ಕೃಷಿಯಲ್ಲಿ ರೈತರ ಆದಾಯವನ್ನು ದ್ವಿಗುಣ ಗೊಳಿಸಲು ಸಾಕಷ್ಟು ಅವಕಾಶಗಳಿದ್ದು, ಅವುಗಳಲ್ಲಿ ಬೀಜೋತ್ಪಾದನೆಯು ಪ್ರಮುಖವಾಗಿದ್ದು, ಇದರಿಂದ ರೈತರ ಆದಾಯ ಬಲವೂ ಹೆಚ್ಚಳವಾಗಲಿದೆ ಎಂದು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಹನುಮಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಕೃಷಿಯಲ್ಲಿ ರೈತರ ಆದಾಯವನ್ನು ದ್ವಿಗುಣ ಗೊಳಿಸಲು ಸಾಕಷ್ಟು ಅವಕಾಶಗಳಿದ್ದು, ಅವುಗಳಲ್ಲಿ ಬೀಜೋತ್ಪಾದನೆಯು ಪ್ರಮುಖವಾಗಿದ್ದು, ಇದರಿಂದ ರೈತರ ಆದಾಯ ಬಲವೂ ಹೆಚ್ಚಳವಾಗಲಿದೆ ಎಂದು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಹನುಮಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ವಿವಿ ಆವರಣದಲ್ಲಿ ಇರುವ ಐಸಿಎಆರ್ - ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತ ಸಂಯೋಜಿತ ಬೀಜ ಸಂಶೋಧನಾ ಯೋಜನೆ, ಬೀಜ ಘಟಕ ಮತ್ತು ಐಸಿಎಆರ್ - ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿಂಗಾರು ಬೀಜ ದಿನೋತ್ಸವವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಯ ಬೀಜ ಘಟಕವು ರೈತರಿಗೆ ಅನುಕೂಲಕರವಾದ ಹತ್ತು ಹಲವಾರು ಕೆಲಸಗಳನ್ನು ನಿರಂತರವಾಗಿ ಮಾಡುತಿದೆ. ಸುಸ್ಥಿರ ಕೃಷಿಯಲ್ಲಿ ಗುಣಮಟ್ಟ ಬೀಜದ ಬಳಕೆ,ಬೀಜೋತ್ಪಾದನೆ, ಕೃಷಿ ಉದ್ದಿಮೆ, ಅಧಿಕ ಲಾಭದ ಕುರಿತಾದ ಸಂಗತಿಗಳನ್ನು ರೈತರು ಅರಿತು ಕೊಳ್ಳಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಕೃಷಿ ವಿವಿ ರೈತರ ಅನುಕೂಲಕ್ಕೆ ತಕ್ಕಂತೆ ಹೊಸ ಸಂಶೋಧನಾ ಯೋಜನೆಗಳ ರೂಪಿಸಿ, ಅನುಷ್ಠಾನಕ್ಕೆ ತರಲಾಗುವುದು ಎಂದರು.
ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎ.ಆರ್.ಕುರುಬರ್ ಮಾತನಾಡಿ, ಬೀಜೋತ್ಪಾದನೆ ಶ್ರೇಷ್ಟ ಕಾಯಕವಾಗಿದ್ದು, ಕೃಷಿಯಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಹತ್ವವನ್ನು ತಿಳಿದುಕೊಳ್ಳಲು ಕೃಷಿಗೆ ಸಂಬಂಧಿತ ಕಾರ್ಯಕ್ರಮಗಳಲ್ಲಿ ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಕೃಷಿ ವಿವಿ (ಬೀಜ) ವಿಶೇಷಾಧಿಕಾರಿ ಡಾ.ಅರುಣ ಕುಮಾರ ಹೊಸಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೃಷಿ ಮಹಾವಿದ್ಯಾಲಯದ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಎನ್.ಎಮ್.ಶಕುಂತಲಾ ಮಾತನಾಡಿದರು. ಅಧ್ಯಕ್ಷತೆಯನ್ನು ವಿವಿ ಸಂಶೋಧನಾ ನಿರ್ದೇಶಕ ಡಾ.ಪ್ರಭುರಾಜ್ ಎ. ಅವರು ವಹಿಸಿದ್ದರು. ಇದೇ ವೇಳೆ ಮೆಕ್ಕೆಜೋಳ ಸಂಕರಣ ತಳಿ ಆರ್.ಸಿ.ಆರ್.ಎಂ.ಹೆಚ್-4 ಬೀಜೋತ್ಪಾದನೆಯಲ್ಲಿ ಅಧಿಕ ಇಳುವರಿ ಪಡೆದಿದ್ದಕ್ಕಾಗಿ ರೈತ ಲಕ್ಷ್ಮೀಕಾಂತ ರೆಡ್ಡಿ ದಿನ್ನಿ ಇವರನ್ನು ಉತ್ತಮ ಬೀಜ ಬೆಳೆಗಾರರೆಂದು ಗೌರವಿಸಿ ಸನ್ಮಾನಿಸಲಾಯಿತು.ನಂತರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ವಿಜ್ಞಾನಿಗಳು ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ.ಬಸವಣೆಪ್ಪ ಎಂ., ಕೆವಿಕೆ ಮುಖ್ಯಸ್ಥ ಡಾ.ತಿಮ್ಮಣ್ಣ, ಕರ್ನಾಟಕ ರಾಜ್ಯ ಬೀಜ ನಿಗಮ ಉಪ ವ್ಯವಸ್ಥಾಪಕ ಪ್ರಭು ತುರಾಯಿ,ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಉಪ ನಿರ್ದೇಶಕಿ ಗೀತಾ, ರಾಷ್ಟ್ರೀಯ ಬೀಜ ನಿಗಮದ ಕ್ಷೇತ್ರ ವ್ಯವಸ್ಥಾಪಕ ಯೋಗೆಶ್ ಠಾಣೆ ಸೇರಿ ಬೀಜ ಘಟಕ,ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಗೂ ವಿವಿಧ ಬೀಜೋತ್ಪಾದನಾ ಸಂಸ್ಥೆಗಳ ಬೀಜೋ ತ್ಪಾದನಾ ಅಧಿಕಾರಿ,ಸಿಬ್ಬಂದಿ ವರ್ಗ,ಜಿಲ್ಲೆಯ ವಿವಿಧ ಗ್ರಾಮಗಳಿಂದ ಸುಮಾರು 350 ಅಧಿಕ ರೈತರು ಭಾಗವಹಿಸಿದ್ದರು. ಬೀಜ ಘಟಕದ ಡಾ.ಉಮೇಶ್ ಹಿರೇ ಮಠ, ಮಾನಸ ಎಂ. ಡಾ.ಮೇಘಾ ಬಿ. ನಿರ್ವಹಿಸಿದರು.