ಬೆಳೆ ವಿಮೆಯಲ್ಲಿ ಪಾವತಿ ಮಾಡುವಲ್ಲಿ ರಾಜ್ಯ ಸರ್ಕಾರವು ಜಿಲ್ಲೆಯ ರೈತರನ್ನು ಕಡೆಗಣನೆ ಮಾಡಿದ್ದು, ಸರ್ಕಾರ, ತೋಟಗಾರಿಕಾ ಇಲಾಖೆ, ಜಿಲ್ಲಾಧಿಕಾರಿ ವಿಮಾ ಕಂಪಯ ಸಭೆ ಕರೆದು ಸಂಕಷ್ಟದಲ್ಲಿರುವ ರೈತರಿಗೆ ಸಮರ್ಪಕ ವಿಮಾ ಪರಿಹಾರ ನೀಡಬೇಕುಳ್‌ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.

ಸಮರ್ಪಕ ವಿಮಾ ಮೊತ್ತ ಪಾವತಿಸದಿದ್ದಲ್ಲಿ ಬೀದಿಗಿಳಿದು ಹೋರಾಟದ ಎಚ್ಚರಿಕೆ

ಪುತ್ತೂರು: ಬೆಳೆ ವಿಮೆಯಲ್ಲಿ ಪಾವತಿ ಮಾಡುವಲ್ಲಿ ರಾಜ್ಯ ಸರ್ಕಾರವು ಜಿಲ್ಲೆಯ ರೈತರನ್ನು ಕಡೆಗಣನೆ ಮಾಡಿದ್ದು, ಸರ್ಕಾರ, ತೋಟಗಾರಿಕಾ ಇಲಾಖೆ, ಜಿಲ್ಲಾಧಿಕಾರಿ ವಿಮಾ ಕಂಪಯ ಸಭೆ ಕರೆದು ಸಂಕಷ್ಟದಲ್ಲಿರುವ ರೈತರಿಗೆ ಸಮರ್ಪಕ ವಿಮಾ ಪರಿಹಾರ ನೀಡಬೇಕು. ವಾರದ ಒಳಗಾಗಿ ಈ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಹಾಗೂ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಾಕೃತಿಕ ವಿಕೋಪ, ಮಳೆ ಹಾನಿ, ಹವಾಮಾನ ವೈಪರಿತ್ಯ ಉಂಟಾದಾಗ ಬೆಳೆಗಾರರ ನೆರವಿಗೆ ನಿಲ್ಲುವಂತೆ ವಿಮೆ ಮಾಡಲಾಗಿದೆ. ಯೋಜನೆ ಕೇಂದ್ರ ಸರಕಾರ ಪ್ರಾಯೋಜಿತವಾದರೂ ಅದರ ಅನುಷ್ಠಾನದ ಜವಾಬ್ದಾರಿ ರಾಜ್ಯ ಸರಕಾರಕ್ಕಿದೆ. ಜಿಲ್ಲಾಧಿಕಾರಿ, ತೋಟಗಾರಿಕೆ ಇಲಾಖೆಯವರು ಶೀಟ್ ತಯಾರಿಸುತ್ತಾರೆ. ಆದರೆ ಈ ಬಾರಿ ಬೆಳೆಗಾರರಿಗೆ ಭಾರೀ ಅನ್ಯಾಯವೆಸಗಲಾಗಿದೆ. ಹಲವು ಮಂದಿಗೆ ವಿಮೆ ಕಂತಿನ ಹಣವೂ ವಿಮಾ ಪರಿಹಾರ ರೂಪದಲ್ಲಿ ಲಭಿಸಿಲ್ಲ. ವಿಮಾ ಕಂಪೆನಿ ಹಾಗೂ ಸರಕಾರ ಈ ವಂಚನೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು. ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆಯ ವಿಮಾ ಕಂತನ್ನು ಜು. ೨೦೨೪ಕ್ಕೆ ಅಂತಿಮಗೊಳಿಸಿ ಅಡಿಕೆ ಹಾಗೂ ಕಾಳು ಮೆಣಸು ರೈತರು ಪಾವತಿ ಮಾಡಿರುತ್ತಾರೆ. ಕೇಂದ್ರ ಸರ್ಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ಅಡಿಕೆ ಕಾಳುಮೆಣಸು ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಹವಾಮಾನ ವೈಪರಿತ್ಯದಿಂದ ನಷ್ಟ ಉಂಟಾದಲ್ಲಿ ನಿಯಮಾನುಸಾರ ಬೆಳೆ ನಷ್ಟ ಪರಿಹಾರವನ್ನು ಅವಕಾಶಗಳನ್ನು ಕಲ್ಪಿಸುತ್ತದೆ. ೨೦೧೬ ರಿಂದ ಆರಂಭವಾದ ಈ ಯೋಜನೆ ರೈತರಿಗೆ ಈವರೆಗೆ ವರದಾನವಾಗಿತ್ತು. ಆದರೆ ಈ ವರ್ಷ ಕುಂಭದ್ರೋಣ ಮಳೆ ಬಂದು ವಿಕೋಪ, ಅಡಿಕೆಗೆ ಮಾರಕವಾದ ಕೊಳೆರೋಗ, ಎಲೆ ಚುಕ್ಕೆ ರೋಗ, ಹಳದಿ ರೋಗಗಳಿಂದ ಪೂರ್ತಿ ಮರಗಳು ಸಾಯುವ ಹಂತಕ್ಕೆ ಬಂದಿದ್ದು,ಸರಕಾರ ನಿಗದಿಪಡಿಸಿದ ಮಾನದಂಡದಡಿಯಲ್ಲಿ ರೈತನಿಗೆ ಈ ಕೃಷಿ ಹಂಗಾಮಿನಲ್ಲಿ ವಿಮಾ ಪರಿಹಾರ ಮೊತ್ತ ಲಭಿಸಬೇಕಿತ್ತು. ಆದರೆ ಇವತ್ತು ರೈತ ಪಾವತಿಸಿದ ವಿಮಾ ಕಂತೂ ಕೂಡ ಅವನ ಕೈಗೆ ಬರಲಿಲ್ಲ ಎಂದು ಹೇಳಿದರು.

ರೈತರಿಗೆ ಆದ ಅನ್ಯಾಯವನ್ನು ಸರ್ಕಾರ ಮತ್ತು ವಿಮಾ ಕಂಪನಿ ಮರು ಪರಿಶೀಲಿಸಿ ಸೂಕ್ತಪರಿಹಾರಧನ ತಕ್ಷಣ ನೀಡಬೇಕು. ವಿಮಾ ಕಂಪನಿ ಜತೆ ಮಾತುಕತೆ ಮಾಡಬೇಕು. ಇಲ್ಲದೆ ಹೋದರೆ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಆಗಬಹುದು ಎಂದರು.ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ಮಚ್ಚಿಮಲೆ, ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ಕೃಷ್ಣ ಕುಮಾರ್ ರೈ, ರಾಜೇಶ್ ಬನ್ನೂರು ಇದ್ದರು.-