ಕೆಲವು ರೈತರು ಹೊಲಗಳ ಅಕ್ಕ-ಪಕ್ಕದ ತೋಟದ ಬೋರ್‌ವೆಲ್‌ಗಳ ಮೂಲಕ ನೀರು ಹಾಯಿಸುತ್ತಿದ್ದರೆ, ಇನ್ನು ಕೆಲವು ರೈತರು ಟ್ಯಾಂಕರ್ ಮೂಲಕ ನೀರು ತಂದು ಬೆಳೆಗಳಿಗೆ ನೀರುಣಿಸುವ ಮೂಲಕ ಬೆಳೆಗಳ ರಕ್ಷಣೆ ಮಾಡುತ್ತಿದ್ದಾರೆ.
ಮುಳಗುಂದ: ಗದಗ ತಾಲೂಕಿನಾದ್ಯಂತ ಮುಂಗಾರು ಮಳೆ ಕೊರತೆ ತೀವ್ರವಾಗಿದ್ದು, ಬೆಳೆದ ಬೆಳೆಗಳು ಒಣಗಿ ರೈತರ ಪರಿಸ್ಥಿತಿ ಹೇಳ ತೀರದಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಈಗಾಗಲೇ ಹೆಸರು, ಗೋವಿನಜೋಳ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ಹತ್ತಿ, ಮೆಣಸಿನಕಾಯಿ, ಶೇಂಗಾ ಬೆಳೆಗಳನ್ನು ಉಳಿಸಲು ಬೆಳೆಗಳಿಗೆ ನೀರುಣಿಸಲು ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ.ಕೆಲವು ರೈತರು ಹೊಲಗಳ ಅಕ್ಕ-ಪಕ್ಕದ ತೋಟದ ಬೋರ್‌ವೆಲ್‌ಗಳ ಮೂಲಕ ನೀರು ಹಾಯಿಸುತ್ತಿದ್ದರೆ, ಇನ್ನು ಕೆಲವು ರೈತರು ಟ್ಯಾಂಕರ್ ಮೂಲಕ ನೀರು ತಂದು ಬೆಳೆಗಳಿಗೆ ನೀರುಣಿಸುವ ಮೂಲಕ ಬೆಳೆಗಳ ರಕ್ಷಣೆ ಮಾಡುತ್ತಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಮುಂಗಾರು ಪ್ರಾರಂಭವಾದಾಗಿನಿಂದ ಎರಡ್ಮೂರು ತಿಂಗಳು ಗತಿಸಿದರೂ ತುಂತುರು ಮಳೆ ಬಿಟ್ಟರೆ ದೊಡ್ಡ ಪ್ರಮಾಣದ ಮಳೆಯಾಗದೇ ಇರುವುದರಿಂದ ರೈತರು ಹೆಸರು, ಶೇಂಗಾ, ಗೋವಿನಜೋಳ ಹಾಗೂ ಉದ್ದು ಬೆಳೆಗಳು ತೇವಾಂಶದ ಕೊರತೆಯಿಂದ ಸಂಪೂರ್ಣ ನಲುಗಿ ಹೋಗಿವೆ. ಬಿತ್ತಿದ ಯಾವ ಬೆಳೆಯೂ ರೈತರ ಕೈ ಹಿಡಿಯುತ್ತಿಲ್ಲ. ಇನ್ನೇನು ಬಾಡಿ ಸಾಯುವ ಸ್ಥಿತಿಯಲ್ಲಿರುವ ಶೇಂಗಾ, ಮೆಣಸಿನಕಾಯಿ, ಗೋವಿನಜೋಳ ಬೆಳೆಯನ್ನಾದರೂ ಅಲ್ಪ ಸ್ವಲ್ಪ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.ಟ್ಯಾಂಕರ್ ನೀರಿನ ಮೊರೆ: ಅಳಿದುಳಿದ ಮೆಣಸಿನಕಾಯಿ, ಹತ್ತಿ, ಶೇಂಗಾ ಬೆಳೆಗಳನ್ನು ರಕ್ಷಣೆ ಮಾಡಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಹತ್ತಿರದ ಬೋರ್‌ವೆಲ್‌ಗಳಿಂದ ನೀರು ಪಡೆದು ಇರುವ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ, ಆದರೆ ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಬದುಕಿಗೆ ಆಸರೆಯಾಗಬಹುದೆಂಬ ಭರವಸೆಯಿಂದ ರೈತರು ಟ್ಯಾಂಕರ್ ಬಾಡಿಗೆ ಪಡೆದು ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಇನ್ನೊಂದೆಡೆ ಮತ್ತೆ ಆಳು-ಕಾಳುಗಳಿಗೆ ಖರ್ಚು ಮಾಡಲಾಗದೆ ಮನೆಯವರೇ ನೀರು ಹಾಕಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಮೇವು ಅಭಾವ: ರೈತರ ಸಹಾಯಕ್ಕೆ ಇರುವ ದನ-ಕರುಗಳಿಗೆ ಮೇವಿನ ಅಭಾವ ಉಂಟಾಗಿದ್ದು, ಅವುಗಳ ಪಾಲನೆ-ಪೋಷಣೆ ರೈತರಿಗೆ ಭಾರವಾಗುತ್ತಿದೆ. ಆದರೆ ಕೆಲವು ರೈತರು ಮೇವು ಕೊರತೆಯಿಂದ ದನಕರುಗಳನ್ನೇ ಮಾರುವ ಹಂತಕ್ಕೆ ಬಂದಿದ್ದಾರೆ. ಮುಂದೆ ಅಗತ್ಯವಿದ್ದಾಗ ಎತ್ತು ಕೊಂಡುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ರೈತರ ಮುಂದಿದೆ.ಅಂತರ್ಜಲ ಕುಸಿತ: ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬೆಳೆಗಳಿಗೆ ನೀರು ಸಾಲುತ್ತಿಲ್ಲ. ನಿರಂತರವಾಗಿ ಸ್ಪ್ರಿಂಕ್ಲರ್ ಹಚ್ಚಿದರೆ ಎರಡ್ಮೂರು ಸ್ಪ್ರಿಂಕ್ಲರ್ ಮಾತ್ರ ಹೊಡೆಯುತ್ತಿವೆ. ಮಳೆ ಸಂಪೂರ್ಣವಾಗಿ ಕೈಕೊಟ್ಟರೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೂಡಲೇ ಸರ್ಕಾರ ಬರಗಾಲ ಘೋಷಿಸಿ, ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಕಳೆದ ವರ್ಷ ಅತಿಯಾದ ಮಳೆಯಿಂದ ಅತಿವೃಷ್ಟಿ ಸಂಭವಿಸಿತ್ತು. ಪ್ರಸ್ತುತ ವರ್ಷ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಮಳೆ ಬಾರದೇ ಇರುವುದರಿಂದ ಅನಾವೃಷ್ಟಿ ಸಂಭವಿಸುತ್ತಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಮಹ್ಮದಲಿ ಗಾಡಿ ತಿಳಿಸಿದರು.
ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆ ವಿಫಲವಾಗಿದ್ದರಿಂದ ಹೆಸರು, ಉದ್ದು, ಗೊವಿನ ಜೋಳ ಬೆಳೆಗಳು ಸಂಪೂರ್ಣ ಕೈಕೊಟ್ಟಿದೆ. ಇದರ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಮಳೆ ಆಗುವ ನಿರೀಕ್ಷೆ ಇರುವುದರಿಂದ ಮೆಣಸಿನಕಾಯಿ ಬೆಳೆ ಹಾಗೂ ಹತ್ತಿ ಬೆಳೆಗಳಿಗೆ ಅನುಕೂಲಕರವಾಗಲಿದೆ ಎಂದು ಗದಗ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವಣ್ಣವರ ತಿಳಿಸಿದರು.