ಸಾರಾಂಶ
ಕೊಪ್ಪಳ: ರೈತರ ಆದಾಯ ವೃದ್ಧಿಗಾಗಿ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆ ಜಾರಿ ಮಾಡಿದ್ದು, ಈಗ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕ ಸ್ಥಾಪಿಸಲಾಗುತ್ತಿದ್ದು, ಇದರಿಂದ ರೈತರ ಆದಾಯ ವೃದ್ಧಿಯಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದ ಬಳಿ ನಬಾರ್ಡ್ ಸಹಾಯಧನ ಮತ್ತು ಸಂಸದರ ನಿಧಿಯಲ್ಲಿ ಸುಮಾರು ₹5.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕೃಷಿ ಸಂಸ್ಕರಣಾ ಘಟಕ ಮತ್ತು ತರಬೇತಿ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದರು.ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದು ಇಂದಿನ ದಿನಮಾನಗಳಲ್ಲಿ ಅನಿವಾರ್ಯವಾಗಿದೆ. ಜಾಗತಿಕ ಪೈಪೋಟಿ ಎದುರಿಸಲು ಸ್ಥಳೀಯ ಉತ್ಪಾದನೆಯನ್ನೇ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸುವ ಅಗತ್ಯವಿದೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಸಹ ಆಶಯಪಡುತ್ತಿದ್ದಾರೆ.
ದೇಶದಲ್ಲಿನ ರೈತರ ಆದಾಯ ವೃದ್ಧಿಗಾಗಿ ಈಗ ಧನ್ ಧಾನ್ಯ ಯೋಜನೆ ಘೋಷಣೆ ಮಾಡಿದ್ದು, ದೇಶದಾದ್ಯಂತ 100 ಜಿಲ್ಲೆಗಳನ್ನು ಇದರ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯೂ ಒಂದು ಎಂದರು.ಈ ಯೋಜನೆಗಾಗಿ ಕೇಂದ್ರ ಸರ್ಕಾರ ಬರೋಬ್ಬರಿ ₹24 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ರೈತರ ಉತ್ಪನ್ನ ಉನ್ನತ ದರ್ಜೆಗೇರಿಸುವ ಹಲವಾರು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿಯೂ ಇದೆ, ಮಳೆಯಾಶ್ರಿತ ಪ್ರದೇಶವೂ ಇದೆ. ಕೃಷಿ ವಲಯದಲ್ಲಿ ಕೊಪ್ಪಳ ಅಕ್ಷಯಪಾತ್ರೆ ಇದ್ದಂತೆ ಎಂದರು.ತೋಟಗಾರಿಕಾ ಉತ್ಪಾದನೆಯ 100 ಯೂನಿಟ್ ನಲ್ಲಿ ಕೊಪ್ಪಳ ಜಿಲ್ಲೆಯ ಕೊಡುಗೆ 10 ಯುನಿಟ್ ಇದೆ ಎಂದರೆ ಸುಮ್ಮನೇ ಅಲ್ಲ. ಇಲ್ಲಿ ವಿಪುಲ ಅವಕಾಶಗಳು ಇವೆ ಎನ್ನುವ ಕಾರಣಕ್ಕಾಗಿಯೇ ಇಂಥ ಯೋಜನೆ ಜಾರಿ ಮಾಡಲಾಗಿದೆ ಎಂದರು.
ಈ ಭಾಗದ ಪೂರ್ವಜರು ಅತ್ಯುತ್ತಮವಾಗಿ ಬೆಳೆಯುತ್ತಿದ್ದರು. ಈಗಲೂ ಅದು ಮುಂದುವರೆದಿದೆ. ಅದನ್ನು ಮೌಲ್ಯವರ್ಧನೆ ಮಾಡಿ ಅದಕ್ಕೆ ಉತ್ತಮ ಮಾರುಕಟ್ಟೆ ಒದಗಿಸಿದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು.ಇಲ್ಲಿಯ ಜನರು ಗುಳೆ ಹೋಗುವುದನ್ನು ತಪ್ಪಿಸುವ ಅಗತ್ಯವಿದ್ದು, ಇಂಥ ಯೋಜನೆಗಳಿಂದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯುತ್ತದೆ ಮತ್ತು ಕಾರ್ಮಿಕರಿಗೆ ಕೆಲಸವೂ ದೊರೆಯುತ್ತದೆ ಎಂದರು.
