ಸಾರಾಂಶ
ಯಾದಗಿರಿ: ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ಡಿಎಪಿ, ಯೂರಿಯಾ ರಸಗೊಬ್ಬರ ಪೂರೈಸಬೇಕು, ರಸಗೊಬ್ಬರಕ್ಕೆ ಹೆಚ್ಚಿನ ದರ ಕೇಳುವ ಹಾಗೂ ರಸಗೊಬ್ಬರ ಜೊತೆ ಮತ್ತೊಂದು ಪಡೆಯುವಂತೆ (ಲಿಂಕ್) ಕಡ್ಡಾಯಗೊಳಿಸಿದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ಸಮರ್ಪಕ ವಿದ್ಯುತ್, ಟ್ರಾನ್ಸಪಾರ್ಮರ್ ಮತ್ತು ನೀರು ಹರಿಯುವ ವೇಳೆ ಕಾಲುವೆಗಳ ಸ್ವಚ್ಛತೆಗೆ ಮುಂದಾಗಿರುವ ಅಧಿಕಾರಿಗಳ ಕ್ರಮ ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಯಾದಗಿರಿ ಜಿಲ್ಲಾಧ್ಯಕ್ಷ ಮಹೇಶ ಸುಬೇದಾರ್ ನೇತೃತ್ವದಲ್ಲಿ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿ ಮಾತನಾಡಿ, ಡಿಎಪಿ, ಕಾಂಪ್ಲೆಕ್ಸ್ ರಸಗೊಬ್ಬರ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅನೇಕ ಕಡೆಗಳಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೆಳೆದು ನಿಂತಿರುವ ಹತ್ತಿ, ತೊಗರಿ, ಭತ್ತ ಮುಂತಾದ ಬೆಳೆಗಳಿಗೆ ಸಕಾಲಕ್ಕೆ ರಸಗೊಬ್ಬರ ಸಿಗದೆ ಬೆಳೆಹಾನಿಯ ಆತಂಕದಲ್ಲಿದ್ದಾರೆ. ಸರ್ಕಾರ ಮತ್ತು ಆಡಳಿತ ಮಧ್ಯಸ್ಥಿಕೆ ವಹಿಸಿ, ಕೂಡಲೇ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರ ಪೂರೈಸಬೇಕು ಎಂದರು.ಎಂಆರ್ಪಿ ದರದಲ್ಲಿ ರಸಗೊಬ್ಬರ ನೀಡದ ಕೆಲವೊಂದು ಅಂಗಡಿಗಳು ಹೆಚ್ಚಿನ ದರಕ್ಕೆ ನೀಡುತ್ತಿದ್ದಾರೆ. ಪ್ರಶ್ನಿಸಿದರೆ ದಾಸ್ತಾನು ಇಲ್ಲ ಎಂದು ವಾಪಸ್ ಸಾಗ ಹಾಕುತ್ತಿದ್ದಾರೆ. ಡಿಎಪಿ ಯೂರಿಯಾ ಜತೆ ಕ್ರಿಮಿನಾಶಕ ಅಥವಾ ಮತ್ತಿತರೆ ಮತ್ತೊಂದು ಪಡೆಯುವಂತೆ ರೈತರಿಗೆ ಒತ್ತಡ ಹೇರಲಾಗುತ್ತಿದೆ. ಇದೇ ಸಮಯವನ್ನು ಬಳಸಿಕೊಂಡು ದಂಧೆಕೋರರು ನಕಲಿ ರಸಗೊಬ್ಬರದ ಸೃಷ್ಟಿಸಿ, ರೈತರ ಮೋಸಕ್ಕೆ ಮುಂದಾಗಿದ್ದಾರೆ ಎಂದು ಮಹೇಶ ಸುಬೇದಾರ್ ಹೇಳಿದರು.
ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವರು, ರಾಜ್ಯ ಸರ್ಕಾರದ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.