ನಾಲೆಗೆ ನೀರು ಹರಿಸಿ ಬೆಳೆ ರಕ್ಷಣೆ ಮಾಡುವಂತೆ ವಳೆಗೆರೆಹಳ್ಳಿ ರೈತರ ಪ್ರತಿಭಟನೆ

| Published : Nov 21 2025, 02:00 AM IST

ನಾಲೆಗೆ ನೀರು ಹರಿಸಿ ಬೆಳೆ ರಕ್ಷಣೆ ಮಾಡುವಂತೆ ವಳೆಗೆರೆಹಳ್ಳಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

20ನೇ ಸೀಳುನಾಲೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಹರಿಯದ ಕಾರಣ ಸುಮಾರು 200 ಎಕರೆ ಪ್ರದೇಶದಲ್ಲಿ ಬೆಳೆಯಲಾದ ತೆನೆ ಭರಿತ ಭತ್ತ ಮತ್ತು ಕಬ್ಬು ಒಣಗುವ ಹಂತಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರು: ವಿ.ಸಿ.ನಾಲಾ ವ್ಯಾಪ್ತಿಯ 20ನೇ ಸೀಳು ನಾಲೆ ಮೂಲಕ ನೀರು ಹರಿಸಿ, ಬೆಳೆ ರಕ್ಷಣೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ವಳೆಗೆರೆಹಳ್ಳಿ ರೈತರು ಬುಧವಾರ ಪಟ್ಟಣದ ವಿ.ಸಿ.ನಾಲಾ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವಿ.ಎನ್.ವಿನಯ್ ಕುಮಾರ್ ನೇತೃತ್ವದಲ್ಲಿ ಆಗಮಿಸಿದ್ದ ರೈತರ ಗುಂಪು ಕಾವೇರಿ ನೀರಾವರಿ ನಿಗಮದ ಕಚೇರಿಗೆ ನುಗ್ಗಿ ಎಇಇ ಎಸ್.ಎನ್.ನಾಗರಾಜು ಅವರನ್ನು ತರಾಟೆಗೆ ತೆಗೆದುಕೊಂಡರು.

20ನೇ ಸೀಳುನಾಲೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಹರಿಯದ ಕಾರಣ ಸುಮಾರು 200 ಎಕರೆ ಪ್ರದೇಶದಲ್ಲಿ ಬೆಳೆಯಲಾದ ತೆನೆ ಭರಿತ ಭತ್ತ ಮತ್ತು ಕಬ್ಬು ಒಣಗುವ ಹಂತಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ನಿಗಮದ ಅಧಿಕಾರಿಗಳು ಹಗಲು ವೇಳೆ ನಾಲೆಗಳಲ್ಲಿ ನೀರು ಹರಿಸದೆ ರಾತ್ರಿ ವೇಳೆ ಹರಿಸುತ್ತಿದ್ದಾರೆ. ಇದರಿಂದ ಗ್ರಾಮದ ಸುತ್ತಮುತ್ತ ಚಿರತೆ ಹಾವಳಿಯಿಂದ ರೈತರು ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ನಡೆಸಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳು ಹಗಲು ವೇಳೆ ನಾಲೆಯಲ್ಲಿ ನೀರು ಹರಿಸಲು ಕ್ರಮ ವಹಿಸಬೇಕು ಎಂದು ರೈತರು ಆಗ್ರಪಡಿಸಿದರು.

ನಂತರ ರೈತರೊಂದಿಗೆ ಮಾತುಕತೆ ನಡೆಸಿದ ನಿಗಮದ ಅಧಿಕಾರಿ ನಾಗರಾಜು, ಮುಂದಿನ ಎರಡು ದಿನಗಳಲ್ಲಿ 20ನೇ ಸೀಳು ನಾಲೆ ಮೂಲಕ ಜಮೀನುಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಉಮೇಶ್. ಯುವ ಮುಖಂಡ ಮಧುಕುಮಾರ್, ಕೃಷ್ಣ, ರಮೇಶ್, ಶ್ರೀನಿವಾಸ್, ಕೃಷ್ಣ ಮತ್ತಿತರರು ಭಾಗವಹಿಸಿದ್ದರು.