ಖಾಸಗಿ ಕಂಪನಿ ಅಧಿಕಾರಿಯನ್ನು ಮಧ್ಯರಾತ್ರಿ ವರೆಗೆ ಕೂಡಿಹಾಕಿದ ರೈತರು

| Published : Nov 07 2025, 02:45 AM IST

ಖಾಸಗಿ ಕಂಪನಿ ಅಧಿಕಾರಿಯನ್ನು ಮಧ್ಯರಾತ್ರಿ ವರೆಗೆ ಕೂಡಿಹಾಕಿದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಮಿನಾಶಕ ಸಿಂಪಡಣೆಯಿಂದ ಹಾಳಾದ ಮೆಣಸಿನಕಾಯಿ ಬೆಳೆಗೆ ಪರಿಹಾರ ನೀಡಲು ನಿರಾಕರಿಸಿದ ಕಂಪನಿ ಅಧಿಕಾರಿಯನ್ನು ರೈತರು ಮಂಗಳವಾರ ಮಧ್ಯರಾತ್ರಿ ತನಕ ಕೂಡಿ ಹಾಕಿದ ಪ್ರಸಂಗ ಕುರುಗೋಡಿನ ಮಾರುತಿ ಕ್ಯಾಂಪ್‌ನಲ್ಲಿ ನಡೆದಿದೆ.

ಕುರುಗೋಡು: ಕ್ರಿಮಿನಾಶಕ ಸಿಂಪಡಣೆಯಿಂದ ಹಾಳಾದ ಮೆಣಸಿನಕಾಯಿ ಬೆಳೆಗೆ ಪರಿಹಾರ ನೀಡಲು ನಿರಾಕರಿಸಿದ ಕಂಪನಿ ಅಧಿಕಾರಿಯನ್ನು ರೈತರು ಮಂಗಳವಾರ ಮಧ್ಯರಾತ್ರಿ ತನಕ ಕೂಡಿ ಹಾಕಿದ ಪ್ರಸಂಗ ಇಲ್ಲಿನ ಮಾರುತಿ ಕ್ಯಾಂಪ್‌ನಲ್ಲಿ ನಡೆದಿದೆ.

ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ರೈತ ಚಲವಾದಿ ಹನುಮಂತ ಮಾರುತಿ ಕ್ಯಾಂಪ್‌ನಲ್ಲಿರುವ ತನ್ನ 2 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಗೆ ಸಿಂಜೆಂಟಾ ಕಂಪನಿಯ ಸಿಮೋಡಿಸ್ ಎಂಬ ಕ್ರಿಮಿನಾಶಕ ಸಿಂಪಡಿಸಿದ್ದರು. ಇದರಿಂದ ಬೆಳೆ ನಾಶವಾಗಿ ರೈತನಿಗೆ ನಷ್ಟವಾಗಿದೆ. ರೈತರು ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸುವ ಜತೆಗೆ ಬಳ್ಳಾರಿಯ ಸಿಂಜೆಂಟಾ ಕಂಪನಿ ಕಚೇರಿಗೂ ಇತ್ತೀಚೆಗೆ ಮುತ್ತಿಗೆ ಹಾಕಿದ್ದರು. ಪರಿಹಾರ ನೀಡುವುದಾಗಿ ಹೇಳಿದ್ದ ಕಂಪನಿ ಅಧಿಕಾರಿ ಮಾರುತಿ ಕ್ಯಾಂಪ್‌ಗೆ ಮಂಗಳವಾರ ಬಂದಿದ್ದರು. ಆದರೆ ಪರಿಹಾರ ನೀಡಲು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ರೈತ ಮುಖಂಡರು ಕೂಡಿ ಹಾಕಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸ್ ಠಾಣೆಯ ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ರೈತರ ಮನವೊಲಿಸುವ ಜತೆಗೆ ತಹಸೀಲ್ದಾರ್ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ರೈತನಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ರೈತರು ಅಧಿಕಾರಿಯನ್ನು ಬಿಟ್ಟು ಕಳುಹಿಸಿದ್ದರು.ನ್ಯಾಯ ದೊರಕಿಸಿ ಕೊಡಿ: ನಷ್ಟಕ್ಕೀಡಾದ ರೈತನಿಗೆ ಕಂಪನಿ ಪರಿಹಾರ ನೀಡಲೇಬೇಕು. ಈ ಹಿನ್ನೆಲೆ ನ. 10 ರಂದು ಸಭೆ ನಿಗದಿ ಮಾಡಲಾಗಿದ್ದು, ಎಲ್ಲ ಅಧಿಕಾರಿಗಳು ಹಾಜರಾಗಿ, ನೊಂದ ರೈತನಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯ ರೈತ ಸಂಘ-ಹಸಿರುಸೇನೆ ಅಧ್ಯಕ್ಷ ಮಾಧವ ರೆಡ್ಡಿ ಹೇಳಿದರು.

ಕಳೆದ ನಾಲ್ಕು ವರ್ಷದಿಂದ ಸಿಮೋಡಿಸ್ ಔಷಧ ಮೇಲೆ ದೂರಿಲ್ಲ. ಪಕ್ಕದ ಜಮೀನಿಗೆ ಅದೇ ಔಷಧ ಸಿಂಪಡಿಸಿ ಎಲ್ಲರಿಗೂ ತೋರಿಸಲಾಗಿದೆ. ಹಾಳಾಗಿರುವ ಬೆಳೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದರೆ ನಿಖರ ಕಾರಣ ತಿಳಿಯುತ್ತದೆ. ಒಂದು ವೇಳೆ ಸಿಮೋಡಿಸ್ ಪರಿಣಾಮದಿಂದ ಹಾಳಾಗಿದ್ದರೆ ಪರಿಹಾರ ನೀಡಲಾಗುವುದು ಎಂದು ಸಿಂಜೆಂಟಾ ಕಂಪನಿ ಅಧಿಕಾರಿ ರಾಜಕುಮಾರ್ ಹೇಳಿದರು.