ಸಾರಾಂಶ
ದೇವನಹಳ್ಳಿ: ತಾಲೂಕಿನ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಲೂರು ದುದ್ದನಹಳ್ಳಿ, ಬೀರಸಂದ್ರ, ಸುತ್ತಮುತ್ತಲಿನ ಗ್ರಾಮಗಳ ರೈತರು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳ ಉಳಿವಿಗಾಗಿ ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಬೀರಸಂದ್ರ ಗ್ರಾಮದ ಮುಖಂಡ ಮೋಹನ್ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಖಾಸಗಿ ಶಿಕ್ಷಣ ಸಂಸ್ಥೆಯವರು 10 ಎಕರೆಗೂ ಮೇಲ್ಪಟ್ಟು ಗೋಮಾಳ, ರಾಜಕಾಲುವೆ ಹಾಗು ಸ್ಮಶಾನಕ್ಕೆ ಸೇರಿದ ಜಮೀನು ಕಬಳಿಸಿದ್ದಾರೆ. ರೈತರು ಬಳಸುತ್ತಿದ್ದ ಬಂಡಿ ಜಾಡನ್ನು ಒತ್ತುವರಿ ಮಾಡಿಕೊಂಡಿದ್ದರು ತಾಲೂಕು ಮತ್ತು ಜಿಲ್ಲಾಡಳಿತ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಅಲ್ಲದೆ ಸುಪ್ರೀಂ ಕೋರ್ಟು ಆದೇಶದಂತೆ ಸರ್ಕಾರಿ ರಾಜಕಾಲುವೆ ಒತ್ತುವರಿ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸು ಹಾಕಲು ಅನುಮತಿ ಕೊಟ್ಟಿದ್ದಾರೆ. ಆದರೆ ಇದೂವರೆಗೂ ಏಕೆ ಕ್ರಿಮಿನಲ್ ಕೇಸ್ ಹಾಕಿಲ್ಲ. ಇದಕ್ಕೆಲ್ಲ ಸ್ಥಳೀಯ ಪಂಚಾಯಿತಿಗಳ ಪಿಡಿಒಗಳು ಅಲ್ಲದೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.ಬೀರಸಂದ್ರ ಗ್ರಾಮದ ಸರ್ವೆ ನಂಬರ್ 15ರಲ್ಲಿ ಒಟ್ಟು ಆಕಾರ ಬಂಧು ಪ್ರಕಾರ 59.1 ಎಕರೆ ಜಾಗವಿರುತ್ತದೆ. ಅದರಲ್ಲಿ 23 ಎಕರೆ ಜಮೀನು ರೈತರಿಗೆ ಮಂಜೂರಾಗಿರುತ್ತದೆ. 24 ಎಕರೆ ಪೋಡಿಯಾಗಿರುತ್ತದೆ. ಉಳಿಕೆ 11 ಎಕರೆ ಜಾಗದಲ್ಲಿ ಸ್ಮಶಾನ, ರಾಜಕಾಲುವೆ, ಕಾಲುದಾರಿ ಅಲ್ಲದೆ ಖರಾಬು ಕುಂಟೆ ಜಮೀನುಗಳು ಇವೆ. ಅಲ್ಲದೆ ಐತಿಹಾಸಿಕ ಚಪ್ಪರಕಲ್ಲು ಇದೆ. ಈ ಎಲ್ಲ ಜಮೀನನ್ನು ಕೆಲ ಬಲಾಢ್ಯ ಶಿಕ್ಷಣ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿವೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕು ಇದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಒತ್ತುವರಿ ಮಾಡಿಕೊಂಡಿರುವ ಸ್ಥಳವನ್ನು ತೆರವುಗೊಳಿಸಬೇಕು ಎಂದು ರೈತ ಸಂಘದ ಮುಖಂಡ ಹರೀಶ್ ಒತ್ತಾಯಿಸಿದರು.
ಪ್ರಜಾ ವಿಮೋಚನಾ ಚಳುವಳಿಯ ರಾಜ್ಯಾಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿ, ಹೊರಗಿನ ಜನರು ಇಲ್ಲಿ ಬಂಡವಾಳ ಹಾಕಿ ಮತ್ತೆ ಹಣ ವಸೂಲಿ ಮಾಡುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ನಿಖಿಲ್ ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
(ಫೋಟೋ ಕ್ಯಾಫ್ಷನ್)ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಮುಂದೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನುಗಳ ತೆರವುಗೊಳಿಸುವಂತೆ ಆಗ್ರಹಿಸಿ ಸುತ್ತಮುತ್ತಲ ಹಳ್ಳಿಗಳ ರೈತರು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು.