ಫಕ್ರುದ್ದೀನ ಎಂ ಎನ್

ನವಲಗುಂದ:

ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಬೆಳೆನಷ್ಟ ಅನುಭವಿಸಿದ ಬಹುತೇಕ ರೈತರಿಗೆ ಬೆಳೆಹಾನಿ ಪರಿಹಾರ ಬಾರದೇ ತಾಲೂಕು ಕಚೇರಿಗೆ ಅಲೆಯುವಂತಾಗಿದೆ. ಖುಷ್ಕಿ, ನೀರಾವರಿ ಪ್ರದೇಶದಲ್ಲಿ ಕಂದಾಯ, ಕೃಷಿ ಅಧಿಕಾರಿಗಳು ಜಂಟಿ ಬೆಳೆ ಸಮೀಕ್ಷೆ ನಡೆಸಿ 25,217 ರೈತರ ಬೆಳೆನಷ್ಟವಾಗಿದೆ ಎಂದು ತಾಲೂಕು ಆಡಳಿತಕ್ಕೆ ವರದಿ ನೀಡಲಾಗಿತ್ತು. ಅದರಲ್ಲಿ 19,784 ರೈತರಿಗೆ ಪರಿಹಾರ ಸಿಕ್ಕಿದ್ದು, ಇನ್ನುಳಿದ 5433 ರೈತರು ಪರಿಹಾರಕ್ಕಾಗಿ ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್ ನಿಯಮ ಪ್ರಕಾರದಂತೆ ಖುಷ್ಕಿ ಪ್ರದೇಶ ಒಂದು ಹೆಕ್ಟೇರ್‌ಗೆ ₹ 8500, ನೀರಾವರಿ ಪ್ರದೇಶಕ್ಕೆ ₹17000 ಪರಿಹಾರ ಪೋಷಿಸಿದೆ. ಪಟ್ಟಣ ಸೇರಿದಂತೆ ಮೊರಬ ಹೋಬಳಿ 25,217 ರೈತರ ಜಮೀನುಗಳ ಸಮೀಕ್ಷೆ ಮಾಡಲಾಗಿದೆ. ಪಹಣಿಗೆ ಆಧಾರ್ ಕಾರ್ಡ್ ಲಿಂಕ್, ಎಫ್‌ಐಡಿ, ಎನ್‌ಪಿಐ ಲಿಂಕ್ ಆಗದ ಹಿನ್ನೆಲೆ ಪರಿಹಾರ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.


ಕೆಲವು ಕಂದಾಯ ವಿಎಗಳು ಮತ್ತೊಮ್ಮೆ ಅಗತ್ಯ ದಾಖಲಾತಿ ನೀಡುವಂತೆ ಹೇಳಿದ್ದು, ದಾಖಲಾತಿಯೊಂದಿಗೆ ಕಚೇರಿಗೆ ಹೋದಾಗ ಮೇಲಧಿಕಾರಿಗಳ ಆದೇಶ ಇನ್ನೂ ಬಂದಿಲ್ಲ ಎಂದು ವಾಪಸ್ ಕಳುಹಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಘೋಷಣೆಗೆ ಮಾತ್ರ ಸೀಮಿತ:

ಮಳೆ ಹಾಗೂ ಪ್ರವಾಹದಿಂದಾಗಿ ಬೆಳೆ ಹಾನಿ ಆಗಿರುವ ಕುರಿತು ಸಮೀಕ್ಷೆ ನಡೆಸಿದ್ದ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಶಾಸಕ ಎನ್‌.ಎಚ್‌. ಕೋನರಡ್ಡಿ, ಅಂದಿನ ಜಿಲ್ಲಾಧಿಕಾರಿ ದಿವ್ಯಪ್ರಭು ಎನ್‌ಡಿಆರ್‌ಆಫ್‌ನಂತೆ ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ಪರಿಹಾರ ಘೋಷಿಸಿ 6 ತಿಂಗಳು ಕಳೆದರೂ ಕೆಲ ರೈತರ ಖಾತೆಗೆ ಜಮೆಯಾಗಿಲ್ಲ.

ದೀಪಾವಳಿ ಹಬ್ಬದ ಮುನ್ನವೇ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ನಮ್ಮ ನಿರೀಕ್ಷೆ ಹುಸಿಯಾಗಿದೆ. ʼನುಡಿದಂತೆ ನಡೆಯುತ್ತೇವೆʼ ಎಂದು ಹೇಳುವ ಸರ್ಕಾರ ಶೀಘ್ರದಲ್ಲಿ ರೈತರ ಖಾತೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಪಾವತಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯʼ ಎಂದು ರೈತ ಹೋರಾಟಗಾರ ಸುಭಾಸಚಂದ್ರಗೌಡ ಪಾಟೀಲ ಎಚ್ಚರಿಸಿದ್ದಾರೆ.‌

ತಾರತಮ್ಯವೇಕೆ?

ತಾಲೂಕಿನಾದ್ಯಂತ ಸಮೀಕ್ಷೆ ಕಾರ್ಯ ಸಂಪೂರ್ಣ ಮುಗಿದಿದೆ. ತಾಲೂಕಿನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಹಣ ಜಮೆಯಾಗಿಲ್ಲ. ಈ ವಾರದಲ್ಲಿ ಹಂತ-ಹಂತವಾಗಿ ಎಲ್ಲ ರೈತರ ಖಾತೆಗೆ ಎನ್‌ಡಿಆರ್‌ಎಫ್ ಪರಿಹಾರ ಹಣ ಜಮೆ ಆಗುತ್ತದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಇನ್ನು ಕೆಲವೆಡೆ ನೂರಕ್ಕೆ ನೂರರಷ್ಟು ಬೆಳೆ ಹಾನಿಯಾದರೆ, ಕೆಲವೆಡೆ ಪೂರ್ಣ ಪ್ರಮಾಣದಲ್ಲಿ ಬೆಳೆ ಹಾನಿ ಆಗಿರುವುದಿಲ್ಲ. ಹೀಗಾಗಿ ಪರಿಹಾರ ತಂತ್ರಾಂಶದಲ್ಲಿ ನಮೂದಿಸಿದಂತೆ ಪರಿಹಾರ ಜಮೆಯಾಗುತ್ತದೆ ಹೊರತು ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಪ್ರತಿ ಹೆಕ್ಟೇರ್‌ಗೆ ₹8,500 ಪರಿಹಾರ ಬರುವುದಿಲ್ಲ ಎಂಬುದು ಅಧಿಕಾರಿಗಳು ಹೇಳುತ್ತಿದ್ದಾರೆ.ಬೆಳೆನಷ್ಟ ಪರಿಹಾರದ ಬಗ್ಗೆ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ನೂರಾರು ರೈತರು ವಂಚಿತರಾಗಿದ್ದಾರೆ. 5433 ರೈತರಿಗೆ ಕೂಡಲೇ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು.

ಲೋಕನಾಥ ಹೆಬಸೂರ, ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟಗಾರ 2025ರಲ್ಲಿ ಸುರಿದ ಮಳೆಯಿಂದ ಬೆಳೆ ನಷ್ಟವಾದ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಜಮೆಯಾಗಿದೆ. ಕೆಲ ರೈತರ ದಾಖಲಾತಿ ಸರಿಯಿಲ್ಲದ ಕಾರಣ ಅಂತಹವರಿಗೆ ಹಣ ಬಂದಿಲ್ಲ. ಈ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸುಧೀರ ಸಾಹುಕಾರ, ತಹಸೀಲ್ದಾರ್, ನವಲಗುಂದ