ಭೂ ಪರಿಹಾರಕ್ಕಾಗಿ ರೈತರ ಉಪವಾಸ ಸತ್ಯಾಗ್ರಹ

| Published : Jul 07 2025, 11:48 PM IST

ಸಾರಾಂಶ

ತಾಲೂಕಿನ ಕೆರೆ ತುಂಬಿಸುವ ಯೋಜನೆ ಅಡಿ ಭೂಮಿ ಕಳೆದುಕೊಂಡಿರುವ ರೈತರಿಗೆ ಭೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹೊಳಲು ಗ್ರಾಮದ ಸಿಂಹಾಸನ ಕಟ್ಟೆಯ ಮುಂದೆ ರೈತರು ಸೋಮವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಕೆರೆ ತುಂಬಿಸುವ ಯೋಜನೆ ಅಡಿ ಭೂಮಿ ಕಳೆದುಕೊಂಡಿರುವ ರೈತರಿಗೆ ಭೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹೊಳಲು ಗ್ರಾಮದ ಸಿಂಹಾಸನ ಕಟ್ಟೆಯ ಮುಂದೆ ರೈತರು ಸೋಮವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಈ ಸಂದರ್ಭ ಮಾತನಾಡಿದ ಹೋರಾಟಗಾರ ಕೋಡಬಾಳ ಚಂದ್ರಪ್ಪ, ಈ ಭಾಗದ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ರೈತರ ಜಮೀನುಗಳಿಗೆ ನೀರುಣಿಸುವ ಕಾರ್ಯ ನಡೆಯುತ್ತಿದೆ. ಆದರೆ ಕಾಲುವೆ ನಿರ್ಮಾಣ, 10 ಕೆರೆ ತುಂಬಿಸುವ ಯೋಜನೆ, ಮಾಲ್ವಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ, ಭೂಮಿ ಕಳೆದುಕೊಂಡ ರೈತರಿಗೆ 10 ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ, ಸರ್ಕಾರದ ಈ ವಿಳಂಬ ನೀತಿ ಖಂಡಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ ಎಂದರು.

ಯೋಜನೆಯ ವಿವಿಧ ಕಾಮಗಾರಿಗಳಿಗೆ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಿದೆ. ರೈತರಿಗೆ ಪರಿಹಾರ ಇನ್ನು ಸಿಕ್ಕಿಲ್ಲ, ಹಾವೇರಿ ಜಿಲ್ಲೆಯ ಶಾಕಾರ ಬಳಿ ನಿರ್ಮಿಸಿದ ಜಾಕ್‌ವಾಲ್‌ನಿಂದ ಹ್ಯಾರಡ ಗ್ರಾಮದ ಹಳೆ ಮಲಿಯಮ್ಮ, ಹೊಸ ಮಲಿಯಮ್ಮ ಮತ್ತು ದಾಸನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ, ಹೊಳಲು, ಬೂದನೂರು, ದಾಸನಹಳ್ಳಿ, ಪೋತಲಕಟ್ಟೆ ಮತ್ತು ಹ್ಯಾರಡ ಗ್ರಾಮಗಳ ರೈತರ 30 ಎಕರೆ 58 ಸೆಂಟ್ಸ್‌ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು 10 ವರ್ಷ ಕಳೆದಿದೆ. ಪರಿಹಾರಕ್ಕಾಗಿ ರೈತರು ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಅಧಿಕಾರಿಗಳು ಇಲ್ಲ ಸಲ್ಲದ ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಶಾಖಾ ಕಾಲುವೆ, ವಿತರಣಾ ಕಾಲುವೆಗಳ ನಿರ್ಮಾಣ, ಮಾಲ್ವಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗಳಿಗೆ, 646 ಎಕರೆ ರೈತರ ಜಮೀನು ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಈ ಕುರಿತು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ರಾಘವೇಂದ್ರ ಭೇಟಿ ನೀಡಿ, ಹೋರಾಟಗಾರರ ಮನವೊಲಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಕೆರೆ ತುಂಬಿಸುವ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ, ಪರಿಹಾರ ನೀಡುವ ವಿಚಾರದ ಕುರಿತು ದಾಖಲೆಗಳು ಪದೇ ಪದೇ ಅಸಿಂಧುಗೊಳ್ಳುತ್ತಿವೆ. ಈ ಕುರಿತು ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ರೈತರಿಗೆ 4 ತಿಂಗಳೊಳಗೆ ಪರಿಹಾರ ವಿತರಣೆ ಮಾಡಬೇಕೆಂದು ಹೋರಾಟಗಾರರು ಪಟ್ಟು ಹಿಡಿದರು. ಇದಕ್ಕೆ ಅಧಿಕಾರಿಗಳು ಮುಂದಿನ 1 ವರ್ಷದೊಳಗೆ ಪರಿಹಾರ ವಿತರಿಸುತ್ತೇವೆಂದು ಹೇಳಿದರು. ಇದಕ್ಕೆ ಒಪ್ಪದ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.

ಸತ್ಯಾಗ್ರಹದಲ್ಲಿ ಗೌಡ್ರ ಹೊನ್ನಪ್ಪ, ನಾರಮ್ಮನವರ ಈರಣ್ಣ, ಹುಳ್ಳಿ ಮಂಜಪ್ಪ, ಲಕ್ಷ್ಮಣ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಲೇಶ ಸೇರಿದಂತೆ ಇತರರಿದ್ದರು.