ರಾಜ್ಯದ 43 ಲಕ್ಷ ರೈತರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ವಾರ್ಷಿಕ ₹6 ಸಾವಿರ ತಲುಪುತ್ತದೆ. ಈಗ ಜಿಎಸ್ಟಿ ಇಳಿಕೆ ಮಾಡಲಾಗಿದ್ದು, ಅದರಲ್ಲೂ ಕೃಷಿ ಸಂಬಂಧಿತ ಜಿಎಸ್ ಟಿಯನ್ನು ಶೇ. 5 ಕ್ಕೆ ಇಳಿಸಲಾಗಿರುವುದು ರೈತರಿಗೆ ಅನುಕೂಲವಾಗಿದೆ ಎಂದರು.ಧನ್ ಧಾನ್ಯ ಯೋಜನೆ ಅಡಿಯಲ್ಲಿ ಫರ್ ಡ್ರಾಪ್ ಮೋರ್ ಕ್ರಾಫ್ ಎನ್ನುವ ನೂತನ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ ಎಂದರು.
ಕೊಪ್ಪಳ ಕುರಿತು ಮೆಚ್ಚುಗೆ: ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಅವರು ಅಂಜನಾದ್ರಿಯ ಆಂಜನೇಯ, ಕಿನ್ನಾಳ ಕಲೆ ಹಾಗೂ ಇಲ್ಲಿ ಐತಿಹಾಸಿಕ ಪರಂಪರೆ ಸ್ಮರಿಸಿದರು. ಈಗಾಗಲೇ ಕೊಪ್ಪಳದಲ್ಲಿ ತೋಟಗಾರಿಕಾ ಬೆಳೆಯ ಕ್ರಾಂತಿಯ ಕುರಿತು ಸಹ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೊಪ್ಪಳವನ್ನು ಅಕ್ಷಯ ಪಾತ್ರೆಯೆಂದು ಸಹ ಕರೆದರು. ತಮ್ಮ ಭಾಷಣದುದ್ದಕ್ಕೂ ಹಿಂದಿಯಲ್ಲಿ ಮಾತನಾಡಿದರು, ಮಧ್ಯೆ ಮಧ್ಯೆ ಪ್ರಮುಖ ವಿಷಯಗಳನ್ನು ಕನ್ನಡದಲ್ಲಿಯೂ ಹೇಳಿದರು. ಹೀಗೆ ಕನ್ನಡದಲ್ಲಿ ಮಾತನಾಡುತ್ತಿದ್ದಂತ ನೆರೆದಿದ್ದವರು ಕೇಕೇ, ಸಿಳ್ಳೆ ಹಾಕುತ್ತಿದ್ದರು.ಗಂಗಾವತಿ ಶಾಸಕ ಜನಾರ್ದನರೆಡ್ಡಿ ವಂದನಾರ್ಪಣೆ ಮಾಡಿ ಮಾತನಾಡಿ, ಕೊಪ್ಪಳ ಜಿಲ್ಲೆಯ ಹಿರಿಮೆ ಹೇಳಿದರಲ್ಲದೆ ಅಂಜನಾದ್ರಿಯ ಅಭಿವೃದ್ಧಿಗೆ ₹1350 ಕೋಟಿ ಪ್ರಸ್ತಾವನೆ ಕಳುಹಿಸಿ ಕೊಡಲಾಗುವುದು, ತಾವು ಅನುಮೋದನೆ ಮಾಡಬೇಕು ಎಂದು ಹೇಳಿದರು. ಇದಕ್ಕೆ ವೇದಿಕೆಯಲ್ಲಿದ್ದ ನಿರ್ಮಲಾ ಸೀತಾರಾಮನ್ ಅವರು ತಲೆಯಲ್ಲಾಡಿಸಿ ಸಮ್ಮತಿ ಸೂಚಿಸಿದರು.
ಸಮಾಧಾನ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕೊಪ್ಪಳ ಜಿಲ್ಲೆಗೆ ಆಗಮಿಸುವ ಕುರಿತು ಬಿಜೆಪಿ ನಾಯಕರಿಗೆ ಮಾಹಿತಿಯೇ ನೀಡಿಲ್ಲ. ಅಚ್ಚರಿ ಎಂದರೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರನ್ನು ಅಹ್ವಾನ ಮಾಡಿಲ್ಲ. ಇವರೇ ವಿಷಯ ತಿಳಿದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದು ಬಿಜೆಪಿ ಪಾಳೆಯದಲ್ಲಿ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಗ್ರಾಪಂ ಅಧ್ಯಕ್ಷೆ ಅಂಬಮ್ಮ ಶ್ರೀಕಂಠ ಹುಲಸನಕಟ್ಟಿ, ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ವಿಶಾಲ ಆರ್.,ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ.ಸೇರಿದಂತೆ ಅನೇಕರು ಇದ್ದರು.