ದಾರಿಗಾಗಿ ನಡೆದ ರೈತನ ಅಹೋರಾತ್ರಿ ಧರಣಿ ಅಂತ್ಯ

| Published : May 29 2024, 12:56 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ತಾಲೂಕಿನ ಗೊಟಗುಣಕಿ ಗ್ರಾಮದ ರೈತ ಸಾಹೇಬಗೌಡ ಬಿರಾದಾರ ಅವರು ಜಮೀನಿಗೆ ತೆರಳಲು ದಾರಿಗಾಗಿ ಆಗ್ರಹಿಸಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಎದುರುದಾರ ರೈತರು ನ್ಯಾಯಾಲಯದ ಆದೇಶ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕಿನ ಗೊಟಗುಣಕಿ ಗ್ರಾಮದ ರೈತ ಸಾಹೇಬಗೌಡ ಬಿರಾದಾರ ಅವರು ಜಮೀನಿಗೆ ತೆರಳಲು ದಾರಿಗಾಗಿ ಆಗ್ರಹಿಸಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಎದುರುದಾರ ರೈತರು ನ್ಯಾಯಾಲಯದ ಆದೇಶ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ.

ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಲು ದಾರಿ ಕೊಡದೆ ತಕರಾರು ಮಾಡುತ್ತಿರುವ ರೈತರಿಗೆ ತಿಳಿ ಹೇಳಿದ ಕಾರಣ ಮುಂದಿನ ಆದೇಶ ನ್ಯಾಯಾಲಯ ಯಾವ ರೀತಿ ಹೇಳುತ್ತದೆಯೋ ಎರಡು ರೈತರು ನಡೆದುಕೊಳ್ಳುತ್ತೇವೆ. ಅಲ್ಲಿಯವರೆಗೆ, ಹೊಲಕ್ಕೆ ಹೋಗಲು ದಾರಿ ತಕರಾರು ಮಾಡುವುದಿಲ್ಲ ಎಂದು ಎದುರುದಾರ ರೈತರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಡೆದಿದ್ದ ಆಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆಂದು ಧರಣಿ ನಿರತ ರೈತ ಸಾಹೇಬಗೌಡ ಬಿರಾದಾರ ತಿಳಿಸಿದರು.

ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ದಾರಿ ಪ್ರಕರಣ ನ್ಯಾಯಾಲಯದಲ್ಲಿದ್ದು, ಮುಂದಿನ ಆದೇಶದವರೆಗೆ ಮೇಲಿನ ರೈತರಿಗೆ ತಮ್ಮ ತಮ್ಮ ಜಮೀನಿಗೆ ಹೋಗಲು ಯಾವುದೇ ರೀತಿ ಅಡತಡೆ ಮಾಡಬಾರದು. ನಿರ್ಬಂಧ ಕಾಯ್ದೆ ಇದ್ದು, ಅದರಂತೆ ಎದುರುದಾರ ರೈತರು ಒಪ್ಪಿಕೊಳ್ಳಲೇಬೇಕು ಮತ್ತು ನ್ಯಾಯಾಲಯದ ಆದೇಶದಂತೆ ತಹಸೀಲ್ದಾರ್‌ರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ದುರುದಾರ ರೈತರು ಮಣ್ಣಿನ ದಿಬ್ಬ ಹಾಕಿ ದಾರಿ ಬಂದ್‌ ಮಾಡಿದ್ದಾರೆ. ಅದನ್ನು ಅದೇ ರೈತರೆ ತೆರವುಗೊಳಿಸಿ ಕೊಡಬೇಕು. ಒಂದು ವೇಳೆ ಒಪ್ಪಿಕೊಂಡಂತೆ ನಡೆದುಕೊಳ್ಳದಿದ್ದರೆ, ಈ ಬಾರಿ ನೇರವಾಗಿ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಹುಣಸಗಿ ತಾಲೂಕಾ ಅಧ್ಯಕ್ಷ ಪ್ರಭುಗೌಡ ಸೋತರಡ್ಡಿ, ಧರಣಿ ನಿರತ ರೈತ ಸಾಹೇಬಗೌಡ ಬಿರಾದಾರ, ಶ್ರೀನಿವಾಸ ಗೊಟಗುಣಕಿ, ಬಾಲಪ್ಪಗೌಡ ಲಿಂಗದಳ್ಳಿ, ರಾಮು ನಾಯಕ, ಅನೀಲಕುಮಾರ ರಾಜಾಪೂರ, ಶಂಕ್ರಮ್ಮ ರಾಜಾಪೂರ, ಶೈಲಶ್ರೀ ಬಿರಾದಾರ ಮೊದಲಾದವರು ಇದ್ದರು.