ಸಾರಾಂಶ
ಪ್ರಮಾಣಪತ್ರ ವಿತರಣೆ । ನಬಾರ್ಡ್ ಪ್ರಾಯೋಜಿತ ಸಾವಯವ ಅರಿಶಿಣ ಬೇಸಾಯ ಪ್ರಾತ್ಯಕ್ಷಿಕೆ ಯೋಜನೆ
ಕನ್ನಡಪ್ರಭ ವಾರ್ತೆ ಚಾಮರಾಜನಗರರೈತರ ಆದಾಯ ಹೆಚ್ಚಿಸುವಲ್ಲಿ ಸಾವಯವ ಕೃಷಿಯ ಅವಶ್ಯಕತೆ ಇದೆ ಎಂದು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿ. ಸುರೇಶ್ ತಿಳಿಸಿದರು.
ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಹರದನಹಳ್ಳಿ ಫಾರಂನಲ್ಲಿ ನಬಾರ್ಡ್ ಸಹಯೋಗದೊಂದಿಗೆ ಅನುಷ್ಠಾನಗೊಳಿಸಿರುವ ಸಾವಯವ ಅರಿಶಿಣ ಬೇಸಾಯ ಯೋಜನೆಯಡಿ ಜಿಲ್ಲೆಯ ಆಯ್ದ ಸಾವಯವ ಅರಿಶಿಣ ಬೆಳೆಗಾರರಿಗೆ ಸಾವಯವ ಪ್ರಮಾಣಪತ್ರವನ್ನು ವಿತರಿಸಿ ಅವರು ಮಾತನಾಡಿದರು.ಹಸಿರು ಕ್ರಾಂತಿಯ ನಂತರ ಕೃಷಿ ಕ್ಷೇತ್ರದಲ್ಲಿ ಉಂಟಾದ ಬೆಳವಣಿಗೆಗಳು, ಗುಣಮಟ್ಟದ ಉತ್ಪಾದನೆ ಹಾಗೂ ರೈತರ ಆದಾಯ ಹೆಚ್ಚಿಸುವಲ್ಲಿ ಸಾವಯವ ಕೃಷಿಯ ಅವಶ್ಯಕತೆ ಮತ್ತು ಸಾವಯವ ಪ್ರಮಾಣೀಕರಣದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಾಗ ಪರಿವರ್ತನೆ ಸಮಯದಲ್ಲಿ ಇಳುವರಿ ಮತ್ತು ಆದಾಯವನ್ನು ಸರಿದೂಗಿಸಿಕೊಳ್ಳಲು ಈ ರೀತಿಯ ಪ್ರೋತ್ಸಾಹದಾಯಕ ಯೋಜನೆಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಯಾಗಲು ಪೂರಕವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ಇದಕ್ಕೆ ಸೂಕ್ತವಾಗಿ ಸಾವಯವ ಕೃಷಿಯು ಸ್ಪಂದಿಸುವುದು ಎಂದು ತಿಳಿಸಿ ರೈತರನ್ನು ಸಾವಯವ ಕೃಷಿ ಅಳವಡಿಕೆಗೆ ಉತ್ತೇಜಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಯೋಗೇಶ್ ಜಿ.ಎಸ್. ಪ್ರತಿ ತಿಂಗಳ ಕೊನೆಯ ಶನಿವಾರ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರಿನ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸಂಸ್ಕರಿಸಿದ ಪದಾರ್ಥಗಳು, ಯಂತ್ರೋಪಕರಣಗಳು, ತಾಂತ್ರಿಕತೆಗಳು, ತಾಂತ್ರಿಕ ಉತ್ಪನ್ನಗಳು ಮತ್ತು ರೈತ ಉತ್ಪಾದಕ ಸಂಸ್ಥೆ ಹಾಗೂ ರೈತರು ಬೆಳೆದ ಉತ್ಪನ್ನಗಳ ಸಂತೆಯನ್ನು ಆಯೋಜಿಸಲಾಗುತ್ತಿದ್ದು, ಇದು ಕೃಷಿ ವಿಶ್ವವಿದ್ಯಾಲಯ ರೈತರಿಗೆ ಕಲ್ಪಿಸಿರುವ ಒಂದು ಉತ್ತಮವಾದ ಮಾರುಕಟ್ಟೆ ಆಯಾಮ, ಜಿಲ್ಲೆಯ ರೈತರು ಕೃಷಿ ವಿಜ್ಞಾನ ಕೇಂದ್ರದ ಮುಖಾಂತರ ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಸಲಹೆಗಳ ಆಧಾರದ ಮೇಲೆ ಸಾವಯವ ಅರಿಶಿಣ ಬೆಳೆಯುತ್ತಿರುವ ಆಯ್ದ ಬೆಳೆಗಾರರಿಗೆ ಸಾವಯವ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಯೋಜನೆಯ ಪ್ರಧಾನ ಪರಿಶೋಧಕ ಹಾಗೂ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ಮೋಹನ್‌ಕುಮಾರ್ ಎ.ಬಿ. ಯೋಜನೆಯ ರೂಪುರೇಷೆಗಳು ಮತ್ತು ಯೋಜನೆಯಡಿ ಕೈಗೊಳ್ಳುವ ವಿವಿಧ ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮಗಳು ಮತ್ತು ಪ್ರಾತ್ಯಕ್ಷಿಕೆಗಳ ಹಂತವಾರು ಅನುಷ್ಠಾನದ ವಿವರಣೆ ನೀಡಿದರು.ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಉಡಿಗಾಲ ರೈತ ಉತ್ಪಾದಕರ ಸಂಸ್ಥೆಯ ಶಿವರುದ್ರಪ್ಪ, ಪ್ರಗತಿಪರ ಸಾವಯವ ಕೃಷಿಕರಾದ ನಟರಾಜು ಬಂದಿಗೌಡನಹಳ್ಳಿ, ಶಶಿಕುಮಾರ್ ದೊಡ್ಡತುತ್ತೂರು, ವಿ.ಸಿ.ಹೊಸೂರಿನ ಯೋಗೇಶ್ ಮತ್ತು ಇತರ ರೈತರು ಭಾಗವಹಿಸಿದ್ದರು.ಸಾವಯವ ಕೃಷಿ ತಂತ್ರಜ್ಞಾನ ಪರಿಕರಗಳಾದ ಬೇವಿನ ಉತ್ಪನ್ನಗಳು, ಜೈವಿಕ ಪೀಡೆನಾಶಕಗಳು, ಅಂಟುಬಲೆಗಳು, ತ್ಯಾಜ್ಯ ವಿಘಟಕ ಸೂಕ್ಷ್ಮಜೀವಿ ಸಮೂಹಗಳ ಒಂದು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹಿತ ಜಿ., ಸುವರ್ಣ, ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ, ವಿ.ಸಿ.ಫಾರಂ ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್, ಕೃಷಿ ಮಹಾವಿದ್ಯಾಲಯ ಚಾಮರಾಜನಗರದ ವಿಶೇಷ ಅಧಿಕಾರಿ ಡಾ.ಸಿ.ದೊರೆಸ್ವಾಮಿ ಇದ್ದರು.