖಂಡ ವರದರಾಜುಗೌಡ ಅವರನ್ನು ರೈತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯನ್ ಅಭಿನಂದಿಸಿದರು.